ಬೆಂಗಳೂರು: ಟೆಕ್ ಜಗತ್ತಿನಲ್ಲಿ ಈ ವರ್ಷ ಪ್ರಾರಂಭವಾಗಿದ್ದು ಉದ್ಯೋಗ ವಜಾದಿಂದ ಎಂದರೂ ಸುಳ್ಳಲ್ಲ. ಬೇಡಿಕೆ ಕುಸಿತ, ಹಣದುಬ್ಬರದ ಸೇರಿದಂತೆ ಹಲವು ಕಾರಣಗಳಿಂದಾಗಿ ಜಾಗತಿಕವಾಗಿ ದೈತ್ಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಪ್ಲಿಂಕ್ ಸ್ಲಿಪ್ ನೀಡಿ, ನಿರುದ್ಯೋಗಿಗಳನ್ನಾಗಿ ಮಾಡಿದವು. ಇದರಿಂದ ಅನೇಕ ಮಂದಿ ಕೆಲಸ ಕಳೆದುಕೊಂಡು ಹತಾಶರಾಗಿದ್ದಾರೆ. ಜಾಗತಿಕವಾಗಿ ಆರಂಭವಾದ ಈ ಉದ್ಯೋಗ ಕಡಿತದ ಪರಿಣಾಮಕ್ಕೆ ಭಾರತೀಯ ಉದ್ಯೋಗಿಗಳು ಹೊರತಾಗಿಲ್ಲ.
ಇನ್ನು ಕಳೆದ ಆರು ತಿಂಗಳಿನಿಂದ ಆರಂಭವಾದ ಈ ಉದ್ಯೋಗ ಕಡಿತದಿಂದ ಸುಮಾರು 2.12 ಲಕ್ಷ ಮಂದಿ ಕೆಲಸ ಕಳೆದುಕೊಂಡಿದ್ದಾರೆ. 2023ರ ಮೊದಲ ಅರ್ಧ ವರ್ಷದಲ್ಲಿ ಭಾರತದ 27 ಸಾವಿರ ಮಂದಿಯೂ ಉದ್ಯೋಗದಿಂದ ವಜಾಗೊಂಡಿದ್ದು, ಈ ಉದ್ಯೋಗ ವಜಾ ಪ್ರಕ್ರಿಯೆ ಮುಂದಿನ ಆರು ತಿಂಗಳು ಮುಂದುವರೆಯುವ ಸಾಧ್ಯತೆ ಇದೆ.
ಉದ್ಯೋಗ ವಜಾದ ದತ್ತಾಂಶ ಹೇಳುವಂತೆ, 819 ಟೆಕ್ ಕಂಪನಿಗಳು 2023ರ ಜನವರಿಯಿಂದ ಜೂನ್ 30, 2023ರ ವರೆಗೆ ತಮ್ಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 2,12,221 ಮಂದಿಗೆ ಮನೆ ದಾರಿ ತೋರಿಸಿವೆ. ಕಳೆದ ವರ್ಷಕ್ಕೆ ಅಂದರೆ 2022ಕ್ಕೆ ಹೋಲಿಕೆ ಮಾಡಿದಾಗ ಇದು ದೊಡ್ಡ ಮಟ್ಟದ್ದಾಗಿದೆ. 2022ರಲ್ಲಿ 1,046 ಟೆಕ್ ಸಂಸ್ಥೆಗಳು 1.61 ಲಕ್ಷ ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದ್ದವು. 2022ರ ಜೂನ್ನಿಂದ 2023ರ ಜೂನ್ವರೆಗೆ ಒಟ್ಟಾರೆ 3.8 ಲಕ್ಷ ಟೆಕ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
ಅನೇಕ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ಅನೇಕ ಕಾರಣಗಳಿಂದ ಪಟ್ಟಿ ಮಾಡಿ ಅವರಿಗೆ ಪಿಂಕ್ ಸ್ಲಿಪ್ ನೀಡಿದೆ. ಜಾಗತಿಕ ಆರ್ಥಿಕತೆ ಅನಿಶ್ಚಿತತೆ, ಕೋವಿಡ್ 19 ಸಾಂಕ್ರಾಮಿಕತೆ ಬಳಿಕೆ ಬೇಡಿಕೆ ಇಳಿಕೆ ಸೇರಿದಂತೆ ಹಲವು ಕಾರಣದಿಂದ ಈ ಉದ್ಯೋಗ ವಜಾ ಅನಿವಾರ್ಯವಾಗಿದೆ ಎಂಬುದಾಗಿ ಈ ಸಂಸ್ಥೆಗಳು ಸಮಾಜಾಯಿಷಿ ನೀಡಿದೆ.