ವಾಷಿಂಗ್ ಮಷಿನ್ಗಳ ಆವಿಷ್ಕಾರದ ನಂತರ ಬಟ್ಟೆ ಒಗೆಯುವುದು ಬಹಳೇ ಸುಲಭವಾಗಿದೆ. ಆದರೆ, ನೀರು ಮಾತ್ರ ಸಿಕ್ಕಾಪಟ್ಟೆ ಬೇಕಾಗುತ್ತದೆ ಎಂಬುದು ಸತ್ಯ. ಇನ್ನು ಅದಕ್ಕಾಗಿ ಬಳಸಲಾಗುವ ವಿಶೇಷ ಡಿಟರ್ಜೆಂಟ್ ಪೌಡರ್ಗಳು ಮತ್ತು ಲಿಕ್ವಿಡ್ಗಳು ಜೇಬಿಗೆ ಒಂದಿಷ್ಟು ಭಾರವಾಗುತ್ತವೆ. ಇವೆಲ್ಲವೂ ಇಲ್ಲದೆ ಬಟ್ಟೆ ಒಗೆಯುವಂತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ನಿಮಗೆ ಯಾವಾಗಲಾದರೂ ಅನಿಸಿದೆಯೆ? ಇಂಥದೊಂದು ಫೀಲಿಂಗ್ ನಿಮಗೆ ಬಂದಿದ್ದರೆ, ಅದು ಸಾಕಾರವಾಗುವ ಸಮಯ ಇವಾಗ ಬಂದಿದೆ.
ಚಂಡೀಗಢ ಮೂಲದ '80Wash' (80 ವಾಶ್) ಎಂಬ ಕಂಪನಿಯು ಇಂಥ ಅದ್ಭುತವಾದ ಮಷಿನ್ ಒಂದನ್ನು ತಯಾರಿಸಿದೆ. ಒಂದೇ ಒಂದು ಕಪ್ ನೀರಿನಿಂದ ಯಾವುದೇ ಡಿಟರ್ಜೆಂಟ್ ಅಥವಾ ಸೋಪ್ ಇಲ್ಲದೇ ಇದು ಬಟ್ಟೆಗಳನ್ನು ಒಗೆದು ಕೊಡುತ್ತದೆ.
ವಾಷಿಂಗ್ ಮಷಿನ್ ತಂತ್ರಜ್ಞಾನವು ಕಾಲಕಾಲಕ್ಕೆ ಸುಧಾರಿಸುತ್ತಲೇ ಇದೆ. ಆದರೆ, ನೀರಿನ ಬಳಸುವಿಕೆಯ ವಿಚಾರದಲ್ಲಿ ಮಾತ್ರ ಅಂಥ ಬದಲಾವಣೆಯೇನೂ ಆಗಿರಲಿಲ್ಲ. ಒಂದು ಚಿಕ್ಕ ಕಲೆಯನ್ನು ನಿವಾರಿಸಲು ಕೆಲವೊಮ್ಮೆ ಸುಮಾರು 100 ಲೀಟರ್ ನೀರು ಬೇಕಾಗುತ್ತದೆ. ಹೀಗೆ ಬಳಸಿದ ನೀರು ತ್ಯಾಜ್ಯವಾಗುತ್ತದೆ. ಸೋಪು, ಡಿಟರ್ಜೆಂಟ್ ಸೇರಿದ ಈ ನೀರು ಕೊನೆಗೆ ಚರಂಡಿ ಸೇರುತ್ತದೆ. ನಂತರ ಕೆರೆ ಮತ್ತು ನದಿಗಳಿಗೆ ಈ ನೀರು ಸೇರಿಕೊಳ್ಳುತ್ತದೆ.
ಆದರೆ 80 ವಾಶ್ ಕಂಪನಿಯ ವಾಷಿಂಗ್ ಮಷಿನ್ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಲಿದೆ. ಅತ್ಯಂತ ಕಡಿಮೆ ನೀರು..ಅಂದರೆ ಒಂದು ಕಪ್ ನೀರಿನಿಂದ ಈ ಮಷಿನ್ 5 ಬಟ್ಟೆಗಳನ್ನು ಒಗೆಯಬಲ್ಲದು. ಅದೂ ಸೋಪ್ ಇಲ್ಲದೇ ಕೇವಲ 80 ಸೆಕೆಂಡುಗಳಲ್ಲಿ. ಬಟ್ಟೆ ಹೆಚ್ಚು ಕೊಳಕಾಗಿದ್ದರೆ ಕೆಲವೊಮ್ಮೆ ಒಂದಿಷ್ಟು ಹೆಚ್ಚು ಸಮಯ ತೆಗೆದುಕೊಳ್ಳಬಹುದು.