ಹಾಂಕಾಂಗ್ : ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನಗಳು ಸುಮಾರು 8 ಲಕ್ಷ ಉದ್ಯೋಗಗಳನ್ನು ಅಥವಾ 2028 ರ ವೇಳೆಗೆ ಹಾಂಕಾಂಗ್‌ನಲ್ಲಿನ ಒಟ್ಟು ಉದ್ಯೋಗಿಗಳ ಶೇಕಡಾ 25 ರಷ್ಟು ಉದ್ಯೋಗಗಳನ್ನು ಕಸಿದುಕೊಳ್ಳಲಿವೆ ಎಂದು ಅಧ್ಯಯನವೊಂದು ಮುನ್ಸೂಚನೆ ನೀಡಿದೆ. ಐಟಿ ನೇಮಕಾತಿ ಸಂಸ್ಥೆ ವೆಂಚುರೆನಿಕ್ಸ್‌ನ ವರದಿಯ ಪ್ರಕಾರ ಡೇಟಾ ಎಂಟ್ರಿ ಕ್ಲರ್ಕ್‌ಗಳು, ಆಡಳಿತ ಸಿಬ್ಬಂದಿ ಮತ್ತು ಗ್ರಾಹಕ ಸೇವಾ ಪ್ರತಿನಿಧಿಗಳು AI ನಿಂದ ಹೆಚ್ಚು ಪ್ರಭಾವಿತರಾಗಲಿದ್ದಾರೆ. ವಕೀಲರು ಮತ್ತು ಭಾಷಾಂತರಕಾರರಂತಹ ವೈವಿಧ್ಯಮಯ ವೃತ್ತಿಗಳ ಮೇಲೆ AI ಬೀರಬಹುದಾದ ಪರಿಣಾಮದ ಬಗ್ಗೆ ವರದಿಯು ಹೈಲೈಟ್ ಮಾಡಿದೆ.
"AI ಅಪ್ಲಿಕೇಶನ್‌ಗಳು ವಿವಿಧ ಉದ್ಯಮಗಳಲ್ಲಿ ಸೇರಿಕೊಳ್ಳುವುದರಿಂದ ವಕೀಲರು ಮತ್ತು ಭಾಷಾಂತರಕಾರರಂತಹ ಸಾಂಪ್ರದಾಯಿಕ ಹೆಚ್ಚು ಪಾವತಿಸುವ ವೃತ್ತಿಗಳ ಮೇಲೆ ಪರಿಣಾಮವಾಗಲಿದೆ" ಎಂದು ಅಧ್ಯಯನವು ಹೇಳಿದೆ. "ಇಲಸ್ಟ್ರೇಟರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು" ಎಂದು ವರದಿ ತಿಳಿಸಿದೆ. ಚಾಟ್ ಜಿಪಿಟಿಯ ಜನಪ್ರಿಯತೆಯ ಕಾರಣದಿಂದ ಬೃಹತ್ ಸಂಖ್ಯೆಯಲ್ಲಿ ಉದ್ಯೋಗ ಕಡಿತವಾಗುವ ಸಾಧ್ಯತೆಗಳು ಎದುರಾಗಿವೆ.
ಈ ಹಿಂದೆ ಯಾವುದೇ ಐಟಿ ಅನುಭವವಿಲ್ಲದೇ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಈಗ ಚಾಟ್ ಜಿಪಿಟಿ ಬಗ್ಗೆ ತರಬೇತಿ ಪಡೆಯಬೇಕೆಂದು ಹಲವಾರು ಹಾಂಕಾಂಗ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸೂಚಿಸಿವೆ. ಜಾಗತಿಕ ಹೂಡಿಕೆ ಬ್ಯಾಂಕ್ ಗೋಲ್ಡ್‌ಮನ್ ಸ್ಯಾಕ್ಸ್ ಪ್ರಕಾರ ಭವಿಷ್ಯದಲ್ಲಿ ಜಾಗತಿಕವಾಗಿ ಸುಮಾರು 300 ಮಿಲಿಯನ್ ಉದ್ಯೋಗಗಳು AI ಗೆ ಬಲಿಯಾಗಬಹುದು.