ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ತನ್ನ AI ಚಾಟ್‌ಬಾಟ್ ಆಗಿರುವ ಚಾಟ್‌ಜಿಪಿಟಿಗೆ ತರಬೇತಿ ನೀಡಲು ಸಾರ್ವಜನಿಕರಿಂದ ಡೇಟಾ ಕದ್ದ ಆರೋಪದ ಮೇಲೆ ಸ್ಯಾಮ್ ಆಲ್ಟ್‌ಮ್ಯಾನ್ ನಡೆಸುತ್ತಿರುವ OpenAI ವಿರುದ್ಧ ಅಮೆರಿಕದಲ್ಲಿ ಕ್ಲಾಸ್-ಆಕ್ಷನ್ ಲಾ ಸೂಟ್ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ. ಕ್ಯಾಲಿಫೋರ್ನಿಯಾದ ನಾರ್ದರ್ನ್ ಡಿಸ್ಟ್ರಿಕ್ಟ್‌ನಲ್ಲಿ ದಾಖಲಾದ ಮೊಕದ್ದಮೆಯು, ಓಪನ್ ಎಐ ತನ್ನ ಉತ್ಪನ್ನಗಳಾದ ಚಾಟ್ ಜಿಪಿಟಿ 3.5, ಚಾಟ್ ಜಿಪಿಟಿ 4, DALL-E ಮತ್ತು VALL-E ಗಳಿಗೆ ತರಬೇತಿ ನೀಡಲು ಮತ್ತು ಅವುಗಳನ್ನು ಅಭಿವೃದ್ಧಿಪಡಿಸಲು ಕದ್ದ ಡೇಟಾವನ್ನು ಬಳಸಿದೆ ಎಂದು ಆರೋಪಿಸಿದೆ.
157 ಪುಟದ ಸೂಟ್ ಪ್ರಕಾರ, ಓಪನ್ ಎಐ ವ್ಯಕ್ತಿಗಳನ್ನು ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಮತ್ತು ಎಲ್ಲಾ ವಯಸ್ಸಿನ ಮಕ್ಕಳನ್ನು ಒಳಗೊಂಡಂತೆ ನೂರಾರು ಮಿಲಿಯನ್ ಇಂಟರ್ನೆಟ್ ಬಳಕೆದಾರರಿಂದ ಖಾಸಗಿ ಮಾಹಿತಿಯನ್ನು ಅವರ ತಿಳುವಳಿಕೆಗೆ ಬಾರದಂತೆ ಅಥವಾ ಅವರ ಒಪ್ಪಿಗೆಯಿಲ್ಲದೆ ಕಳವು ಮಾಡಿದೆ ಎಂದು ಆರೋಪಿಸಲಾಗಿದೆ.
ಇದಲ್ಲದೆ, ಕಂಪನಿಯು ಉತ್ಪನ್ನಗಳ ಅಭಿವೃದ್ಧಿ ಮತ್ತು ತರಬೇತಿಯನ್ನು ಮುಂದುವರಿಸಲು, ವಿಶ್ವಾದ್ಯಂತ ಲಕ್ಷಾಂತರ ಅಮಾಯಕ ಗ್ರಾಹಕರಿಂದ ಹೆಚ್ಚುವರಿ ವೈಯಕ್ತಿಕ ಡೇಟಾವನ್ನು ಕಾನೂನುಬಾಹಿರವಾಗಿ ಸಂಗ್ರಹಿಸುವುದನ್ನು ಮತ್ತು ಚಾಟ್ ಜಿಪಿಟಿಗೆ ನೀಡುವುದನ್ನು ಮುಂದುವರಿಸಿದೆ. ಹೀಗೆ ಸಂಗ್ರಹಿಸಿದ ಡೇಟಾ ಯಾವುದೇ ಸಮಂಜಸವಾದ ಅಧಿಕೃತ ಬಳಕೆಗೆ ಬೇಕಾಗಿರುವುದಕ್ಕಿಂತ ತೀರಾ ಅಧಿಕ ಪ್ರಮಾಣದ ಮಾಹಿತಿಯಾಗಿದೆ ಎಂದು ಮೊಕದ್ದಮೆ ತಿಳಿಸಿದೆ. ಮೊಕದ್ದಮೆಯು ಓಪನ್ ಎಐ ಸಿಇಓ ಆಲ್ಟಮ್ಯಾನ್ರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿದೆ: AI ಬಹುಶಃ ಪ್ರಪಂಚದ ಅಂತ್ಯಕ್ಕೆ ಕಾರಣವಾಗಬಹುದು, ಆದರೆ ಈ ಮಧ್ಯೆ, ದೊಡ್ಡ ಕಂಪನಿಗಳು ಹುಟ್ಟಿಕೊಳ್ಳಲಿವೆ ಎಂದು ಆಲ್ಟಮ್ಯಾನ್ ಹೇಳಿದ್ದರು.
