ಭಿಕ್ಕನೂರು (ಕಮ್ಮರೆಡ್ಡಿ ಜಿಲ್ಲೆ, ತೆಲಂಗಾಣ): ಭಿಕ್ಕನೂರು ಮಂಡಲ್ ಕಚಾಪುರ್ ಗ್ರಾಮದ ಯುವಕನೊಬ್ಬ ಅತ್ಯಂತ ಅಗ್ಗವಾದ ಭತ್ತ ಬಿತ್ತುವ ಯಂತ್ರವೊಂದನ್ನು ಕಂಡುಹಿಡಿದಿದ್ದಾರೆ. ಈತನ ಆವಿಷ್ಕಾರಕ್ಕೆ ಸುತ್ತಮುತ್ತಲಿನ ರೈತ ಸಮುದಾಯದವರು ಬಹಳ ಖುಷಿಯಾಗಿದ್ದಾರೆ.
ರೈತರಿಗೆ ಉಪಯೋಗವಾಗುವಂಥ ಕಡಿಮೆ ದರದಲ್ಲಿ ಬಿತ್ತುವ ಯಂತ್ರ ತಯಾರಿಸಿದ ಯುವಕನ ಹೆಸರು ಕಮ್ಮಾರಿ ನಾಗಸ್ವಾಮಿ. ಚಿಕ್ಕವನಾಗಿದ್ದಾಗಲೇ ಈತನ ತಂದೆ ತೀರಿಕೊಂಡಿದ್ದರು. ಸಾಕಷ್ಟು ಆರ್ಥಿಕ ಮುಗ್ಗಟ್ಟಿನ ಮಧ್ಯೆಯೂ ಈ ಯುವಕ ಐಟಿಐ ಕಲಿತಿದ್ದಾನೆ. ನಂತರ ಹೈದರಾಬಾದ್ನ ಕಂಪನಿಯೊಂದರಲ್ಲಿ ಕೆಲ ಕಾಲ ಕೆಲಸ ಮಾಡಿದ್ದ. ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡ ಯುವಕ ಅನಿವಾರ್ಯವಾಗಿ ಗ್ರಾಮಕ್ಕೆ ಬಂದು ತಾಯಿಯೊಂದಿಗೆ ವಾಸವಾಗಿದ್ದ ಹಾಗೂ ತಮ್ಮ ಒಂದೆಕರೆ ಹೊಲದಲ್ಲಿ ಉಳುಮೆ ಮಾಡುತ್ತಿದ್ದ.
ಈ ಮಧ್ಯೆ ಹೊಲ ಉಳುಮೆ ಮಾಡಲು ಕೂಲಿ ಕಾರ್ಮಿಕರು ಸಿಗದಿರುವುದು ಹಾಗೂ ಕೃಷಿ ವೆಚ್ಚ ದುಬಾರಿಯಾಗುತ್ತಿರುವುದು ನಾಗಸ್ವಾಮಿಯ ಗಮನಕ್ಕೆ ಬಂದಿತ್ತು. ಹೀಗಾಗಿ ಕಡಿಮೆ ಖರ್ಚಿನ ಬಿತ್ತನೆ ಯಂತ್ರ ತಯಾರಿಸುವ ನಿರ್ಧಾರ ಮಾಡಿದ ಈತ ತನ್ನ ತಮ್ಮನೊಂದಿಗೆ ಈ ಕುರಿತಾದ ಹಲವಾರು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಸಾಕಷ್ಟು ಅಭ್ಯಾಸ ಮಾಡಿದ. ಕೊನೆಗೂ ಒಂದು ವರ್ಷ ಕಷ್ಟಪಟ್ಟು 50 ಸಾವಿರ ರೂಪಾಯಿಗಳ ವೆಚ್ಚದಲ್ಲಿ ಬಿತ್ತುವ ಯಂತ್ರ ತಯಾರಿಸಿದ.
ಈ ಯಂತ್ರದಲ್ಲಿ 12 ವೋಲ್ಟ್ ಬ್ಯಾಟರಿ ಮತ್ತು ಬಿಆರ್ಡಿಸಿ ಮೋಟರ್ ಬಳಸಲಾಗಿದೆ. ಬ್ಯಾಟರಿ ಚಾಲಿತ ಮೋಟರ್ ಮೂಲಕ ಬಿತ್ತನೆ ಮಾಡುವಂತೆ ತಯಾರಿಸಲಾಗಿರುವ ಯಂತ್ರವನ್ನು ಮನುಷ್ಯರು ಎಳೆಯಬೇಕಿದೆ. ಭಾನುವಾರದಂದು ಯಂತ್ರವನ್ನು ಬಳಸಿ ಪ್ರಾಯೋಗಿಕವಾಗಿ ಬಿತ್ತನೆ ಮಾಡಲಾಯಿತು. ಯಂತ್ರದ ಕಾರ್ಯ ಸಂಪೂರ್ಣ ಯಶಸ್ವಿಯಾಗಿದ್ದು, ಗ್ರಾಮದ ಜನತೆ ಯುವಕನನ್ನು ಅಭಿನಂದಿಸಿದ್ದಾರೆ.
ಇದನ್ನು ಓದಿ:ಎಲೆಕ್ಟ್ರಾನಿಕ್ ಉತ್ಪನ್ನಗಳ ಪ್ಯಾಕೇಜಿಂಗ್ ಮೇಲೆ QR Code ಕಡ್ಡಾಯಗೊಳಿಸಿದ ಸರ್ಕಾರ