ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳೊಂದಿಗೆ ಪ್ರತಿಯೊಬ್ಬರೂ ಸಾಗಲೇಬೇಕಿದೆ. ಇದಕ್ಕೆ ತಪ್ಪಿದಲ್ಲಿ ನಮ್ಮ ಉದ್ಯೋಗಕ್ಕೆ ಕುತ್ತು ಬರುತ್ತದೆ. ಇದೇ ವಿಚಾರ ಬಹುತೇಕ ಭಾರತೀಯರನ್ನು ಕಾಡುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳನ್ನು ಕಲಿಯುವ ಮೂಲಕ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಇಚ್ಚಿಸುವುದಾಗಿ ಪ್ರತಿ ನಾಲ್ವರಲ್ಲಿ ಮೂವರು ಭಾರತೀಯರು ಹೇಳುತ್ತಾರೆ ಎಂದು ವರದಿ ತಿಳಿಸಿದೆ.
ಎಮಿರಿಟ್ಯೂಸ್ ಗ್ಲೋಬಲ್ ವರ್ಕ್ಪ್ಲೇಸ್ ಕೌಶಲ್ಯ ಅಧ್ಯಯನ- 2023 ಎಂಬ ವರದಿಯಲ್ಲಿ ಈ ಕುರಿತು ವಿವರವಾಗಿ ತಿಳಿಸಲಾಗಿದೆ. ಹಣಕಾಸು ಮತ್ತು ವಿಮೆಯ (ಶೇ 72ರಷ್ಟು), ಸಾಫ್ಟ್ವೇರ್ ಮತ್ತು ಐಟಿ ಸರ್ವೀಸಸ್ (ಶೇ 80 ರಷ್ಟು), ಹೆಲ್ತ್ಕೇರ್ (81ರಷ್ಟು), ತಾಂತ್ರಿಕತೆ ಮತ್ತು ಆವಿಷ್ಕಾರ (ಶೇ 79ರಷ್ಟು) ಮತ್ತು ವೃತ್ತಿ ಸೇವೆ/ ಕನ್ಸಲ್ಟಿಂಗ್ (ಶೇ 78ರಷ್ಟು) ಮಂದಿ ಉಳಿದ ಉದ್ಯಮಿಗಳಿಗಿಂತ ತಂತ್ರಜ್ಞಾನದಲ್ಲಿ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ತುಡಿತ ಹೊಂದಿದ್ದಾರೆ ಎಂಬ ಉಲ್ಲೇಖವಿದೆ.
ಬಹುತೇಕ ಭಾರತೀಯರು ಕೌಶಲ್ಯ ಅಂತರ ಎದುರಿಸುತ್ತಿದ್ದು, ಇದರ ಬಗ್ಗೆ ಅವರು ವಿಶೇಷ ಕಾಳಜಿ ಹೊಂದಿದ್ದಾರೆ. ಉದ್ಯೋಗ ಮಾರುಕಟ್ಟೆಯ ಶರವೇಗದ ಬದಲಾವಣೆಯು ಅವರ ಮೇಲೆ ತೀವ್ರ ಒತ್ತಡ ಮೂಡಿಸುತ್ತಿದೆ. ಡಿಜಿಟಲ್ ಮಾರ್ಕೆಟಿಂಗ್, ದತ್ತಾಂಶ ವಿಶ್ಲೇಷಣೆ, ಫೈನ್ಸಾನ್ಸ್, ಮ್ಯಾನೇಜ್ಮೆಂಟ್ ಮತ್ತು ಕೃತಕ ಬುದ್ದಿಮತ್ತೆಯ ವೃತ್ತಿಪರರಿಗೆ ಹೆಚ್ಚು ಬೇಡಿಕೆ ಇದ್ದು, ಇದರಲ್ಲಿ ಕೌಶಲ್ಯ ಅವಶ್ಯಕತೆ ಇದೆ. ಈ ಕೌಶಲಗಳು ಉದ್ಯೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಕೆಲಸದ ಸುರಕ್ಷತೆಯನ್ನೂ ಇನ್ನೊಂದು ಹಂತಕ್ಕೆ ಕೊಂಡೊಯ್ಯುತ್ತದೆ.