ಜಿನೀವಾ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಭವಿಷ್ಯದಲ್ಲಿ ಯಾವುದೇ ರೀತಿಯ ನೌಕರಿಗಳನ್ನು ತಾನೇ ಸಂಪೂರ್ಣವಾಗಿ ನಿಭಾಯಿಸಲಾರದು. ಆದರೆ, ಕೆಲ ಮಾದರಿಯ ಉದ್ಯೋಗಗಳನ್ನು ಸ್ವಯಂಚಾಲಿತಗೊಳಿಸುವ ಮೂಲಕ ಆ ಕೆಲಸವನ್ನು ಮಾಡುವ ರೀತಿಯಲ್ಲಿ ಬದಲಾವಣೆ ತರಲಿದೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಒ) ನಡೆಸಿದ ಅಧ್ಯಯನವೊಂದು ತಿಳಿಸಿದೆ. ಆದರೆ ಕಡಿಮೆ ಆದಾಯದ ದೇಶಗಳಲ್ಲಿ ಕೆಲ ಗುಮಾಸ್ತ ರೀತಿಯ ಉದ್ಯೋಗಗಳಿಗೆ (ಕ್ಲರಿಕಲ್ ಕೆಲಸಗಳು) ಮಾತ್ರ ಎಐ ಕುತ್ತು ತರಲಿದೆ ಎಂದು ವರದಿ ಹೇಳಿದೆ.
ಬಹುತೇಕ ನೌಕರಿಗಳು ಮತ್ತು ಉದ್ಯಮಗಳು ಈಗ ಭಾಗಶಃ ಸ್ವಯಂಚಾಲಿತವಾಗಿವೆ. ಆದರೆ ಅವನ್ನು ಚಾಟ್ ಜಿಪಿಟಿಯಂಥ ಎಐ ತಂತ್ರಜ್ಞಾನವು ಸಂಪೂರ್ಣವಾಗಿ ಬದಲಾಯಿಸಲಾರದು ಮತ್ತು ಎಐ ಆ ಕೆಲಸಗಳಿಗೆ ಪೂರಕವಾಗಿ ಕೆಲಸ ಮಾಡಬಹುದು ಎಂದು ಸಂಶೋಧನೆಗಳು ಹೇಳಿವೆ. ಹೀಗಾಗಿ ಈ ತಂತ್ರಜ್ಞಾನದ ಅತಿದೊಡ್ಡ ಪರಿಣಾಮ ಉದ್ಯೋಗ ನಾಶವಲ್ಲ, ಬದಲಿಗೆ ಉದ್ಯೋಗಗಳ ಗುಣಮಟ್ಟದಲ್ಲಿ ಸಂಭಾವ್ಯ ಬದಲಾವಣೆ ಆಗಿರಬಹುದು. ವಿಶೇಷವಾಗಿ ಕೆಲಸದ ವೇಗ ಮತ್ತು ಸ್ವಾಯತ್ತತೆಯಲ್ಲಿ ಬದಲಾವಣೆಯಾಗಬಹುದು.
"ತಂತ್ರಜ್ಞಾನದಿಂದ ಎದುರಾಗಬಹುದಾದ ಪರಿವರ್ತನೆಗಳು ಪೂರ್ವನಿರ್ಧರಿತವಾಗಿಲ್ಲ. ಇಂಥ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾನವರೇ ನಿರ್ಧರಿಸಬೇಕಾಗುತ್ತದೆ ಮತ್ತು ಪರಿವರ್ತನೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಬೇಕಾದವರು ಕೂಡ ಅವರೇ" ಎಂದು ಸಂಶೋಧಕರು ಹೇಳಿದ್ದಾರೆ. ಗುಮಾಸ್ತ ರೀತಿಯ ಕೆಲಸಗಳಲ್ಲಿ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಬಹುದಾಗಿದೆ. ಇಂಥ ಸುಮಾರು ಕಾಲು ಭಾಗದಷ್ಟು ಉದ್ಯೋಗಗಳು ಎಐ ತಂತ್ರಜ್ಞಾನದಿಂದ ಸಂಪೂರ್ಣವಾಗಿ ಮತ್ತು ಅರ್ಧಕ್ಕಿಂತ ಹೆಚ್ಚು ಉದ್ಯೋಗಗಳು ಮಧ್ಯಮ ಪ್ರಮಾಣದಲ್ಲಿ ಪ್ರಭಾವಿತವಾಗಬಹುದು.