ನವದೆಹಲಿ : ಅತ್ಯಂತ ಅಪರೂಪದ ಖಗೋಳ ಘಟನೆಯೊಂದರಲ್ಲಿ, ಫ್ರೆಂಚ್ ಮಹಿಳೆಯೊಬ್ಬರು ತನ್ನ ಸ್ನೇಹಿತನೊಂದಿಗೆ ಟೆರೇಸ್‌ನಲ್ಲಿ ಕಾಫಿ ಸೇವಿಸುತ್ತಿದ್ದಾಗ ಉಲ್ಕಾಶಿಲೆ ಹಾರಿಬಂದು ಅಪ್ಪಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆಕಾಶದಿಂದ ಬಂದ ನಿಗೂಢ ಬೆಣಚುಕಲ್ಲು ಮಹಿಳೆಯ ಪಕ್ಕೆಲುಬಿಗೆ ತಾಗಿದೆ.
"ನಮ್ಮ ಪಕ್ಕದ ಮೇಲ್ಛಾವಣಿಯ ಕಡೆಯಿಂದ ದೊಡ್ಡ ಬೆಳಕಿನ ಕಣ (ಪೂಮ್) ಬರುತ್ತಿರುವುದು ನನಗೆ ಕಾಣಿಸಿತು. ನಂತರದ ಸೆಕೆಂಡಿನಲ್ಲಿ ನನ್ನ ಪಕ್ಕೆಲುಬುಗಳಿಗೆ ಏನೋ ಅಪ್ಪಳಿಸಿದ ಅನುಭವವಾಯಿತು. ಅದು ಪ್ರಾಣಿ ಅಥವಾ ಬಾವಲಿ ಇರಬಹುದು ಎಂದು ಭಾವಿಸಿದೆ!" ಎಂದು ಮಹಿಳೆ ಹೇಳಿದ್ದಾರೆ. "ನಂತರ ಅದು ಸಿಮೆಂಟ್ ತುಂಡು ಇರಬಹುದು ಎಂದು ನೋಡಿದೆವು. ಆದರೆ ಅದು ಯಾವುದೇ ಬಣ್ಣವಿಲ್ಲ ಹೊಂದಿಲ್ಲ." ಎಂದು ಅವರು ತಿಳಿಸಿದ್ದಾರೆ.
ಕೊನೆಗೆ ತನಗೆ ಅಪ್ಪಳಿಸಿದ ವಸ್ತು ಎಲ್ಲಿಂದ ಬಂತು ಎಂಬುದರ ಪರೀಕ್ಷೆಗೆ ಮಹಿಳೆ ಮುಂದಾಗಿದ್ದಾಳೆ. ಈ ಸಮಯದಲ್ಲಿ ನೆರೆಹೊರೆಯ ವ್ಯಕ್ತಿಯೊಬ್ಬ, ಅದು ಬಾಹ್ಯಾಕಾಶದಿಂದ ಬಂದಿದ್ದಾಗಿರಬಹುದು ಎಂದು ಸಂಶಯ ಪಟ್ಟು ಅದನ್ನು ಬಾಹ್ಯಾಕಾಶ ತಜ್ಞರಿಂದ ಪರೀಕ್ಷಿಸುವಂತೆ ಸಲಹೆ ನೀಡಿದ್ದಾರೆ. ವಸ್ತುವನ್ನು ಪರೀಕ್ಷೆ ಮಾಡಿದ ತಜ್ಞ ಭೂವಿಜ್ಞಾನಿ ಡಾ. ಥಿಯೆರಿ ರೆಬ್ಮನ್ ಅದನ್ನು ಉಲ್ಕಾಶಿಲೆ ಎಂದು ದೃಢಪಡಿಸಿದ್ದಾರೆ. ಅಲ್ಲದೆ ಆ ವಸ್ತು ಭೂಮಿಯ ಹೊರಗಿನಿಂದ ಬಂದಿದ್ದಾಗಿದೆ ಎಂದು ತಿಳಿಸಿದ್ದಾರೆ.
ಅಪ್ಪಳಿಸಿದ ಕಲ್ಲು ಕಬ್ಬಿಣ ಮತ್ತು ಸಿಲಿಕಾನ್ ಮಿಶ್ರಣವನ್ನು ಹೊಂದಿರುವಂತೆ ಕಂಡುಬಂದಿದೆ ಮತ್ತು ಇದು ಉಲ್ಕಾಶಿಲೆಯಾಗಿರಬಹುದು ಎಂದು ರೆಬ್ಮನ್ ಉಲ್ಲೇಖಿಸಿದ್ದಾರೆ. ಪತ್ತೆಯಾದ ಉಲ್ಕಾಶಿಲೆಯ ಎಲ್ಲಾ ತುಣುಕುಗಳು 100 ಗ್ರಾಂಗಿಂತ ಹೆಚ್ಚು ತೂಕವಿವೆ ಎಂದು ವರದಿ ತಿಳಿಸಿದೆ. ಇಂಥ ವಸ್ತುಗಳು ಜನರಿಗೆ ಅಪ್ಪಳಿಸುವುದು ಬಹಳ ಅಪರೂಪ ಎಂದು ಭೂವಿಜ್ಞಾನಿ ಹೇಳಿದ್ದಾರೆ. ಉಲ್ಕಾಶಿಲೆಗಳು ಬಾಹ್ಯಾಕಾಶ ಶಿಲೆಗಳಾಗಿದ್ದು, ಅವು ಭೂಮಿಯ ವಾತಾವರಣವನ್ನು ಪ್ರವೇಶಿಸುವವರೆಗೂ ಗಟ್ಟಿಯಾಗಿರುತ್ತವೆ ಮತ್ತು ನೆಲಕ್ಕೆ ಅಪ್ಪಳಿಸುತ್ತವೆ ಎಂದು ವಿಜ್ಞಾನಿ ತಿಳಿಸಿದ್ದಾರೆ.