ಜಗತ್ತಿನಲ್ಲಿ ಇನ್ನಿಲ್ಲದ ಆತಂಕ ಸೃಷ್ಟಿ ಮಾಡಿರುವ ಕೊರೊನಾ ವೈರಸ್ ಅನ್ನು ಪ್ರಥಮ ಬಾರಿಗೆ ಪತ್ತೆ ಮಾಡಿದ್ದು ಜೂನ್ ಅಲ್ಮೀಡಾ ಎಂಬ ಸಂಶೋಧಕಿ. ಹೌದು.. ಮಾನವರಿಗೆ ತಗುಲುವ ಕೊರೊನಾ ವೈರಸ್ ಬಗ್ಗೆ ದಶಕಗಳ ಹಿಂದೆಯೇ ಜಗತ್ತಿಗೆ ಹೇಳಿದ್ದು ಅಲ್ಮೀಡಾ. ವೈರಲ್ ಇಮೇಜಿಂಗ್ ತಂತ್ರಜ್ಞಾನ ಮತ್ತು ರೋಗ ಪತ್ತೆ, ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ಹಾಗೂ ವೈರಸ್ಗಳ ಪತ್ತೆಗಾಗಿ ಹೊಸ ವಿಧಾನಗಳನ್ನು ಆವಿಷ್ಕರಿಸಿದ ಕೀರ್ತಿ ಅಲ್ಮೀಡಾ ಅವರಿಗೆ ಸಲ್ಲುತ್ತದೆ.
ಜೂನ್ ಅಲ್ಮೀಡಾ ಸ್ಕಾಟ್ಲೆಂಡ್ನ ಗ್ಲಾಸ್ಗೋ ನಲ್ಲಿ ಅಕ್ಟೋಬರ್ 5, 1930 ರಂದು ಜನಿಸಿದರು. ಇವರ ಬಾಲ್ಯವೆಲ್ಲ ಅಲ್ಲೇ ಕಳೆಯಿತು. ಬಸ್ ಚಾಲಕನ ಮಗಳಾದ ಅಲ್ಮೀಡಾ ಶಾಲೆಯಲ್ಲಿ ಅತಿ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಕುಟುಂಬದ ಹಣಕಾಸು ಪರಿಸ್ಥಿತಿ ಅಷ್ಟಕ್ಕಷ್ಟೇ ಇದ್ದುದರಿಂದ 16ನೇ ವಯಸ್ಸಿಗೆ ವಿದ್ಯಾಭ್ಯಾಸ ನಿಲ್ಲಿಸಬೇಕಾಯಿತು.
ಅಲ್ಮೀಡಾ ಜೀವನದ ಏಳು ಬೀಳುಗಳು:
ತನ್ನ 16ನೇ ವಯಸ್ಸಿನಲ್ಲಿ ಗ್ಲಾಸ್ಗೋ ರಾಯಲ್ ಇನ್ಫರ್ಮರಿಯ ಹಿಸ್ಟೊಪ್ಯಾಥಾಲಜಿ ವಿಭಾಗದಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ವಾರಕ್ಕೆ 25 ಶಿಲ್ಲಿಂಗ್ ಸಂಬಳದ ಕೆಲಸಕ್ಕೆ ಸೇರಿದರು. ಟಿಶ್ಯೂ ಸ್ಯಾಂಪಲ್ಗಳನ್ನು ಮೈಕ್ರೋಸ್ಕೋಪ್ ಮೂಲಕ ಪರಿಶೀಲನೆ ಮಾಡುವುದು ಇವರ ಕೆಲಸವಾಗಿತ್ತು. ನಂತರ ಲಂಡನ್ನ ಸೇಂಟ್ ಬಾರ್ಥೊಲೊಮೇವ್ ಆಸ್ಪತ್ರೆಯಲ್ಲಿ ಇದೇ ಕೆಲಸವನ್ನು ಮುಂದುವರಿಸಿದರು.
ಕೆಲ ಕಾಲದ ನಂತರ ಕೆನಡಾಗೆ ವಲಸೆ ಹೋದ ಅಲ್ಮೀಡಾ ಅಲ್ಲಿ ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ಟೆಕ್ನಿಶಿಯನ್ ಆಗಿ ಕೆಲಸ ಆರಂಭಿಸಿದರು.
