ನವದೆಹಲಿ:ದೇಶದಲ್ಲಿ 5ಜಿ ಇಂಟರ್ನೆಟ್ಗೆ ಚಾಲನೆ ಸಿಕ್ಕಿದೆ. ಟೆಲಿಕಾಂ ಕಂಪನಿಗಳು ಮೆಟ್ರೋ ನಗರಗಳಲ್ಲಿ ಆಯ್ದ ಬಳಕೆದಾರರೊಂದಿಗೆ 5ಜಿ ಸೇವೆಗಳನ್ನು ನೀಡಲು ಪ್ರಾರಂಭಿಸಿವೆ. ಆದರೆ, ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 5ಜಿ ಡೇಟಾ ಪ್ಯಾಕ್‌ಗಳನ್ನು ಚಲಾಯಿಸಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗಳು ಸಾಮಾನ್ಯ ಜನರ ಮನಸ್ಸಿನಲ್ಲಿ ಮೂಡುತ್ತಿವೆ. ತಜ್ಞರ ಪ್ರಕಾರ ವೇಗದ ಇಂಟರ್ನೆಟ್ ಆನಂದಿಸಲು 5ಜಿ ಸಕ್ರಿಯಗೊಳಿಸಿದ ಹ್ಯಾಂಡ್‌ಸೆಟ್ ಅಗತ್ಯವಿದೆ.
ಸಿಮ್ ಮಟ್ಟದಲ್ಲಿ ಸೇವಾ ಪೂರೈಕೆದಾರರು 5ಜಿ ಸೇವೆಗಳಿಗೆ ಸಕ್ರಿಯಗೊಳಿಸಲು ಬ್ಯಾಕ್ ಎಂಡ್‌ನಿಂದ ಸಿಮ್ ಅನ್ನು ಅಪ್‌ಗ್ರೇಡ್ ಮಾಡುವುದರಿಂದ ಸದ್ಯಕ್ಕೆ ಬದಲಾಯಿಸುವ ಅಗತ್ಯವಿಲ್ಲ. 4ಜಿ ಸಿಮ್ ಖಂಡಿತವಾಗಿಯೂ 5ಜಿ ಚಾಲಿತ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಹೆಚ್ಚಿನ ವೇಗದ ಇಂಟರ್ನೆಟ್ ಮತ್ತು ಇತರ ಸೇವೆಗಳನ್ನು ಪಡೆಯಲು 5ಜಿ ಸಕ್ರಿಯಗೊಳಿಸಿದ ಮೊಬೈಲ್ ಹ್ಯಾಂಡ್‌ಸೆಟ್ ಅನ್ನು ಹೊಂದಿರುವುದು ಅವಶ್ಯಕ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್‌ನ ನಿರ್ದೇಶಕ ತರುಣ್ ಪಾಠಕ್ ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಸೇರಿ ದೇಶದ 13 ನಗರಗಳಲ್ಲಿ 5ಜಿ... ಇನ್ಮುಂದೆ ಆನಂದಿಸಿ ವೇಗದ ಇಂಟರ್ನೆಟ್
ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ವಾರಣಾಸಿ ಸೇರಿ ನಾಲ್ಕು ನಗರಗಳಲ್ಲಿ 'ಜಿಯೋ ವೆಲ್ಕಮ್ ಆಫರ್'ನ ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಜಿಯೋ ಸಿಮ್ ಅಥವಾ 5ಜಿ ಹ್ಯಾಂಡ್‌ಸೆಟ್ ಅನ್ನು ಬದಲಾಯಿಸುವ ಅಗತ್ಯವಿಲ್ಲದೇ ಗ್ರಾಹಕರು ಸ್ವಯಂಚಾಲಿತವಾಗಿ ಜಿಯೋ ಟ್ರೂ 5ಜಿ ಸೇವೆ ಪಡೆಯಲಿದ್ದಾರೆ ಎಂದು ರಿಲಯನ್ಸ್ ಜಿಯೋ ಮಂಗಳವಾರ ಹೇಳಿದೆ.
ರಿಲಯನ್ಸ್ ಜಿಯೋ 5ಜಿ ಹ್ಯಾಂಡ್‌ಸೆಟ್‌ಗಳನ್ನು ಜಿಯೋ ಟ್ರೂ 5ಜಿ ಸೇವೆಗಳೊಂದಿಗೆ ಕಾರ್ಯ ನಿರ್ವಹಿಸಲು ಎಲ್ಲ ಹ್ಯಾಂಡ್‌ಸೆಟ್ ಬ್ರಾಂಡ್‌ಗಳೊಂದಿಗೆ ಕೆಲಸ ಮಾಡುತ್ತಿದೆ. ಇದರಿಂದಾಗಿ ಗ್ರಾಹಕರು 5ಜಿ ಆಯ್ಕೆ ಮಾಡಲು ವ್ಯಾಪಕ ಶ್ರೇಣಿಯ 5ಜಿ ಸಾಧನಗಳನ್ನು ಪಡೆಯಲಿದ್ದಾರೆ.