ನವದೆಹಲಿ: ಸೂರ್ಯನಿಂದ ಶಕ್ತಿಯನ್ನು ಹೀರಿಕೊಳ್ಳಲು ಸಸ್ಯಗಳಲ್ಲಿ ನಡೆಯುವ ದ್ಯುತಿಸಂಶ್ಲೇಷಣಾ ಪ್ರಕ್ರಿಯೆಯನ್ನು ಅನುಕರಿಸುವ ಮೂಲಕ ಬೆಳಕನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳುವ ಕೃತಕ ವ್ಯವಸ್ಥೆಯನ್ನು ಐಐಎಸ್ಇಆರ್ ತಿರುವನಂತಪುರಂ ಮತ್ತು ಐಐಟಿ ಇಂದೋರ್ ಸಂಶೋಧಕರು ವಿನ್ಯಾಸಗೊಳಿಸಿದ್ದಾರೆ. ಈ ವಿವರಗಳನ್ನು ಪ್ರತಿಷ್ಠಿತ ರಾಯಲ್ ಕೆಮಿಕಲ್ ಸೊಸೈಟಿ ಕೆಮಿಕಲ್ ಸೈನ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಸೂರ್ಯನಿಗೆ ಒಡ್ಡಿಕೊಳ್ಳುವ ಸಸ್ಯದ ಭಾಗಗಳಲ್ಲಿನ ಕ್ರೋಮೋಫೋರ್ ಗಳು ಸೂರ್ಯನ ಬೆಳಕಿನಿಂದ ಶಕ್ತಿಯನ್ನು ಹೀರಿಕೊಳ್ಳುತ್ತವೆ ಮತ್ತು ಅದನ್ನು ಹತ್ತಿರದ ಇತರ ಕ್ರೋಮೋಫೋರ್ ಗಳಿಗೆ ರವಾನಿಸುತ್ತದೆ. ಹೀಗೆ ಶಕ್ತಿಯನ್ನು ಎಲ್ಲಾ ಕ್ರೋಮೋಫೋರ್ ಗಳಿಗೆ ಪೂರೈಸಲಾಗುತ್ತದೆ.
ಇದೇ ವಿಧಾನವನ್ನು ಅನುಸರಿಸಿ ಸಾಧ್ಯವಾದಷ್ಟು ಬೆಳಕನ್ನು ಹೀರಿಕೊಳ್ಳುವ ಪ್ರಯೋಗಗಳನ್ನು ಪ್ರಪಂಚದಾದ್ಯಂತ ಮಾಡಲಾಗುತ್ತಿದೆ. ಇದರ ಭಾಗವಾಗಿ ಪಾಲಿಮರಿಕ್ ರಚನೆಗಳು, ಡಿಟರ್ಜೆಂಟ್ ರೀತಿಯ ಅಣುಗಳು, ಕೋಶಕಗಳು, ಜೆಲ್ ಮತ್ತು ಜೈವಿಕ ವಸ್ತುಗಳನ್ನು ಬಳಸಲಾಗುತ್ತದೆ. ಆದರೆ, ಇದೆಲ್ಲದರ ಸಂಯೋಜನೆಯಿಂದಾಗಿ ಬೆಳಕನ್ನು ಹೀರಿಕೊಳ್ಳುವ ಮತ್ತು ಅದನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಸಾಮರ್ಥ್ಯವು ನಿರೀಕ್ಷಿಸಿದಷ್ಟು ಉತ್ತಮವಾಗಿಲ್ಲ.