ಕೆನಡಾಗೆ ಹೋದ ಕೆಲ ಸಮಯದಲ್ಲಿಯೇ ಅಲ್ಮೀಡಾ ಅವರ ಅಸಾಧಾರಣ ಪ್ರತಿಭೆ ಜಗತ್ತಿನ ಮುಂದೆ ಅನಾವರಣಗೊಳ್ಳಲಾರಂಭಿಸಿತು. ಮೂಲ ವಿಜ್ಞಾನದಲ್ಲಿ ಯಾವುದೇ ಔಪಚಾರಿಕ ಶಿಕ್ಷಣ ಪಡೆಯದಿದ್ದರೂ, ವೈರಸ್ಗಳ ರಚನೆ ಕುರಿತು ಈ ಮುನ್ನ ಯಾರಿಗೂ ತಿಳಿಯದ ವಿಷಯಗಳ ಮೇಲೆ ಹಲವಾರು ಸಂಶೋಧನಾ ವರದಿಗಳನ್ನು ಇತರ ತಜ್ಞರೊಂದಿಗೆ ಸೇರಿ ಪ್ರಕಟಿಸಿದರು.
ಆಗ 1964 ರಲ್ಲಿ ಲಂಡನ್ನ ಸೇಂಟ್ ಥಾಮಸ್ ಹಾಸ್ಪಿಟಲ್ ಮೆಡಿಕಲ್ ಸ್ಕೂಲ್ನಲ್ಲಿ ಕೆಲಸ ಮಾಡುತ್ತಿದ್ದ ಪ್ರೊ. ಎ.ಪಿ. ವಾಟರ್ಸನ್ ಅವರು ಅಲ್ಮೀಡಾರನ್ನು ಭೇಟಿಯಾಗಿ ಲಂಡನ್ಗೆ ಬಂದು ತಮ್ಮ ಜೊತೆಗೆ ಕೆಲಸ ಮಾಡುವಂತೆ ಮನವೊಲಿಸಿದರು. ಇಲ್ಲಿಂದ ಅಲ್ಮೀಡಾ ಅವರ ಭವಿಷ್ಯ ಉತ್ತುಂಗದತ್ತ ಸಾಗತೊಡಗಿತು.
ಮೂರು ವರ್ಷಗಳ ನಂತರ ಪ್ರೊ. ವಾಟರ್ಸನ್ ಅವರೊಂದಿಗೆ ರಾಯಲ್ ಪೋಸ್ಟ್ ಗ್ರಾಜ್ಯುಯೇಟ್ ಮೆಡಿಕಲ್ ಸ್ಕೂಲ್ಗೆ ಸ್ಥಳಾಂತರವಾದರು. ಆಗ ಇವರ ಸಂಶೋಧನಾ ವರದಿಗಳಿಗಾಗಿ ಡಿಎಸ್ಸಿ (DSc) ಪದವಿ ಪ್ರದಾನ ಮಾಡಲಾಯಿತು. ಇಂದಿನ ಬಹುತೇಕ ವೈರಾಲಜಿ ಕುರಿತ ಗ್ರಂಥ ಹಾಗೂ ಪಠ್ಯ ಪುಸ್ತಕಗಳಲ್ಲಿ ಅಲ್ಮೀಡಾ ಅವರ ವೈರಸ್ ಎಲೆಕ್ಟ್ರಾನ್ ಮೈಕ್ರೋಗ್ರಾಫ್ ಬಗ್ಗೆ ಪ್ರಸ್ತಾಪವಿರುತ್ತದೆ.
ಕೆಲಸದಿಂದ ನಿವೃತ್ತಿಯಾಗಿದ್ದ ಅಲ್ಮೀಡಾ ಕೆಲ ವರ್ಷಗಳ ನಂತರ ಮತ್ತೆ ಸೇಂಟ್ ಥಾಮಸ್ ಹಾಸ್ಪಿಟಲ್ ಮೆಡಿಕಲ್ ಸ್ಕೂಲ್ನ ಸಲಹಾಗಾರರಾಗಿ ಮರಳಿದರು. ಈ ಸಮಯದಲ್ಲಿ ಅವರು ಎಚ್ಐವಿ ಏಡ್ಸ್ ವೈರಸ್ನ ಕೆಲ ಅತಿ ಸ್ಪಷ್ಟ ಮೈಕ್ರೋಸ್ಕೋಪಿಕ್ ಚಿತ್ರಗಳನ್ನು ಪ್ರಕಟಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು.
ಅಲ್ಮೀಡಾ ಜೂನ್ ಕೊರೊನಾ ವೈರಸ್ ಪತ್ತೆ ಮಾಡಿದ್ದು ಹೇಗೆ?
