ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಸಾಧನೆ ಅದ್ವಿತೀಯವಾಗಿದೆ. ಕಳೆದ ಅರ್ಧ ದಶಕದಲ್ಲಿ ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನ ಬೆಳೆದು ಬಂದ ರೀತಿ ಸಮಸ್ತ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಭಾರತದ ಬಾಹ್ಯಾಕಾಶ ಸಂಶೋಧನೆ ಹಾಗೂ ತಂತ್ರಜ್ಞಾನದ ಮೊದಲ ಗರಿ ಆರ್ಯಭಟ ಉಪಗ್ರಹದ ಉಡಾವಣೆ. ನಲವತ್ತೈದು ವರ್ಷಗಳ ಹಿಂದೆ 1975ರ ಏಪ್ರಿಲ್ 19 ರಂದು ಭಾರತ ಸ್ವತಃ ತಯಾರಿಸಿದ್ದ ಆರ್ಯಭಟ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಿತ್ತು. ಅಂದಿನ ವಿಜ್ಞಾನಿಗಳ ಸಾಧನೆಯಿಂದಲೇ ಇವತ್ತು ನಮ್ಮ ದೇಶ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಯಿತು. 45 ವರ್ಷಗಳ ಹಿಂದಿನ ಆರ್ಯಭಟ ಉಪಗ್ರಹ ತಯಾರಿಕೆ ಹಾಗೂ ಉಡಾವಣೆಯ ಕುರಿತ ಮಾಹಿತಿ ಬಲು ರೋಚಕವಾಗಿದೆ.
ಮಾನವ ರಹಿತ ಆರ್ಯಭಟ ಭೂ ಉಪಗ್ರಹವನ್ನು ದೇಶದಲ್ಲಿಯೇ ವಿನ್ಯಾಸಗೊಳಿಸಿ ತಯಾರಿಸಲಾಗಿತ್ತು. 5ನೇ ಶತಮಾನದಲ್ಲಿ ಭಾರತದಲ್ಲಿ ಆಗಿಹೋದ ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿ ಹಾಗೂ ಗಣಿತ ಶಾಸ್ತ್ರಜ್ಞ ಆರ್ಯಭಟನ ಹೆಸರನ್ನೇ ಪ್ರಥಮ ಉಪಗ್ರಹಕ್ಕೆ ಇಡಲಾಗಿತ್ತು. ಇದನ್ನು ಬೆಂಗಳೂರಿನ ಪೀಣ್ಯದಲ್ಲಿ ತಯಾರಿಸಲಾಗಿತ್ತು. ಈ ಉಪಗ್ರಹವನ್ನು ಆಗಿನ ಸೋವಿಯತ್ ಒಕ್ಕೂಟದ ಕಾಪುಸ್ಟಿನ್ ಯಾರ್ ನೆಲೆಯಿಂದ, ರಶಿಯಾ ನಿರ್ಮಿತ ಕಾಸ್ಮೋಸ್-3ಎಂ ರಾಕೆಟ್ ಬಳಸಿ 1975ರ ಏಪ್ರಿಲ್ 19 ರಂದು ನಭಕ್ಕೆ ಯಶಸ್ವಿಯಾಗಿ ಹಾರಿಸಲಾಗಿತ್ತು.
