ಲಂಡನ್(ಬ್ರಿಟನ್):ಅಗಾಧವಾದ ಜಲಜನಕ ಮತ್ತು ಹೀಲಿಯಂ ನಡುವೆ ಪರಮಾಣು ಸಮ್ಮಿಲನ ಕ್ರಿಯೆಯಿಂದಾಗಿ ಸೂರ್ಯ ಜಗಮಗಿಸುತ್ತಿರುವುದು ನಮಗೆಲ್ಲಾ ಗೊತ್ತಿರುವ ವಿಚಾರ. ಭೂಮಿಯ ವಾತಾವರಣದಲ್ಲೇ ಸಿಗುವ ಜಲಜನಕ ಮತ್ತು ಹೀಲಿಯಂ ಅನಿಲ ಬಳಸಿಕೊಂಡು ಇದೇ ಪರಮಾಣು ಸಮ್ಮಿಲನವನ್ನು ಏರ್ಪಡಿಸಿ, ಕೃತಕ ಸೂರ್ಯನನ್ನು ಮಾನವ ಸೃಷ್ಟಿ ಮಾಡಲು ಹೊರಟಿದ್ದಾನೆ.
ಹೌದು, ಬ್ರಿಟನ್ನ ಟೊಕಮ್ಯಾಕ್ ಎನರ್ಜಿ ಎಂಬ ಸ್ಟಾರ್ಟ್ ಅಪ್ ಕಂಪನಿ ಪರಮಾಣು ಸಮ್ಮಿಲನ ಎಂಬ ತತ್ವ ಆಧರಿಸಿ, ಭೂಮಿಯ ಮೇಲೆ ಶಕ್ತಿಯನ್ನು ಅರ್ಥಾತ್ ಕೃತಕ ಸೂರ್ಯನನ್ನು ತಯಾರಿಸಲು ಮುಂದಾಗಿದೆ. ಈ ಗುರಿಗೆ ಬ್ರಿಟನ್ ವಿಜ್ಞಾನಿಗಳು ತುಂಬಾ ಸನಿಹದಲ್ಲಿದ್ದಾರೆ ಎಂಬುದು ಅತ್ಯಂತ ಸಂತೋಷದ ವಿಚಾರ. ಅಂದಹಾಗೆ ಈ ಟೊಕಮಾರ್ಕ್ ಎನರ್ಜಿ ಕಂಪನಿ ಇರುವುದು ಥೇಮ್ಸ್ ನದಿಯ ದಂಡೆಯ ಮೇಲಿರುವ ಆಕ್ಸ್ಫರ್ಡ್ ಶೈರ್ನಲ್ಲಿರುವ ಡಿಡ್ಕಾಟ್ ಎಂಬ ನಗರದ ಇಂಡಸ್ಟ್ರಿಯಲ್ ಪಾರ್ಕ್ನಲ್ಲಿ.
ಸೂರ್ಯನ 'ಉತ್ಪಾದನೆ' ಹೇಗೆ?
ಇಂಡಸ್ಟ್ರಿಯಲ್ ಪಾರ್ಕ್ನಲ್ಲಿರುವ ಟೊಕೊಮಾರ್ಕ್ ಕಂಪನಿ ಸುಮಾರು 6 ಅಡಿ ವ್ಯಾಸವಿರುವ ಕೊಳವೆಯಾಕಾರಾದ ತುಂಬಾ ಗಟ್ಟಿಮುಟ್ಟಾಗಿ ಸ್ಟೀಲ್ನ ಟ್ಯಾಂಕೊಂದನ್ನು ರೂಪಿಸಿದೆ. ಈ ಟ್ಯಾಂಕ್ನಲ್ಲಿ ಪ್ಲಾಸ್ಮಾವನ್ನು (ಜಲಜನಕವನ್ನು ತುಂಬಾ ಉಷ್ಣತೆಯಲ್ಲಿ ಕಾಯಿಸಿದಾಗ ಪ್ಲಾಸ್ಮಾ ಆಗಿ ರೂಪುಗೊಳ್ಳುತ್ತದೆ) ಸಂಗ್ರಹಿಸಿ ಅತಿ ಹೆಚ್ಚು ಶಕ್ತಿಯಿರುವ ಹೀಲಿಯಂ ಉಪ ಪರಮಾಣು ಕಣಗಳ (Sub Atomic Particles) ಕಿರಣಗಳನ್ನು, ಅದರೊಳಗೆ ಹಾಯಿಸಲಾಗುತ್ತದೆ.
