ನವದೆಹಲಿ: ಭಾರತದ ಮೊದಲ ಸೌರ ಮಿಷನ್ ಆದಿತ್ಯ ಎಲ್ 1 ಜನವರಿ 6 ರಂದು ಸೂರ್ಯ-ಭೂಮಿ ವ್ಯವಸ್ಥೆಯ ಲ್ಯಾಗ್ರೇಂಜ್ ಪಾಯಿಂಟ್ 1 (ಎಲ್ 1) ಅನ್ನು ತಲುಪಲಿದೆ. ಈ ಪಾಯಿಂಟ್ನಿಂದ ಉಪಗ್ರಹಕ್ಕೆ ಸೂರ್ಯನು ಯಾವುದೇ ಅಡೆತಡೆ ಇಲ್ಲದೆ ನಿರಂತರವಾಗಿ ಕಾಣಿಸುತ್ತಾನೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಗುರುವಾರ ಹೇಳಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯ ವಾರ್ಷಿಕ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮ ಟೆಕ್ಫೆಸ್ಟ್ 2023 ಯನ್ನುದ್ದೇಶಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, "ಆದಿತ್ಯ ಎಲ್ 1 ಈಗ ಬಹುತೇಕ ಅಲ್ಲಿಗೆ ತಲುಪಿದೆ. ಅದು ಜನವರಿ 6 ರಂದು ಸಂಜೆ 4 ಗಂಟೆಗೆ ಲ್ಯಾಗ್ರೇಂಜ್ ಪಾಯಿಂಟ್ ತಲುಪಲಿದೆ. ಆದಿತ್ಯ ಎಲ್ 1 ನ ಎಂಜಿನ್ನ ಬರ್ನಿಂಗ್ ಮೇಲೆ ನಾವು ಸಂಪೂರ್ಣ ನಿಯಂತ್ರಣ ಹೊಂದಿದ್ದೇವೆ. ಇದರಿಂದಾಗಿ ಅದು ಹ್ಯಾಲೋ ಕಕ್ಷೆ ಎಂದು ಕರೆಯಲ್ಪಡುವ ಕಕ್ಷೆಯನ್ನು ಪ್ರವೇಶಿಸುತ್ತದೆ." ಎಂದು ತಿಳಿಸಿದರು.
ಭೂಮಿ ಮತ್ತು ಸೂರ್ಯನ ನಡುವಿನ ಗುರುತ್ವಾಕರ್ಷಣೆ ತಟಸ್ಥಗೊಳ್ಳುವ ಪ್ರದೇಶವಾದ ಲ್ಯಾಗ್ರೇಂಜ್ ಬಿಂದುವನ್ನು ತಲುಪುವ ಉದ್ದೇಶದ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸೌರ ಮಿಷನ್ ಅನ್ನು ಈ ವರ್ಷದ ಸೆಪ್ಟೆಂಬರ್ನಲ್ಲಿ ಉಡಾವಣೆ ಮಾಡಲಾಗಿದೆ. ಆದರೆ ಚಂದ್ರ, ಮಂಗಳ, ಶುಕ್ರನಂತಹ ಇತರ ಗ್ರಹಗಳು ಇರುವುದರಿಂದ ಗುರುತ್ವಾಕರ್ಷಣ ಶಕ್ತಿ ಸಂಪೂರ್ಣ ತಟಸ್ಥವಾಗುವುದು ಸಾಧ್ಯವಿಲ್ಲ ಎಂದು ಸೋಮನಾಥ್ ಹೇಳಿದರು. ಎಲ್ಲಾ ಆರು ಪೇಲೋಡ್ಗಳನ್ನು ಪರೀಕ್ಷಿಸಲಾಗಿದ್ದು, ಅವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಎಲ್ಲವೂ ನಮ್ಮ ಬಳಿಗೆ ಮಾಹಿತಿಯನ್ನು ಕಳುಹಿಸುತ್ತಿವೆ ಎಂದು ಅವರು ನುಡಿದರು.