ಜಿನೀವಾ : 2023ರಲ್ಲಿ ವಿಶ್ವದ ಒಟ್ಟಾರೆ ಶೇ 33ರಷ್ಟು ಜನಸಂಖ್ಯೆ ಈವರೆಗೂ ಇಂಟರ್ನೆಟ್ನಿಂದ ಸಂಪರ್ಕಿತವಾಗಿಲ್ಲ ಎಂದು ವಿಶ್ವಸಂಸ್ಥೆಯ ಟೆಕ್ ಏಜೆನ್ಸಿ ಐಟಿಯುನ ಇತ್ತೀಚಿನ ಅಂಕಿಅಂಶಗಳು ಮಂಗಳವಾರ ತಿಳಿಸಿವೆ. ಅಂದರೆ, ಈ ಶೇ 33 ರಷ್ಟು ಜನ ಇನ್ನೂ ಆಫ್ಲೈನ್ ಆಗಿದ್ದಾರೆ ಎಂದರ್ಥ. 2022 ರಲ್ಲಿ ಅಂದಾಜು 2.7 ಬಿಲಿಯನ್ ಜನ ಆಫ್ಲೈನ್ ಆಗಿದ್ದರು. ಈ ಸಂಖ್ಯೆ 2023 ರಲ್ಲಿ ಅಂದಾಜು 2.6 ಬಿಲಿಯನ್ ಅಥವಾ ಶೇಕಡಾ 33 ಕ್ಕೆ ಇಳಿದಿದೆ. 2023 ರ ವೇಳೆಗೆ ವಿಶ್ವದ ಜನಸಂಖ್ಯೆಯ ಕೇವಲ 67 ಪ್ರತಿಶತದಷ್ಟು ಅಥವಾ 5.4 ಬಿಲಿಯನ್ ಜನರು ಮಾತ್ರ ಆನ್ ಲೈನ್‌ನಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
"ಸಂಪರ್ಕದಲ್ಲಿನ ಈ ಸುಧಾರಣೆಯು ಸರಿಯಾದ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಬೆಂಬಲಿಸುವಲ್ಲಿ ಯಾರನ್ನೂ ಹಿಂದೆ ಬಿಡದ ಮತ್ತೊಂದು ಕ್ರಮವಾಗಿದೆ" ಎಂದು ಐಟಿಯು ಪ್ರಧಾನ ಕಾರ್ಯದರ್ಶಿ ಡೊರೀನ್ ಬೊಗ್ಡಾನ್-ಮಾರ್ಟಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ಅರ್ಥಪೂರ್ಣ ಸಂಪರ್ಕವು ಎಲ್ಲರಿಗೂ, ಎಲ್ಲೆಡೆಯೂ ಸಿಗುವವರೆಗೂ ನಾವು ವಿಶ್ರಾಂತಿ ಪಡೆಯುವುದಿಲ್ಲ" ಎಂದು ಬೊಗ್ಡಾನ್-ಮಾರ್ಟಿನ್ ಹೇಳಿದರು.
ಆರಂಭಿಕ ಅಂದಾಜಿನ ಪ್ರಕಾರ, ಕಡಿಮೆ ಆದಾಯದ ದೇಶಗಳಲ್ಲಿ ಇಂಟರ್ನೆಟ್ ಸಂಪರ್ಕದ ಬೆಳವಣಿಗೆಯು ಪ್ರಬಲವಾಗಿದೆ. ಈ ದೇಶಗಳಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಕಳೆದ ವರ್ಷದಲ್ಲಿ ಸುಮಾರು 17 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಡೇಟಾ ತಿಳಿಸಿದೆ. ಆದಾಗ್ಯೂ, ಈ ದೇಶಗಳಲ್ಲಿ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಜನರು ಇಂಟರ್ನೆಟ್ ಗೆ ಸಂಪರ್ಕ ಹೊಂದಿದ್ದಾರೆ.