ನವದೆಹಲಿ : ಭಾರತದಲ್ಲಿ ಪ್ರತಿ ನಾಲ್ಕು ಜನರ ಪೈಕಿ ಇಬ್ಬರು ನೋಮೋಫೋಬಿಯಾ ಹೊಂದಿದ್ದಾರೆ ಎಂದು ಜಾಗತಿಕ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಒಪ್ಪೊ ಮತ್ತು ಕೌಂಟರ್‌ಪಾಯಿಂಟ್ ರಿಸರ್ಚ್‌ನ ವರದಿ ಶುಕ್ರವಾರ ತಿಳಿಸಿದೆ. ತಮ್ಮ ಸ್ಮಾರ್ಟ್‌ಫೋನ್‌ನಿಂದ ಬೇರ್ಪಡುವ ಭಯ ಹೊಂದಿರುವುದು ನೋಮೋಫೋಬಿಯಾ ಆಗಿದೆ. ಭಾರತದಲ್ಲಿ ಶೇಕಡಾ 72 ರಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮೊಬೈಲ್ ಬ್ಯಾಟರಿ ಶೇಕಡಾ 20 ಅಥವಾ ಅದಕ್ಕಿಂತ ಕಡಿಮೆ ಆದಲ್ಲಿ ಆತಂಕಕ್ಕೆ ಒಳಗಾಗುತ್ತಾರೆ.
ಹಾಗೆಯೇ ಶೇಕಡಾ 65 ರಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ಬ್ಯಾಟರಿ ಕಡಿಮೆಯಾಗುತ್ತಿದ್ದಂತೆ ಭಾವನಾತ್ಮಕ ಅಸ್ವಸ್ಥತೆ ಅನುಭವಿಸುತ್ತಾರೆ ಎಂದು ವರದಿ ತಿಳಿಸಿದೆ. 'NoMoPhobia: ಕಡಿಮೆ ಬ್ಯಾಟರಿ ಉದ್ವಿಗ್ನತೆಯ ಗ್ರಾಹಕ ಅಧ್ಯಯನ' (NoMoPhobia: Low Battery Anxiety Consumer Study) ಎಂಬ ಶೀರ್ಷಿಕೆಯ ವರದಿಯು, ಮೊಬೈಲ್ನ ಬ್ಯಾಟರಿ ಕಡಿಮೆಯಾದಂತೆ ಜನರಲ್ಲಿ ಈ ಫೋಬಿಯಾ ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಗ್ರಾಹಕರ ಮನಸ್ಥಿತಿ ಅಧ್ಯಯನ ಮಾಡಿದೆ.
ಒಪ್ಪೊ ತನ್ನ ತಂತ್ರಜ್ಞಾನದ ಆವಿಷ್ಕಾರದ ಬಗ್ಗೆ ಹೆಮ್ಮೆಪಡುತ್ತದೆ ಮತ್ತು ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ನಾವು ನಿರಂತರವಾಗಿ ಅಧ್ಯಯನಗಳ ಮೇಲೆ ಅವಲಂಬಿತರಾಗಿದ್ದೇವೆ. ಜಗತ್ತಿಗೆ ಶಾಶ್ವತವಾದ ಮೌಲ್ಯ ತರುವ ಉತ್ಪನ್ನಗಳು ಮತ್ತು ಅನುಭವಗಳನ್ನು ರಚಿಸುವುದು ನಮ್ಮ ಉದ್ದೇಶವಾಗಿದೆ ಎಂದು ಒಪ್ಪೊ ಇಂಡಿಯಾದ ಸಿಎಂಒ ದಮಯಂತ್ ಸಿಂಗ್ ಖನೋರಿಯಾ ಹೇಳಿದರು. ಈ ಅಧ್ಯಯನವು ನೋಮೋಫೋಬಿಯಾದ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ನೀಡುತ್ತದೆ. ಇದು ನೋಮೋಫೋಬಿಯಾ ಪರಿಹರಿಸುವ ಮಾರ್ಗಗಳನ್ನು ತಿಳಿಯಲು ಸಹಾಯ ಮಾಡುತ್ತದೆ ಎಂದು ಖನೋರಿಯಾ ತಿಳಿಸಿದರು.