ಬೆಂಗಳೂರು:ಭಾರತದ ಮೊದಲ ಸೌರ ಮಿಷನ್ ಆದಿತ್ಯ ಎಲ್ 1 ನೌಕೆಯನ್ನು ಎತ್ತರದ ಕಕ್ಷೆಗೆ ಏರಿಸುವ 4ನೇ ಪ್ರಕ್ರಿಯೆ ಪೂರ್ಣವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಬೆಂಗಳೂರಿನ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC) ಈ ಕಾರ್ಯಾಚರಣೆ ನಡೆಸಿತು. ಈಗ ಆದಿತ್ಯ ನೌಕೆಯು ಭೂಮಿಯಿಂದ 256 ಕಿ.ಮೀ x 121973 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದೆ. ಈ ಕಾರ್ಯಾಚರಣೆಯನ್ನು ಬೆಂಗಳೂರು, ಮಾರಿಷಸ್, ಎಸ್‌ಡಿಎಸ್‌ಸಿ-ಎಸ್ಹೆಚ್ಎಆರ್ ಮತ್ತು ಪೋರ್ಟ್ ಬ್ಲೇರ್‌ನಲ್ಲಿರುವ ಇಸ್ರೊ ಕೇಂದ್ರಗಳಲ್ಲಿ ಟ್ರ್ಯಾಕ್ ಮಾಡಲಾಗಿದೆ.
ಮುಂದಿನ (5ನೇ) ಹಂತದ ಕಕ್ಷೆ ಬದಲಾವಣೆ ಕಾರ್ಯ ಸೆಪ್ಟೆಂಬರ್ 19ರಂದು ನಿಗದಿಯಾಗಿದೆ. ಇದಕ್ಕೂ ಮೊದಲು ಸೆ.5ರಂದು ಆದಿತ್ಯ-ಎಲ್ 1, 2ನೇ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿತ್ತು. ಅದು ಭೂಮಿಯಿಂದ 282 ಕಿ.ಮೀ x 40225 ಕಿ.ಮೀ ಎತ್ತರದ ಕಕ್ಷೆಯಲ್ಲಿ ಪರಿಭ್ರಮಣೆ ನಡೆಸಿತ್ತು.
ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರಯಾನ-3 ನೌಕೆ ಯಶಸ್ವಿಯಾಗಿ ಇಳಿದ ನಂತರ, ಇಸ್ರೋ ಸೆ.2 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ದೇಶದ ಮೊದಲ ಸೌರ ಮಿಷನ್ ಆದಿತ್ಯ- ಎಲ್ 1 ಅನ್ನು ಉಡ್ಡಯನ ಮಾಡಿತ್ತು. ಇದು 7 ವಿಭಿನ್ನ ಪೇಲೋಡ್‌ಗಳನ್ನು ನಭಕ್ಕೆ ಹೊತ್ತೊಯ್ದಿದೆ. ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಲಗ್ರಾಂಜಿಯನ್ ಬಿಂದುವಿನಲ್ಲಿ ಆದಿತ್ಯ-ಎಲ್ 1 ಅಂತರಿಕ್ಷ ವೀಕ್ಷಣಾಲಯವನ್ನು ಇರಿಸಲಾಗುತ್ತದೆ. 125 ದಿನಗಳಲ್ಲಿ ಎಲ್-1 ಬಿಂದುವಿಗೆ ಸೇರಿಸಲಾಗುತ್ತದೆ.
"ಆದಿತ್ಯ-ಎಲ್ 1 ಸೂರ್ಯನ ಮೇಲೆ ಇಳಿಯುವುದಿಲ್ಲ. ಇದು ಭೂಮಿಯಿಂದ ಸರಿಸುಮಾರು 1.5 ಮಿಲಿಯನ್ ಕಿ.ಮೀ ದೂರದಲ್ಲಿ ನೆಲೆಗೊಳ್ಳುತ್ತದೆ. ಇದು ಭೂಮಿ ಮತ್ತು ಸೂರ್ಯನ ದೂರದ ಕೇವಲ ಶೇ.1 ರಷ್ಟಿದೆ. ಸೂರ್ಯ ಅನಿಲದ ದೈತ್ಯ ಗೋಳ. ಆದಿತ್ಯ-ಎಲ್ 1 ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುತ್ತದೆ" ಎಂದು ಇಸ್ರೋ ಹೇಳಿದೆ.
