ನವದೆಹಲಿ: ತ್ವರಿತ ಸಂದೇಶ ರವಾನಿಸುವ ಪ್ಲಾಟ್ಫಾರ್ಮ್ ವಾಟ್ಸ್ಆ್ಯಪ್ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ 26.85 ಲಕ್ಷ ಖಾತೆಗಳನ್ನು ನಿಷೇಧಿಸಿದೆ. ಇದರಲ್ಲಿ 8.72 ಲಕ್ಷ ಖಾತೆಗಳನ್ನು ಬಳಕೆದಾರರು ಫ್ಲ್ಯಾಗ್ ಮಾಡುವ ಮೊದಲು ಪೂರ್ವಭಾವಿಯಾಗಿ ನಿರ್ಬಂಧಿಸಲಾಗಿದೆ ಎಂದು ಕಂಪನಿ ಮಂಗಳವಾರ ತಿಳಿಸಿದೆ. ಆಗಸ್ಟ್‌ನಲ್ಲಿ ನಿಷೇಧಿಸಲಾದ 23.28 ಲಕ್ಷ ಖಾತೆಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ನಿರ್ಬಂಧಿಸಲಾದ ಖಾತೆಗಳ ಸಂಖ್ಯೆ 15 ಪ್ರತಿಶತ ಹೆಚ್ಚಾಗಿದೆ.
1 ಸೆಪ್ಟೆಂಬರ್, 2022 ಮತ್ತು 30 ಸೆಪ್ಟೆಂಬರ್, 2022 ರ ನಡುವೆ 26,85,000 ವಾಟ್ಸ್ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಇದರಲ್ಲಿ 8,72,000 ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿ ಬರುವ ಮೊದಲೇ ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ. ಭಾರತೀಯ ಖಾತೆಗಳನ್ನು +91 ಫೋನ್ ಸಂಖ್ಯೆಯ ಮೂಲಕ ಗುರುತಿಸಲಾಗಿದೆ ಎಂದು ವಾಟ್ಸ್ಆ್ಯಪ್ ತನ್ನ ಸೆಪ್ಟೆಂಬರ್ ತಿಂಗಳ ಯೂಸರ್ ಸೇಫ್ಟಿ ರಿಪೋರ್ಟ್ನಲ್ಲಿ ತಿಳಿಸಿದೆ.
ಕಳೆದ ವರ್ಷ ಜಾರಿಗೆ ಬಂದ ಕಠಿಣ ಐಟಿ ನಿಯಮಾವಳಿಗಳ ಪ್ರಕಾರ, ಬೃಹತ್ ಗಾತ್ರದ ಡಿಜಿಟಲ್ ಕಂಪನಿಗಳು (50 ಲಕ್ಷಕ್ಕೂ ಹೆಚ್ಚು ಬಳಕೆದಾರರು) ಪ್ರತಿ ತಿಂಗಳು ತಮಗೆ ಬಂದ ದೂರುಗಳು ಮತ್ತು ಅವುಗಳ ಮೇಲೆ ಕ್ರಮ ತೆಗೆದುಕೊಂಡ ಬಗ್ಗೆ ಅನುಸರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ಕಡ್ಡಾಯವಾಗಿದೆ.