ಕರ್ನಾಟಕ

karnataka

ETV Bharat / science-and-technology

5ಜಿ ಸ್ಮಾರ್ಟ್​ಫೋನ್ ಮಾರಾಟ ಶೇ 50ರಷ್ಟು ಏರಿಕೆ: ಮುಂಚೂಣಿಯಲ್ಲಿ ಸ್ಯಾಮ್​ಸಂಗ್

ಭಾರತದಲ್ಲಿ 5ಜಿ ಸ್ಮಾರ್ಟ್​ಫೋನ್​ಗಳ ಮಾರಾಟ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ಭಾರತದಲ್ಲಿ ಮೊದಲ ತ್ರೈಮಾಸಿಕದಲ್ಲಿ 31 ಮಿಲಿಯನ್ (3 ಕೋಟಿ 10 ಲಕ್ಷ) ಸ್ಮಾರ್ಟ್​ಫೋನ್​ಗಳು ಮಾರಾಟವಾಗಿವೆ.

5G smartphone share up 45% in India as high-end 4G devices vacate space
5G smartphone share up 45% in India as high-end 4G devices vacate space

By

Published : May 4, 2023, 4:20 PM IST

ನವದೆಹಲಿ :ಪ್ರಸಕ್ತ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ದೇಶದಲ್ಲಿ 5ಜಿ ಸ್ಮಾರ್ಟ್​ಪೋನ್​ಗಳ ಮಾರಾಟದಲ್ಲಿ ಶೇ 50 ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಈ ಪ್ರಮಾಣ ಶೇ 31 ರಷ್ಟಿತ್ತು. ದೇಶದಲ್ಲಿ ಒಟ್ಟಾರೆ 5ಜಿ ಸ್ಮಾರ್ಟ್​ಪೋನ್​ಗಳ ಮಾರಾಟದಲ್ಲಿ ಸ್ಯಾಮ್​ಸಂಗ್ ಶೇ 25 ರಷ್ಟು ಪಾಲು ಹೊಂದಿದೆ ಎಂದು ಗುರುವಾರ ವರದಿಯೊಂದು ತಿಳಿಸಿದೆ. ಇಂಟರ್​ನ್ಯಾಷನಲ್ ಡೇಟಾ ಕಾರ್ಪೊರೇಷನ್ ಪ್ರಕಾರ, ಮೊದಲ ತ್ರೈಮಾಸಿಕದಲ್ಲಿ 31 ಮಿಲಿಯನ್ (3 ಕೋಟಿ 10 ಲಕ್ಷ) ಸ್ಮಾರ್ಟ್​ಫೋನ್​ಗಳು ಮಾರಾಟವಾಗಿವೆ. ವರ್ಷದಿಂದ ವರ್ಷಕ್ಕೆ ನೋಡಿದರೆ ಮಾರಾಟ ಪ್ರಮಾಣ ಶೇ 16 ರಷ್ಟು ಕಡಿಮೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರಥಮ ತ್ರೈಮಾಸಿಕದಲ್ಲಿ ಸ್ಮಾರ್ಟ್​​ಫೋನ್​ಗಳ ಅತಿ ಕಡಿಮೆ ಮಾರಾಟ ಇದಾಗಿದೆ.

ಅನಿಶ್ಚಿತ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ನಡುವೆ ಗ್ರಾಹಕರ ಬೇಡಿಕೆಯು ನಿಧಾನವಾಗಿದೆ ಮತ್ತು 2022 ರ ದ್ವಿತೀಯಾರ್ಧದಲ್ಲಿ ಹೆಚ್ಚಿನ ಉತ್ಪಾದನೆಯಿಂದಾಗಿ ದಾಸ್ತಾನು ಮಟ್ಟ ಹೆಚ್ಚಾಗಿವೆ. "5G ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆ ವಿಭಾಗದಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿವೆ ಮತ್ತು ಉನ್ನತ ಮಟ್ಟದ 4G ಮಾದರಿಗಳು ಹೊರ ಹೋಗುತ್ತಿರುವುದರಿಂದ ಈ ವರ್ಷದ ದ್ವಿತೀಯಾರ್ಧದಲ್ಲಿ 150 ರಿಂದ 300 ಡಾಲರ್ ಬೆಲೆ ಶ್ರೇಣಿಯ 5G ಸ್ಮಾರ್ಟ್​ಫೋನ್​ಗಳ ಮಾರಾಟ ಹೆಚ್ಚಾಗಬಹುದು ಎಂದು ಐಡಿಸಿ ಇಂಡಿಯಾದ ಕ್ಲೈಂಟ್ ಡಿವೈಸಸ್ ರಿಸರ್ಚ್ ಮ್ಯಾನೇಜರ್ ಉಪಾಸನಾ ಜೋಶಿ ಹೇಳಿದರು.