360 ಕೆಜಿ ತೂಕದ ಆರ್ಯಭಟ ಉಪಗ್ರಹವನ್ನು ಭೂಮಿಯ ಅಯಾನ್ ವಲಯ, ಸೂರ್ಯನಿಂದ ಹೊರಸೂಸುವ ನ್ಯೂಟ್ರಾನ್ ಮತ್ತು ಗಾಮಾ ಕಿರಣಗಳ ಅಧ್ಯಯನ ಮತ್ತು ಎಕ್ಸ್ರೇ ಬಾಹ್ಯಾಕಾಶ ಸಂಶೋಧನೆಗಳಿಗಾಗಿ ವಿನ್ಯಾಸಗೊಳಿಸಲಾಗಿತ್ತು. ಉಪಗ್ರಹ ಆರ್ಬಿಟ್ ಸೇರಿದ 5 ದಿನಗಳ ನಂತರ ವಿದ್ಯುತ್ ವ್ಯವಸ್ಥೆಯ ದೋಷದಿಂದಾಗಿ ಉಪಗ್ರಹದ ಎಲ್ಲ ವೈಜ್ಞಾನಿಕ ಸಂವೇದಿಗಳನ್ನು ನಿಲ್ಲಿಸಬೇಕಾಗಿ ಬಂದಿತ್ತು. ಆದರೂ ಐದೇ ದಿನಗಳ ಅವಧಿಯಲ್ಲಿ ಅಗತ್ಯವಿದ್ದ ಎಲ್ಲ ಮಾಹಿತಿಗಳನ್ನು ಕಲೆ ಹಾಕಲಾಗಿತ್ತು.
ಸಮಸ್ತ ಭಾರತೀಯರ ಹೆಮ್ಮೆ ಆರ್ಯಭಟ ಉಪಗ್ರಹ
ಆರ್ಯಭಟ ಉಪಗ್ರಹ ಹಾರಿಸಿದ್ದು ಭಾರತದ ಬಾಹ್ಯಾಕಾಶ ವಿಜ್ಞಾನಕ್ಕೆ ಮಾತ್ರವಲ್ಲದೇ ಭಾರತೀಯ ಇತಿಹಾಸದಲ್ಲಿಯೇ ಅತಿ ದೊಡ್ಡ ಹೆಮ್ಮೆಯ ಕ್ಷಣವಾಗಿತ್ತು. 45 ವರ್ಷಗಳ ಹಿಂದೆ 1975 ರ ಏಪ್ರಿಲ್ 19 ರಂದು ಆರ್ಯಭಟ ಉಪಗ್ರಹವನ್ನು ರಾಕೆಟ್ಗಳು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದ್ದವು. ಆದರೆ ಭೂಕಕ್ಷೆಯನ್ನು ದಾಟಿದ ನಂತರ ಉಪಗ್ರಹ ಕೆಲಸ ಮಾಡುವಂತೆ ನಿರ್ವಹಿಸುವುದು ತೀರಾ ಕ್ಲಿಷ್ಟಕರ ವಿಷಯ. ಹೀಗಾಗಿಯೇ ಭಾರತದ ಮೊದಲ ಪ್ರಯತ್ನಕ್ಕೆ ಸಾಕಷ್ಟು ಅಡ್ಡಿ ಆತಂಕಗಳು ಸಹ ಉಂಟಾದವು. ಉಪಗ್ರಹವೊಂದರ ಕಾರ್ಯನಿರ್ವಹಣೆಯ ಬಗ್ಗೆ ಎಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳಬಹುದು ಎಂಬುದರ ಬಗ್ಗೆ ಸಾಕಷ್ಟು ಪಾಠಗಳನ್ನು ಈ ಮಿಷನ್ ಕಲಿಸಿತ್ತು.
