ಕರ್ನಾಟಕ

karnataka

ETV Bharat / science-and-technology

ಆದಿತ್ಯ L1 ಮಿಷನ್​ ಮಹತ್ವದ ಹೆಜ್ಜೆ: ಸೂರ್ಯನ ಬಾಹ್ಯ ಪ್ರಖರ ವಿಕಿರಣ ದಾಖಲಿಸಿದ ಪೆಲೋಡ್​ - high energy X ray glimpse

ಎಲ್​1 ಪಾಯಿಂಟ್​ ಕಡೆಗೆ ಸಾಗುತ್ತಿರುವ ಆದಿತ್ಯ L1 ಮಿಷನ್​ ಬಾಹ್ಯಾಕಾಶ ನೌಕೆಯಲ್ಲಿನ ಪೆಲೋಡ್​ ಸೂರ್ಯನ ಬಾಹ್ಯ ಪ್ರಖರ ವಿಕಿರಣ ದಾಖಲಿಸಿದ್ದು, ಮಹತ್ವದ ಪ್ರಗತಿ ಸಾಧಿಸಿದೆ.

ಆದಿತ್ಯ L1 ಮಿಷನ್​ ಮಹತ್ವದ ಹೆಜ್ಜೆ
ಆದಿತ್ಯ L1 ಮಿಷನ್​ ಮಹತ್ವದ ಹೆಜ್ಜೆ

By ETV Bharat Karnataka Team

Published : Nov 7, 2023, 9:41 PM IST

ನವದೆಹಲಿ:ಸೂರ್ಯನ ಕೌತುಕವನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಾರಿಬಿಟ್ಟಿರುವ ಆದಿತ್ಯ-ಎಲ್ 1 ಮಿಷನ್ ಸೌರ ಸಂಶೋಧನೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ. ಅದು ಗಮ್ಯಸ್ಥಾನವಾದ ಲಗ್ರೇಂಜ್ ಪಾಯಿಂಟ್ 1 ಕಡೆಗೆ ಪ್ರಯಾಣವನ್ನು ಮುಂದುವರೆಸಿದ್ದಲ್ಲದೇ, ಸೂರ್ಯನ ಪ್ರಖರ ಜ್ವಾಲೆಯನ್ನು ಮೊದಲ ಬಾರಿಗೆ ತನ್ನ ಪೆಲೋಡ್​ನಲ್ಲಿ ದಾಖಲಿಸಿದೆ.

ಆದಿತ್ಯ L1 ಮಿಷನ್​ನಲ್ಲಿನ ಪೆಲೋಡ್​

ಆದಿತ್ಯ-L1 ಬಾಹ್ಯಾಕಾಶ ನೌಕೆಯಲ್ಲಿನ ಏಳು ಪೇಲೋಡ್‌ಗಳಲ್ಲಿ ಒಂದಾದ ಹೈ ಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (HEL1OS) ಅಕ್ಟೋಬರ್ 29 ರಂದು ಸೌರ ಜ್ವಾಲೆಯನ್ನು ಯಶಸ್ವಿಯಾಗಿ ದಾಖಲಿಸಿದೆ.

ಈ ಸೌರ ಜ್ವಾಲೆಯು ಸೂರ್ಯನ ಮೇಲ್ಮೈ ಮತ್ತು ಬಾಹ್ಯ ವಾತಾವರಣದಿಂದ ಸೂಸುವ ನೇರಳಾತೀತ ಕಿರಣಗಳಾಗಿವೆ. ಇದು ಬೆಳಕಿನ ರೂಪದಲ್ಲಿ ಉಂಟಾಗುವ ಶಕ್ತಿ ಮತ್ತು ವಿಕಿರಣವಾಗಿದೆ. ಸೂರ್ಯನ ವಾತಾವರಣದಲ್ಲಿ ಸಂಗ್ರಹವಾಗಿರುವ ಕಾಂತೀಯ ಶಕ್ತಿಯ ಬಿಡುಗಡೆಯಿಂದ ಈ ಸೌರ ಜ್ವಾಲೆಗಳು ಉಂಟಾಗುತ್ತವೆ.

ಸೂರ್ಯನ ಬಾಹ್ಯ ಪ್ರಖರ ವಿಕಿರಣ ದಾಖಲಿಸಿದ ಪೆಲೋಡ್​

ಈ ವರ್ಷದ ಸೆಪ್ಟೆಂಬರ್ 2 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ-ಎಲ್ 1 ಮಿಷನ್ ಅನ್ನು ಉಡಾವಣೆ ಮಾಡಲಾಯಿತು. ಇದು ಸೂರ್ಯನ ಡೈನಾಮಿಕ್ಸ್ ಮತ್ತು ಭೂಮಿಯ ಹವಾಮಾನದ ಮೇಲೆ ಅದರ ಪ್ರಭಾವದ ಬಗ್ಗೆ ಸಮಗ್ರ ಅಧ್ಯಯನ ನಡೆಸುವ ಯೋಜನೆಯಾಗಿದೆ.

