ಟ್ವಿಟರ್ (ಈಗಿನ ಎಕ್ಸ್) ಮಾಜಿ ಸಹ ಸಂಸ್ಥಾಪಕರಾದ ಜಾಕ್ ಡಾರ್ಸೆ ಇದೀಗ ತಾವೇ 2009ರಲ್ಲಿ ಹುಟ್ಟು ಹಾಕಿದ್ದ ಫಿನ್ಟೆಕ್ ಸಂಸ್ಥೆ ಬ್ಲಾಕ್ ಕಂಪನಿ (ಈ ಹಿಂದೆ ಸ್ಕ್ವೇರ್) ಮುಖ್ಯಸ್ಥ ಮತ್ತು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
2009ರಲ್ಲಿ ಸ್ಕ್ವೇರ್ ಎಂಬ ಹೆಸರಿನಲ್ಲಿ ಪೇಮೆಂಟ್ ಸಂಸ್ಥೆಯನ್ನು ಆರಂಭಿಸಿದ್ದ ಡಾರ್ಸೆ, ಸಂಸ್ಥೆಯ ಸಿಇಒ, ಅಧ್ಯಕ್ಷ ಮತ್ತು ಮುಖ್ಯಸ್ಥರಾಗಿದ್ದರು. ಇದೀಗ ಅವರು, ತತ್ಕ್ಷಣದಿಂದ ಹೆಡ್ ಮತ್ತು ಚೇರ್ಪರ್ಸನ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇದು ತಾತ್ಕಾಲಿಕವೇ ಅಥವಾ ಇವರೇ ಈ ಸ್ಥಾನದಲ್ಲಿ ಮುಂದುವರೆಯುತ್ತಾರಾ ಎಂಬ ಬಗ್ಗೆ ಸಂಸ್ಥೆ ಸ್ಪಷ್ಟಪಡಿಸಿಲ್ಲ
ಸಂಸ್ಥೆಯಲ್ಲಿ ಡಾರ್ಸೆ ಹುದ್ದೆ ಮತ್ತು ಜವಾಬ್ದಾರಿಯಲ್ಲಿ ಯಾವುದೇ ಬದಲಾವಣೆಯಿಲ್ಲ. ಅವರು ಸಂಸ್ಥೆಯ ಪ್ರಿನ್ಸಿಪಲ್ ಎಕ್ಸಿಕ್ಯೂಟಿವ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬ್ಲಾಕ್ ಕಂಪನಿ ಯುಎಸ್ ಸೆಕ್ಯೂರಿಟಿಸ್ ಆ್ಯಂಡ್ ಎಕ್ಸ್ಚೆಂಜ್ ಕಮಿಷನ್ ತಿಳಿಸಿದೆ.
ಸ್ಕ್ವೇರ್ ಸಿಇಒ ಅಲೆಸ್ಸಾ ಹೆನ್ರಿ ಸಂಸ್ಥೆಯನ್ನು ತೊರೆದಿದ್ದು, ಡಾರ್ಸೆ ಸಂಸ್ಥೆಯ ಹೆಚ್ಚುವರಿ ಜವಾಬ್ಧಾರಿಯನ್ನು ನಿರ್ವಹಣೆ ಮಾಡಲಿದ್ದಾರೆ. ಹೆನ್ರಿ 9 ವರ್ಷಗಳ ಕಾಲ ಸ್ಕ್ವೇರ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದು, ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಪಾತ್ರ ದೊಡ್ಡದಿದೆ ಎಂದು ತಿಳಿಸಲಾಗಿದೆ.