ಫೋನ್​ಗಳ ಸರಾಸರಿ ಮಾರಾಟದ ಬೆಲೆ ಸಾರ್ವಕಾಲಿಕ ಗರಿಷ್ಠ 265 ಡಾಲರ್ ತಲುಪಿದೆ ಮತ್ತು ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳ ಪಾಲು (600 ಡಾಲರ್ ಮತ್ತು ಅದಕ್ಕಿಂತ ಹೆಚ್ಚಿನದು) ಒಂದು ವರ್ಷದ ಹಿಂದೆ ಇದ್ದ 4 ಶೇಕಡಾಕ್ಕೆ ಹೋಲಿಸಿದರೆ 11 ಶೇಕಡಾಕ್ಕೆ ಏರಿಕೆಯಾಗಿದೆ. ಆನ್‌ಲೈನ್ ಮೂಲಕ ಹೊಸ ಮಾದರಿಯ ಸ್ಮಾರ್ಟ್​ಫೋನ್​ಗಳ ಮಾರಾಟ ಗಮನಾರ್ಹವಾಗಿ ಕುಸಿದಿದೆ. ಆಫಲೈನ್ ಮೂಲಕ ಖರೀದಿಸುವ ಆಕರ್ಷಣೆ ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿದೆ. ಕೈಗೆಟುಕುವ ಬೆಲೆಯ 5G ಸ್ಮಾರ್ಟ್‌ಫೋನ್‌ಗಳು ಮತ್ತು Galaxy S23 ಸರಣಿಯ ಬಿಡುಗಡೆಯಿಂದ ಸ್ಯಾಮ್‌ಸಂಗ್ ಐದು ವರ್ಷಗಳ ನಂತರ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಏರಿದೆ. ವಿವೊ ಎರಡನೇ ಸ್ಥಾನದಲ್ಲಿ, ಒಪ್ಪೊ ಮೂರನೇ ಸ್ಥಾನದಲ್ಲಿ ಹಾಗೂ ಶಿಯೋಮಿ ನಾಲ್ಕನೇ ಸ್ಥಾನದಲ್ಲಿವೆ. ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯು 2023 ರಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

5G ಜಾಗತಿಕ ವೈರ್‌ಲೆಸ್ ನೆಟ್‌ವರ್ಕ್ ಮಾನದಂಡವಾಗಿದ್ದು, ಇದು 4G ನಂತರದ ತಂತ್ರಜ್ಞಾನವಾಗಿದೆ. ಸರಳವಾಗಿ ಹೇಳುವುದಾದರೆ, ಇದನ್ನು 5 ನೇ ತಲೆಮಾರಿನ ನೆಟ್ವರ್ಕ್ ಎಂದು ಪರಿಗಣಿಸಬಹುದು. ಮುಂದಿನ ಪೀಳಿಗೆಯ ನೆಟ್‌ವರ್ಕ್ ಕೇವಲ ಸ್ಮಾರ್ಟ್‌ಫೋನ್‌ಗಳಿಗೆ ಸೀಮಿತವಾಗಿರುವುದಿಲ್ಲ. ಇದನ್ನು ರೋಬೋಟ್‌ಗಳು, ಯಂತ್ರಗಳು, ಸ್ಮಾರ್ಟ್ ಕಾರುಗಳು ಮತ್ತು ಹಲವಾರು ಇತರ ವಿಷಯಗಳಲ್ಲಿಯೂ ಬಳಸಲಾಗುತ್ತದೆ. 5G ನೆಟ್‌ವರ್ಕ್ 4G ನೆಟ್‌ವರ್ಕ್‌ಗಿಂತ ಗಮನಾರ್ಹವಾಗಿ ವೇಗವಾಗಿದೆ. 5G ನೆಟ್‌ವರ್ಕ್‌ಗಳ ಮುಖ್ಯ ಪ್ರಯೋಜನವೆಂದರೆ ಅದು ಹೆಚ್ಚಿನ ಬ್ಯಾಂಡ್‌ವಿಡ್ತ್ ಅನ್ನು ನೀಡುತ್ತದೆ ಮತ್ತು ಹೆಚ್ಚಿನ ಡೌನ್‌ಲೋಡ್ ವೇಗವನ್ನು ನೀಡುತ್ತದೆ. 4G ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಹೊಸ ನೆಟ್‌ವರ್ಕ್‌ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಇದಕ್ಕೆ 5G ಸಕ್ರಿಯಗೊಳಿಸಿದ ವೈರ್‌ಲೆಸ್ ಸಾಧನಗಳು ಬೇಕಾಗುತ್ತವೆ.

ಇದನ್ನೂ ಒದಿ :ತಂತ್ರಜ್ಞಾನ ದಿಗ್ಗಜರೊಂದಿಗೆ ಕಮಲಾ ಹ್ಯಾರಿಸ್ ಮಾತುಕತೆ: ಓಪನ್ ಎಐ ಅಪಾಯಗಳ ಬಗ್ಗೆ ಚರ್ಚೆ

ABOUT THE AUTHOR

...view details