ನದೆವಹಲಿ: ದೇಶದಲ್ಲಿ ಇಂದಿನಿಂದ ವೇಗ ಇಂಟರ್ನೆಟ್ ಒದಗಿಸುವ 5ಜಿ ಯುಗಾರಂಭವಾಗಿದೆ. ಜಾಗತಿಕ ಸ್ಪರ್ಧೆಯೊಂದಿಗೆ ಡಿಜಿಟಲ್ ಸಂಪರ್ಕದ ವಿಷಯಕ್ಕೆ ಬಂದಾಗ ಅದರ ಸಾಮರ್ಥ್ಯ ಮತ್ತು ಗುಣಮಟ್ಟ ಎರಡರಲ್ಲೂ ಇತರ ರಾಷ್ಟ್ರಗಳು ಅತಿ ವೇಗದ ಅನ್ವೇಷಣೆಯಲ್ಲಿ ಮುಂದಿವೆ.
ಓಕ್ಲಾ ಸ್ಪೀಡ್‌ಟೆಸ್ಟ್ ಇಂಟೆಲಿಜೆನ್ಸ್ (Ookla Speedtest Intelligence)ಯ 2021ರ ಮೂರನೇ ತ್ರೈಮಾಸಿಕ ಮಾಹಿತಿ ಪ್ರಕಾರ ದಕ್ಷಿಣ ಕೊರಿಯಾವು 5ಜಿ ನೆಟ್‌ವರ್ಕ್‌ಗಳಲ್ಲಿ 492.48 Mbps ಸರಾಸರಿ ಡೌನ್‌ಲೋಡ್ ವೇಗವನ್ನು ದಾಖಲಿಸಿದೆ. ಅಗ್ರ 10 ಪಟ್ಟಿಯಲ್ಲಿ ದಕ್ಷಿಣ ಕೊರಿಯಾ ಅಗ್ರಸ್ಥಾನದಲ್ಲಿದೆ. ನಾರ್ವೆ (426.75 Mbps), ಯುನೈಟೆಡ್ ಅರಬ್ ಎಮಿರೇಟ್ಸ್-ಯುಎಇ (409.96 Mbps), ಸೌದಿ ಅರೇಬಿಯಾ (366.46 Mbps), ಕತಾರ್ (359.64 Mbps) ಮತ್ತು ಕುವೈತ್ (340.62 Mbps) ಹಾಗೂ ಇದರ ನಂತರದಲ್ಲಿ ಸ್ವೀಡನ್, ಚೀನಾ, ತೈವಾನ್ ಮತ್ತು ನ್ಯೂಜಿಲ್ಯಾಂಡ್ ವೇಗದ ಇಂಟರ್ನೆಟ್ ಹೊಂದಿದೆ.
ಭಾರತವು ಮೊಬೈಲ್ ಡೌನ್‌ಲೋಡ್ ವೇಗದ ವಿಷಯದಲ್ಲಿ ಜಾಗತಿಕವಾಗಿ 139 ದೇಶಗಳಲ್ಲಿ 118ನೇ ಸ್ಥಾನವನ್ನು ಹೊಂದಿದೆ. ಭಾರತದಲ್ಲಿ ಕೇವಲ14 Mbps ಡೌನ್‌ಲೋಡ್ ವೇಗ ಇದ್ದು, ಇದು ಜಾಗತಿಕ ಸರಾಸರಿ 31.01Mbps ನ ಅರ್ಧಕ್ಕಿಂತ ಕಡಿಮೆಯಾಗಿದೆ. ಇದೀಗ 5ಜಿ ಸೇವೆಗೆ ಚಾಲನೆ ನೀಡಲಾಗಿದ್ದು, ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ಲಭ್ಯವಾಗಲಿದೆ.
5G ಸೇವೆ ಸಿಗುವ 13 ನಗರಗಳು: ಪ್ರಸ್ತುತ ದೇಶದ 13 ನಗರಗಳಲ್ಲಿ ಜನರು 5G ಸೇವೆಯನ್ನು ಆನಂದಿಸಲು ಸಾಧ್ಯವಾಗುತ್ತದೆ. ಇದರಲ್ಲಿ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಚಂಡೀಗಢ, ಗುರುಗ್ರಾಮ್, ಹೈದರಾಬಾದ್, ಲಖನೌ, ಪುಣೆ, ಗಾಂಧಿನಗರ, ಅಹಮದಾಬಾದ್ ಮತ್ತು ಜಾಮ್‌ನಗರ್ ಸೇರಿವೆ. ಆದರೆ, ಇದಕ್ಕಾಗಿ ನಿಮ್ಮ ಫೋನ್ 5ಜಿ ಸೌಲಭ್ಯವನ್ನು ಹೊಂದಿರಬೇಕು.