ಮೈಕ್ರೋಸ್ಕೋಪಿಕ್ ವಿಷಯದ ಮೇಲೆ ಸಂಶೋಧನೆ ಮಾಡುವಾಗ ನಿರ್ದಿಷ್ಟವಾಗಿ ಏನನ್ನು ಅಧ್ಯಯನ ಮಾಡಬೇಕೆಂಬುದು ಗೊತ್ತಾಗುವುದಿಲ್ಲ. ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಯಂತ್ರವು ಮೊದಲಿಗೆ ಮಾದರಿ ಕೋಶವನ್ನು ಎಲೆಕ್ಟ್ರಾನ್ ಬೀಮ್ಗಳ ಮೂಲಕ ಸ್ಫೋಟಿಸುತ್ತದೆ. ನಂತರ ಕೋಶದ ಮಾದರಿಯೊಂದಿಗೆ ಕಣಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ದಾಖಲಿಸುತ್ತ ಹೋಗುತ್ತದೆ. ಎಲೆಕ್ಟ್ರಾನ್ಗಳು ಬೆಳಕಿಗಿಂತ ಕಡಿಮೆ ತರಂಗಾಂತರ ಹೊಂದಿರುವುದರಿಂದ ಕಣಗಳನ್ನು ಮತ್ತಷ್ಟು ಸೂಕ್ಷ್ಮ ಹಾಗೂ ಸ್ಪಷ್ಟವಾಗಿ ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸಾಧ್ಯವಾಗುತ್ತದೆ. ಆದರೆ ಮೈಕ್ರೋಸ್ಕೋಪ್ನಲ್ಲಿ ಕಾಣುವ ಸಣ್ಣ ಆಕೃತಿಗಳು ವೈರಸ್, ಜೀವಕೋಶ ಅಥವಾ ಇನ್ನೇನಾದರೂ ಆಗಿವೆಯಾ ಎಂಬುದನ್ನು ಪತ್ತೆ ಮಾಡುವುದೇ ಸವಾಲಿನ ವಿಷಯವಾಗಿರುತ್ತದೆ.
ಈ ಸಮಸ್ಯೆಗೆ ಅಲ್ಮೀಡಾ ತಮ್ಮದೇ ಆದ ಉಪಾಯವೊಂದನ್ನು ಕಂಡುಕೊಂಡಿದ್ದರು. ಈಗಾಗಲೇ ವೈರಸ್ ಸೋಂಕು ತಗುಲಿ ಗುಣಮುಖನಾದ ವ್ಯಕ್ತಿಯ ಶರೀರದಲ್ಲಿನ ಪ್ರತಿಕಾಯಗಳ ಸಹಾಯದಿಂದ ವೈರಸ್ಗಳನ್ನು ನಿಖರವಾಗಿ ಗುರುತಿಸಬಹುದೆಂದು ಅವರು ಗ್ರಹಿಸಿದ್ದರು. ಯಾವುದರ ಪ್ರತಿರೋಧಕವಾಗಿ ಪ್ರತಿಕಾಯಗಳು ಹುಟ್ಟಿಕೊಂಡಿರುತ್ತವೆಯೋ ಆ ಅಂಶದತ್ತ ಪ್ರತಿಕಾಯಗಳು ಸೆಳೆಯಲ್ಪಡುತ್ತವೆ. ಹೀಗಾಗಿ ಪ್ರತಿಕಾಯಗಳಿಂದ ಲೇಪಿತವಾದ ಸೂಕ್ಷ್ಮ ಕಣಗಳನ್ನು ಬಿಟ್ಟಾಗ ಅವು ವೈರಸ್ನ ಸುತ್ತಲೂ ಜಮೆಯಾಗತೊಡಗಿದವು. ಇದೇ ಅಂಶದ ಆಧಾರದಲ್ಲಿ ವೈರಸ್ಗಳನ್ನು ಪತ್ತೆ ಮಾಡುವ ವಿಧಾನವನ್ನು ಅಲ್ಮೀಡಾ ಜಗತ್ತಿಗೆ ಪರಿಚಯಿಸಿದರು. ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ವಿಧಾನದ ಮೂಲಕ ವೈರಸ್ ಸೋಂಕು ಪತ್ತೆ ಮಾಡಲು ಟೆಕ್ನಿಶಿಯನ್ಗಳಿಗೆ ಇದೇ ಆವಿಷ್ಕಾರದಿಂದ ಸಾಧ್ಯವಾಯಿತು.