ಓಪನ್ ಎಐ ಉತ್ಪನ್ನಗಳು ಮತ್ತು ಅವುಗಳನ್ನು ನಿರ್ಮಿಸಿದ ತಂತ್ರಜ್ಞಾನವು ಜೀವ ಉಳಿಸುವ ವೈಜ್ಞಾನಿಕ ಸಂಶೋಧನೆಗೆ ಸಹಾಯ ಮಾಡುವುದು ಮತ್ತು ಲಕ್ಷಾಂತರ ಜನರ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಮಾನವ ಕುಲಕ್ಕೆ ಸಾಕಷ್ಟು ಒಳ್ಳೆಯದನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆ ಸಾಮರ್ಥ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ಓಪನ್ ಎಐ ಅನ್ನು ಮೂಲತಃ ಒಂದೇ ಉದ್ದೇಶದೊಂದಿಗೆ ಲಾಭೋದ್ದೇಶವಿಲ್ಲದ ಸಂಶೋಧನಾ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಕೃತಕ ಬುದ್ಧಿಮತ್ತೆಯನ್ನು ರಚಿಸಲು ಮತ್ತು ಅದು ಮಾನವೀಯತೆಯ ಪ್ರಯೋಜನಕ್ಕಾಗಿ ಬಳಕೆಯಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಸಂಸ್ಥೆಯನ್ನು ಆರಂಭಿಸಲಾಗಿತ್ತು.
"ಆದರೆ 2019 ರಲ್ಲಿ ಓಪನ್ ಎಐ ಹಠಾತ್ತನೆ ತನ್ನ ಕಂಪನಿಯನ್ನು ಮಾರ್ಪಡಿಸಿತು. ಇಲ್ಲಿಂದ ಮುಂದೆ ಕಂಪನಿಯು ಲಾಭದಾಯಕ ವ್ಯವಹಾರದ ಕಂಪನಿಯಾಯಿತು ಮತ್ತು ಬೃಹತ್ ಪ್ರಮಾಣದ ಲಾಭ ಗಳಿಸುವತ್ತ ತನ್ನ ವ್ಯವಹಾರ ಮುಂದುವರೆಸಿತು ಎಂದು ಮೊಕದ್ದಮೆ ಹೇಳಿದೆ. ಪುನರ್ರಚನೆಯ ಪರಿಣಾಮವಾಗಿ ಓಪನ್ ಎಐ ತನ್ನ ಮೂಲ ಗುರಿಗಳು ಮತ್ತು ತತ್ವಗಳನ್ನು ಕೈಬಿಟ್ಟಿತು. ಬದಲಿಗೆ ಗೌಪ್ಯತೆ, ಭದ್ರತೆ ಮತ್ತು ನೈತಿಕತೆಗಳನ್ನು ಬಲಿಕೊಟ್ಟು ಲಾಭ ಮಾಡುವ ಉದ್ದೇಶದಿಂದ ಮುಂದುವರಿಯಲಾರಂಭಿಸಿತು" ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.
"ಅಂತರ್ಜಾಲದಿಂದ ಬೃಹತ್ ಪ್ರಮಾಣದ ವೈಯಕ್ತಿಕ ಡೇಟಾವನ್ನು ರಹಸ್ಯವಾಗಿ ಕಳವು ಮಾಡುವ ತನ್ನ ಕೆಲಸವನ್ನು ಓಪನ್ ಎಐ ದ್ವಿಗುಣಗೊಳಿಸಿದೆ. ಖಾಸಗಿ ಮಾಹಿತಿ ಮತ್ತು ಖಾಸಗಿ ಸಂಭಾಷಣೆಗಳು, ವೈದ್ಯಕೀಯ ಡೇಟಾ, ಮಕ್ಕಳ ಬಗ್ಗೆ ಮಾಹಿತಿ ಎಲ್ಲವನ್ನೂ ಅದು ಸಂಗ್ರಹಿಸುತ್ತಿದೆ. ಮೂಲಭೂತವಾಗಿ ಇಂಟರ್ನೆಟ್‌ನಲ್ಲಿ ವಿನಿಮಯವಾಗುವ ಪ್ರತಿಯೊಂದು ಡೇಟಾವನ್ನು ಅದು ತೆಗೆದುಕೊಳ್ಳಬಹುದು. ಅಂತಹ ಡೇಟಾದ ಮಾಲೀಕರು ಅಥವಾ ಬಳಕೆದಾರರಿಗೆ ಯಾವುದೇ ಸೂಚನೆ ನೀಡದೆ ಅಥವಾ ಯಾರದೇ ಅನುಮತಿ ಪಡೆಯದೆ ಓಪನ್ ಎಐ ಡೇಟಾ ಸಂಗ್ರಹಿಸುತ್ತಿದೆ" ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ :ಆಕಾಶದಲ್ಲಿ ಹಾರುತ್ತಾ ಬಂದು ಪಿಜ್ಜಾ ಡೆಲಿವರಿ! ವಿಡಿಯೋ ನೋಡಿ