ಭಾರತದಲ್ಲಿ 1970ರ ಸುಮಾರಿಗೆ ಪ್ರಥಮ ಬಾರಿಗೆ ಸ್ವದೇಶಿ ಉಪಗ್ರಹ ತಯಾರಿಸುವ ಕುರಿತಾದ ಕಾರ್ಯಚಟುವಟಿಕೆಗಳು ಗರಿಗೆದರಿದವು. ಆದರೆ ರಶಿಯಾ ಪ್ರಥಮ ಬಾರಿಗೆ ಸ್ಪುಟ್ನಿಕ್ ಉಪಗ್ರಹ ಹಾರಿಸಿದ ಕ್ಷಣದಿಂದಲೇ ಭಾರತೀಯ ವಿಜ್ಞಾನಿಗಳಲ್ಲಿ ತುಡಿತವೊಂದು ಆರಂಭವಾಗಿತ್ತು. 1960 ರಲ್ಲಿ ಸ್ವದೇಶಿ ನಿರ್ಮಿತ ರೋಹಿಣಿ ರಾಕೆಟ್ನ ಯಶಸ್ವಿ ಪರೀಕ್ಷೆಯ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಸ್ವದೇಶಿ ಉಪಗ್ರಹಗಳ ನಿರ್ಮಾಣಕ್ಕೆ ಮುಂದಾಯಿತು. ಇಸ್ರೊ ಸಂಸ್ಥಾಪಕ, ಖ್ಯಾತ ಭೌತ ಶಾಸ್ತ್ರಜ್ಞ ಹಾಗೂ ಭಾರತದ ಪರಮಾಣು ವಿಜ್ಞಾನ ಕ್ಷೇತ್ರ ಬೆಳೆಯಲು ಕಾರಣರಾದ ವಿಕ್ರಂ ಸಾರಾಭಾಯ್ ಸ್ವದೇಶಿ ಉಪಗ್ರಹ ನಿರ್ಮಾಣ ಕಾರ್ಯದ ಮುಂಚೂಣಿಯಲ್ಲಿದ್ದರು. ಉಪಗ್ರಹ ನಿರ್ಮಾಣ ಸಂಶೋಧನೆಗಾಗಿ ಅಹಮದಾಬಾದ್ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ 25 ಜನ ಸಂಶೋಧಕರು ಹಾಗೂ ವಿಜ್ಞಾನಿಗಳ ತಂಡವೊಂದನ್ನು ವಿಕ್ರಂ ಸಾರಾಭಾಯ್ ನೇಮಿಸಿದರು. ಹಿರಿಯ ಬಾಹ್ಯಾಕಾಶ ವಿಜ್ಞಾನಿ ಡಾ. ಯು.ಆರ್. ರಾವ್ ಮಾರ್ಗದರ್ಶನದಲ್ಲಿ ಈ ತಂಡ 100 ಕೆಜಿ ತೂಕದ ಉಪಗ್ರಯವೊಂದನ್ನು ತಯಾರಿಸಿತ್ತು. ಅಮೆರಿಕದಿಂದ ಇದನ್ನು ಹಾರಿಬಿಡುವ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು.
ಆರ್ಯಭಟ ಮಾನವ ರಹಿತ ಉಪಗ್ರಹದ ಮತ್ತಷ್ಟು ರೋಚಕ ಮಾಹಿತಿಗಳು:
- ಆಗಿನ ಭಾರತದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಪ್ರಥಮ ಸ್ವದೇಶಿ ಉಪಗ್ರಹಕ್ಕೆ ಆರ್ಯಭಟ ಎಂದು ನಾಮಕರಣ ಮಾಡಿದ್ದರು.
- ಇಸ್ರೋ ನಿರ್ಮಿತ 360 ಕೆಜಿ ತೂಕದ ಆರ್ಯಭಟ ಉಪಗ್ರಹವನ್ನು ರಶಿಯಾದ ಕಾಪುಸ್ಟಿನ್ ಯಾರ್ ನೆಲೆಯಿಂದ ಕಾಸ್ಮೋಸ್-3ಎಂ ರಾಕೆಟ್ ಬಳಸಿ ಹಾರಿಸಲಾಯಿತು. ಭಾರತದ ಉಪಗ್ರಹವನ್ನು ತನ್ನ ನೆಲೆಯಿಂದ ಉಡಾವಣೆ ಮಾಡಿದ ರಶಿಯಾದೊಂದಿಗೆ ಭಾರತ ಕೆಲ ಒಪ್ಪಂದಗಳನ್ನು ಮಾಡಿಕೊಂಡಿತ್ತು. ತನ್ನ ಹಡಗುಗಳ ಮೇಲೆ ಕಣ್ಗಾವಲಿಡಲು ಭಾರತೀಯ ಬಂದರುಗಳನ್ನು ಬಳಸಿಕೊಳ್ಳಲು ರಶಿಯಾಗೆ ಅನುಮತಿ ನೀಡಲಾಗಿತ್ತು. ಇದು ರಶಿಯಾಗೆ ಭಾರತ ನೀಡಿದ ಸೌಹಾರ್ದಯುತ ಕಾಣಿಕೆ.