ಈ ವೇಳೆ ಉಪ ಪರಮಾಣು ಕಣಗಳು ಮತ್ತು ಜಲಜನಕ ಅಥವಾ ಪ್ಲಾಸ್ಮಾ ಸಮ್ಮಿಲನಗೊಂಡು ಯಥೇಚ್ಛವಾದ ಶಕ್ತಿ ಬಿಡುಗಡೆಯಾಗುತ್ತವೆ. ಈ ಶಕ್ತಿ ಸೂರ್ಯನ ಕೋರ್ (ಮಧ್ಯಭಾಗ)ಕ್ಕಿಂತ ಹೆಚ್ಚು ಶಾಖ ಹೊಂದಿರುತ್ತದೆ. ಅಂದರೆ 15 ಮಿಲಿಯನ್ ಡಿಗ್ರಿ ಸೆಂಟಿಗ್ರೇಡ್ಗಿಂತ ಹೆಚ್ಚು ಶಾಖ ಉತ್ಪಾದನೆಯಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಂದರೆ ಸೌರಮಂಡಲದಲ್ಲಿ ಅತಿ ಹೆಚ್ಚು ಶಾಖವಿರುವ ಸ್ಥಳವಾಗಿ ಟೊಕಮ್ಯಾಕ್ ಕಂಪನಿಯಲ್ಲಿ ರೂಪಿಸಿರುವ ಕೊಳವೆಯಾಕಾರದ ಟ್ಯಾಂಕ್ ಆಗುತ್ತದೆ.!
ಕೊಳವೆಯಾಕಾರ ಟ್ಯಾಂಕ್ ಪ್ಲಾಸ್ಮಾವನ್ನು ಆವಿಯಾಗದಂತೆ ತಡೆಯಲಿದ್ದು, ಮತ್ತಷ್ಟು ಶಕ್ತಿ ಉತ್ಪಾದನೆಯಾಗುತ್ತದೆ. 1930ರಿಂದ ಈ ಪ್ರಯತ್ನಗಳು ನಡೆಯುತ್ತಿದ್ದು, ಟೊಕೊಮಾರ್ಕ್ ಎನರ್ಜಿ ಶಕ್ತಿ ಉತ್ಪಾದನಾ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಪರಮಾಣು ವಿದಳನಕ್ಕೆ ಪರ್ಯಾಯ ಪರಮಾಣು ಸಮ್ಮಿಲನ
ಪರಮಾಣು ವಿದಳನಕ್ಕೆ ಹೋಲಿಸಿದರೆ ಪರಮಾಣು ಸಮ್ಮಿಲನ ತುಂಬಾ ಪರಿಣಾಮಕಾರಿ ಮತ್ತು ಉಪಯೋಗಕಾರಿಯಾಗಿ ಕೆಲಸ ಮಾಡುತ್ತದೆ. ಅದು ಹೇಗೆ ಎಂದು ತಿಳಿಯುವ ಮುನ್ನ ಪರಮಾಣು ವಿದಳನ ಮತ್ತು ಪರಮಾಣು ಸಮ್ಮಿಲನ ಎಂದರೆ ಏನು ಎಂಬುದನ್ನು ತಿಳಿಯಬೇಕು.
ಪರಮಾಣು ವಿದಳನ ಎಂದರೆ ಆಂಗ್ಲಭಾಷೆಯಲ್ಲಿ Nuclear Fission ಎಂದು ಕರೆಯುತ್ತಾರೆ. ಈ ಪರಮಾಣು ವಿದಳನದಲ್ಲಿ ಒಂದು ಪರಮಾಣವನ್ನು ಒಡೆಯುವ ಮೂಲಕ ಶಕ್ತಿಯನ್ನು ಉತ್ಪಾದನೆ ಮಾಡಲಾಗುತ್ತದೆ. ಈ ಸಾಮಾನ್ಯವಾಗಿ ಅಣುವಿದ್ಯುತ್ ಸ್ಥಾವರಗಳಲ್ಲಿ ಯುರೇನಿಯಂ ಪರಮಾಣವನ್ನು ಒಡೆಯುವ ಮೂಲಕ ಶಕ್ತಿ ಉತ್ಪಾದನೆ ಮಾಡಲಾಗುತ್ತದೆ.