ಬೆಂಗಳೂರು ಕೇಂದ್ರದ ವಿಜ್ಞಾನಿಗಳ ಕೈಚಳಕ:ಸೂರ್ಯನ ವಿಕಿರಣವನ್ನು ದಾಖಲಿಸಿರುವ HEL1OS ಪೆಲೋಡ್​ ಅನ್ನು ಇಸ್ರೋದ ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದ ಬಾಹ್ಯಾಕಾಶ ಖಗೋಳವಿಜ್ಞಾನ ಗುಂಪು ಅಭಿವೃದ್ಧಿಪಡಿಸಿದೆ. HEL1OS ಉಪಕರಣವು ಸೂರ್ಯನಿಂದ ಪ್ರವಹಿಸುವ ನೇರಳಾತೀತ ಎಕ್ಸ್-ರೇ ಕಿರಣಗಳನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾಗಿದೆ.

HEL1OS ಪೆಲೋಡ್​ 10 ಗಂಟೆಗಳ ಕಾರ್ಯಾಚರಣೆಯಲ್ಲಿ ನಡೆಸಿದ್ದು, ನ್ಯಾಷನಲ್​ ಓಶಿಯನ್ ಅಂಡ್​​​​ ಅಟಮೋಸ್ಪೆರಿಕ್​​ ಅಡ್ಮಿನಿಸ್ಟ್ರೇಷನ್ಸ್​ ಜಿಯೋಸ್ಟೇಷನರಿ ಆಪರೇಷನಲ್​ ಎನ್​ವಿರಾನ್​ಮೆಂಟಲ್​ ಸೆಟಲೈಲ್ಸ್​ ಒದಗಿಸಿದ ಎಕ್ಸ್​- ಕಿರಣದ ಬೆಳಕಿನ ವಕ್ರರೇಖೆಗಳೊಂದಿಗೆ HEL1OS ಡೇಟಾವನ್ನು ಸೆರೆಹಿಡಿಯಿತು. ಪೆಲೋಡ್​ನ ಈ ಕಾರ್ಯದಿಂದ ಸೌರ ಜ್ವಾಲೆಗಳ ಸ್ಫೋಟದಿಂದ ಉಂಟಾಗುವ ಶಕ್ತಿಯ ಬಿಡುಗಡೆ ಮತ್ತು ಎಲೆಕ್ಟ್ರಾನ್ ವೇಗವರ್ಧನೆಯನ್ನು ಅಧ್ಯಯನ ಮಾಡುವುದಕ್ಕೆ ಮಹತ್ವದ್ದಾಗಿದೆ.

HEL1OS ಪೆಲೋಡ್​ ಕಾರ್ಯಾಚರಣೆ ನಿಖರ ಫಲಶ್ರುತಿ ನೀಡಿದ್ದು, ಸೌರ ಜ್ವಾಲೆಗಳ ಹೊರಸೂಸುವಿಕೆಯನ್ನು ಸಂಶೋಧಕರಿಗೆ ಒದಗಿಸುತ್ತದೆ. ಇದರ ಮಾಹಿತಿಯಿಂದ ಸೂರ್ಯನ ಸಂಕೀರ್ಣ ಪ್ರಕ್ರಿಯೆಗಳ ಬಗ್ಗೆ ಹೆಚ್ಚಿನ ಮಾಹಿತಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ.

ಆದಿತ್ಯ-ಎಲ್ 1 ಮಿಷನ್ ಯೋಜನೆಯು ಭಾರತದ ಬಾಹ್ಯಾಕಾಶ ಸಂಶೋಧನೆಗಳ ಶಕ್ತಿಗೆ ಸಾಕ್ಷಿಯಾಗಿದೆ. ಇದು ದೇಶದ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯ ವರ್ಗದ ಸೌರ ಮಿಷನ್ ಆಗಿದೆ. ಇದರಲ್ಲಿನ ಏಳು ಪೇಲೋಡ್‌ಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

ಇದನ್ನೂ ಓದಿ:ಮಂಗಳನ ಅಂಗಳದಲ್ಲಿ 4 ಸಾವಿರ ದಿನ ಪೂರೈಸಿದ ಕ್ಯೂರಿಯಾಸಿಟಿ ರೋವರ್

ABOUT THE AUTHOR

...view details