ಈ ಆಯಕಟ್ಟಿನ ಸ್ಥಳವು ಆದಿತ್ಯ-ಎಲ್ 1 ಗೆ ಗ್ರಹಣ ಅಥವಾ ನಿಗೂಢತೆಯಿಂದ ಅಡಚಣೆಯಾಗದಂತೆ ನಿರಂತರವಾಗಿ ಸೂರ್ಯನನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ವಿಜ್ಞಾನಿಗಳು ಸೌರ ಚಟುವಟಿಕೆಗಳನ್ನು ಮತ್ತು ಸೂಕ್ತ ಸಮಯದಲ್ಲಿ ಬಾಹ್ಯಾಕಾಶ ಹವಾಮಾನದ ಮೇಲೆ ಅವುಗಳ ಪ್ರಭಾವವನ್ನು ಅಧ್ಯಯನ ಮಾಡಲು ಸಹಕಾರಿಯಾಗಲಿದೆ.
ಆದಿತ್ಯ-ಎಲ್ 1 ಬಗ್ಗೆ ಒಂದಿಷ್ಟು..: ಆದಿತ್ಯ-ಎಲ್ 1 ಎಂಬುದು ಸೂರ್ಯನ ಸಮಗ್ರ ಅಧ್ಯಯನಕ್ಕೆ ಮೀಸಲಾದ ಗಗನ ನೌಕೆ. ಇದು ಸೂರ್ಯನ ಬಗ್ಗೆ ಅಜ್ಞಾತ ಸತ್ಯಗಳನ್ನು ಕಂಡುಹಿಡಿಯಲಿದೆ. ಉಪಗ್ರಹವು 16 ದಿನಗಳ ಕಾಲ ಭೂಮಿಗೆ ಸುತ್ತುವರಿದ ಕಕ್ಷೆಗಳಲ್ಲಿ ಪ್ರಯಾಣಿಸಲಿದೆ. ಈ ಸಮಯದಲ್ಲಿ ಅದು ತನ್ನ ಗಮ್ಯಸ್ಥಾನವನ್ನು ತಲುಪಲು ಅಗತ್ಯವಿರುವ ವೇಗವನ್ನು ಪಡೆಯಲು 5 ಪ್ರಕ್ರಿಯೆಗಳಿಗೆ ಒಳಗಾಗುತ್ತದೆ.
ನಂತರ ಟ್ರಾನ್ಸ್-ಲಗ್ರಾಂಜಿಯನ್ 1 ಅಳವಡಿಕೆಯ ಪ್ರಕ್ರಿಯೆಗೆ ಒಳಪಡಲಿದೆ. ಅದಕ್ಕೆ ಸುಮಾರು 110 ದಿನಗಳ ಅಗತ್ಯವಿದೆ. ಎಲ್-1 ಬಿಂದು ತಲುಪಲು ಉಪಗ್ರಹವು ಸರಿಸುಮಾರು 15 ಮಿಲಿಯನ್ ಕಿ.ಮೀಟರ್ ಪ್ರಯಾಣಿಸಬೇಕು. ಎಲ್-1 ಬಿಂದು ಸೇರಿದ ನಂತರ, ಮತ್ತೊಂದು ಪ್ರಕ್ರಿಯೆ ಆದಿತ್ಯ-ಎಲ್ 1 ಅನ್ನು ಎಲ್ 1 ಸುತ್ತಲಿನ ಕಕ್ಷೆಯಲ್ಲಿ ಬಂಧಿಸಲಿದೆ. ಇದು ಭೂಮಿ ಮತ್ತು ಸೂರ್ಯನ ನಡುವಿನ ಸಮತೋಲಿತ ಗುರುತ್ವಾಕರ್ಷಣೆಯ ಸ್ಥಳ ಎಂದು ಇಸ್ರೋ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.
ಓದಿ:ಹಾಯ್ ಫ್ರೆಂಡ್ಸ್.. ಭೂಮಿ ಚಂದ್ರನ ಜೊತೆ ಸೆಲ್ಫಿ ತೆಗೆದುಕೊಂಡ ಆದಿತ್ಯ ಎಲ್1