ಶ್ರೀಹರಿಕೋಟಾ (ಆಂಧ್ರಪ್ರದೇಶ):ಸೂರ್ಯ ಅಧ್ಯಯನಕ್ಕಾಗಿ ಭಾರತದ ಇಸ್ರೋ ಸಂಸ್ಥೆಯು ಇಂದು ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ನಿರೀಕ್ಷೆಯಂತೆ ಪಿಎಸ್‌ಎಲ್‌ವಿ ರಾಕೆಟ್‌ನಿಂದ ಆದಿತ್ಯ-ಎಲ್1 ಗಗನನೌಕೆ ಯಶಸ್ವಿಯಾಗಿ ಬೇರ್ಪಟ್ಟಿದೆ. ಇಂದಿನಿಂದ 125 ದಿನಗಳ ಸುದೀರ್ಘ ಪ್ರಯಣ ನಡೆಸಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದರು. ಇದೇ ವೇಳೆ, ಆದಿತ್ಯ-ಎಲ್1 ಯಶಸ್ವಿ ಉಡಾವಣೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ರಾಷ್ಟ್ರಪತಿ ಹಾಗೂ ಪ್ರಧಾನಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 11.52ಕ್ಕೆ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯು ನಭಕ್ಕೆ ಚಿಮ್ಮಿತು. ನೌಕೆಯು ಹಲವು ಪ್ರಕ್ರಿಯೆಗಳಿಗೆ ಒಳಗಾದ ನಂತರ ಯಶಸ್ವಿ ಉಡಾವಣೆ ಬಗ್ಗೆ ಇಸ್ರೋ ಪ್ರಕಟಿಸಿತು. ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷರು, ಆದಿತ್ಯ-ಎಲ್1 ಮಿಷನ್ನಂತರ ವಿಭಿನ್ನ ಮಿಷನ್ಗಳನ್ನು ಯಶಸ್ವಿಯಾಗಿ ಮಾಡಿದ ನಾನು ಪಿಎಸ್‌ಎಲ್‌ವಿ ರಾಕೆಟ್ಗೆ ಅಭಿನಂದಿಸುತ್ತೇನೆ. ಈಗಿನಿಂದಲೇ ಆದಿತ್ಯ-ಎಲ್1 ಮಿಷನ್ ತನ್ನ ಪ್ರಯಾಣವನ್ನು ಎಲ್1 ಪಾಯಿಂಟ್‌ನಿಂದ ಪ್ರಾರಂಭಿಸುತ್ತದೆ. ಇದು ಸುಮಾರು 125 ದಿನಗಳ ಸುದೀರ್ಘ ಪ್ರಯಾಣವಾಗಿದೆ. ಆದಿತ್ಯ ಬಾಹ್ಯಾಕಾಶ ನೌಕೆಗೆ ಶುಭ ಹಾರೈಸೋಣ ಎಂದು ಹೇಳಿದರು.
ಇದನ್ನೂ ಓದಿ:Explained: ಆದಿತ್ಯ-ಎಲ್1 ನೌಕೆಯಲ್ಲಿವೆ 7 ಉಪಕರಣಗಳು; ಇವುಗಳ ಕಾರ್ಯವೇನು?
ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ:ಆದಿತ್ಯ-ಎಲ್1 ಯಶಸ್ವಿ ಉಡಾವಣೆ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್1ರ ಉಡಾವಣೆಯು ಭಾರತದ ಸ್ಥಳೀಯ ಬಾಹ್ಯಾಕಾಶ ಕಾರ್ಯಕ್ರಮವನ್ನು ಹೊಸ ಪಥಕ್ಕೆ ಕೊಂಡೊಯ್ಯುವ ಒಂದು ಹೆಗ್ಗುರುತು ಸಾಧನೆಯಾಗಿದೆ ಎಂದು ರಾಷ್ಟ್ರಪತಿ ಮುರ್ಮು ಬಣ್ಣಿಸಿದ್ದಾರೆ. ಬಾಹ್ಯಾಕಾಶ ಮತ್ತು ಆಕಾಶದ ವಿದ್ಯಮಾನಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ. ಈ ಅಸಾಧಾರಣ ಸಾಧನೆಗಾಗಿ ಇಸ್ರೋ ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳನ್ನು ನಾನು ಅಭಿನಂದಿಸುತ್ತೇನೆ. ಈ ಮಿಷನ್ ಯಶಸ್ವಿಯಾಗಲು ನನ್ನ ಶುಭ ಹಾರೈಕೆಗಳು ಎಂದು ಅವರು ತಮ್ಮ ಟ್ವೀಟ್ ತಿಳಿಸಿದ್ದಾರೆ.
ಚಂದ್ರಯಾನ-3 ರ ಯಶಸ್ಸಿನ ನಂತರ ಭಾರತವು ತನ್ನ ಬಾಹ್ಯಾಕಾಶ ಪ್ರಯಾಣವನ್ನು ಮುಂದುವರೆಸಿದೆ. ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್1ರ ಯಶಸ್ವಿ ಉಡಾವಣೆಗಾಗಿ ನಮ್ಮ ಇಸ್ರೋ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಅಲ್ಲದೇ, ಇಡೀ ಮನುಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಉತ್ತಮ ತಿಳಿವಳಿಕೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರೆಯುತ್ತವೆ ಎಂದೂ ಪ್ರಧಾನಿ ಹೇಳಿದ್ದಾರೆ.
ಇದನ್ನೂ ಓದಿ:ಆದಿತ್ಯ ಎಲ್1 ರಾಕೆಟ್ ಉಡ್ಡಯನ ಯಶಸ್ವಿ .. ಲಾಗ್ರೇಂಜ್ನತ್ತ ಪಯಣ.. ಇಸ್ರೋದಿಂದ ಮತ್ತೊಂದು ಸಾಧನೆ