ಗರ್ಭಧಾರಣೆಯ ಸಮಯದಲ್ಲಿ ಅನಾರೋಗ್ಯ ಉಂಟು ಮಾಡಬಲ್ಲ ರುಬೆಲ್ಲಾ ವೈರಸ್ ಸೇರಿದಂತೆ ಇನ್ನೂ ಹಲವಾರು ವೈರಸ್ಗಳನ್ನು ಪ್ರಥಮ ಬಾರಿಗೆ ಪತ್ತೆ ಮಾಡಿದ ಕೀರ್ತಿ ಅಲ್ಮೀಡಾ ಅವರಿಗೆ ಸಲ್ಲುತ್ತದೆ. ರುಬೆಲ್ಲಾ ಕುರಿತು ವಿಜ್ಞಾನಿಗಳು ದಶಕಳಿಂದ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಮೊಟ್ಟ ಮೊದಲ ಬಾರಿಗೆ ರುಬೆಲ್ಲಾ ಇರುವಿಕೆಯನ್ನು ತೋರಿಸಿಕೊಟ್ಟಿದ್ದೇ ಅಲ್ಮೀಡಾ.
ಅಲ್ಮೀಡಾ ಜೂನ್ ಅವರ ಮತ್ತಷ್ಟು ಸಂಶೋಧನೆಗಳು
- ಸಾಂಪ್ರದಾಯಿಕವಾಗಿ ಬೆಳೆಸಲಾಗದ ಸಾಮಾನ್ಯ ಶೀತ ನೆಗಡಿಯ ವೈರಸ್ ಪತ್ತೆ ಮಾಡುವಲ್ಲಿ ಅಲ್ಮೀಡಾ ವಿಧಾನ ಬಹಳ ಉಪಯುಕ್ತವಾಗಿದೆ.
- ಹೆಪಟೈಟಿಸ್-ಬಿ ವೈರಸ್ನಲ್ಲಿ ಮೇಲ್ಮೈ ಮೇಲೆ ಒಂದು ಹಾಗೂ ಒಳಗಡೆ ಇನ್ನೊಂದು ರೀತಿಯ ವಿಶಿಷ್ಟ ರಚನೆ ಇರುವುದನ್ನು ಇಮ್ಯೂನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪಿ ಮೂಲಕ ಅಲ್ಮೀಡಾ ಕಂಡುಹಿಡಿದರು. ವ್ಯಾಕ್ಸೀನ್ ತಯಾರಿಸುವಲ್ಲಿ ಈ ಅಂಶ ವಿಜ್ಞಾನಿಗಳಿಗೆ ಬಹಳ ಉಪಯುಕ್ತವಾಯಿತು.
- ಅಲ್ಮೀಡಾ ಅವರ ಸಂಶೋಧನಾ ವರದಿಗಳಿಗೆ 1970 ರಲ್ಲಿ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಯಿತು.
- ಅಮೆರಿಕ ಸರ್ಕಾರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ನ ಡಾ. ಎ.ಝೆಡ್. ಕಾಪಿಕಿಯನ್ ಅವರಿಗೆ ಇಮ್ಯೂನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯ ವಿಧಾನಗಳನ್ನು ಅಲ್ಮೀಡಾ ಜೂನ್ ಕಲಿಸಿಕೊಟ್ಟಿದ್ದರು. ನೊರೊವೈರಸ್ ಅನ್ನು ಕಂಡುಹಿಡಿದಿದ್ದು ಇದೇ ಡಾ. ಎ.ಝೆಡ್. ಕಾಪಿಕಿಯನ್ ಎಂಬುದು ಗಮನಾರ್ಹ.
ವೆಲ್ಕಮ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ ರೋಗ ಪತ್ತೆ ವಿಧಾನ ಹಾಗೂ ವ್ಯಾಕ್ಸೀನ್ ತಯಾರಿಸುವಿಕೆ ಕುರಿತಾಗಿ ಕೆಲಸ ಮಾಡಿದ ಅಲ್ಮೀಡಾ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು. 1985 ರ ವೇಳೆಗೆ ಬೆಕ್ಸ್ಹಿಲ್ ಪಟ್ಟಣಕ್ಕೆ ಬಂದು ನೆಲೆಸಿದ ಅಲ್ಮೀಡಾ ಯೋಗ ಶಿಕ್ಷಕಿಯ ತರಬೇತಿ ಪಡೆದು ಸ್ಥಳೀಯ ನಾಗರಿಕರಿಗೆ ಯೋಗ ಕಲಿಸಿಕೊಡುತ್ತಿದ್ದರು. 2007 ರಲ್ಲಿ ತಮ್ಮ 77ನೇ ವಯಸ್ಸಿನಲ್ಲಿ ಅಲ್ಮೀಡಾ ಇಹಲೋಕ ತ್ಯಜಿಸಿದರು.