ಬೆಂಗಳೂರು/ ಚಿತ್ರದುರ್ಗ: ಮಾನವರಹಿತ ಯುದ್ಧ ವಿಮಾನ ತಪಸ್ನ 200 ನೇ ಹಾರಾಟವನ್ನು ಚಿತ್ರದುರ್ಗದಲ್ಲಿ ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು. ಮೊದಲ ಬಾರಿಗೆ ತ್ರಿ-ಸೇವಾ ತಂಡ ಇಂತಹ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದೆ. ಮಾನವ ರಹಿತ ಯುದ್ಧ ವಿಮಾನ ಅಭಿವೃದ್ಧಿಗಾಗಿ ಸ್ಥಳೀಯ ಪ್ರಯತ್ನಗಳನ್ನು ಮಾಡಲಾಗಿದ್ದು, ಈ ಪ್ರಯತ್ನಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. TAPAS ಈಗ ಬಳಕೆದಾರರ ಪ್ರಯೋಗಗಳಿಗೆ ಸಿದ್ಧವಾಗಿದೆ ಎಂದು DRDO ಇದೇ ವೇಳೆ ಪ್ರಕಟಿಸಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದ ಬಳಿಯಿರುವ ಡಿಆರ್ಡಿಒ ಸಂಶೋಧನಾ ಘಟಕದಲ್ಲಿ ಮಾನವರಹಿತ ಯುದ್ಧ ವಿಮಾನಗಳ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುತ್ತಿದೆ.
ಪ್ರಾಯೋಗಿಕ ಹಾರಾಟ ನಡೆಸಿದ 'ತಪಸ್' ಮಾನವ ರಹಿತ ವಿಮಾನ ಯಶಸ್ವಿಯಾಗಿ ತನ್ನ ಗುರಿಯನ್ನು ಸಾಧಿಸಿದೆ. ಭಾರತ ಸ್ವಯಂ ನಿರ್ಮಾಣ ಮಾಡಲಾಗಿರುವ Rustom II UAV 28,000 ಅಡಿ ಎತ್ತರದಲ್ಲಿ ಹಾರಾಟ ನಡೆಸಬಲ್ಲದು. ಅಷ್ಟೇ ಅಲ್ಲ 18 ಗಂಟೆಗಳಿಗೂ ಹೆಚ್ಚು ಕಾಲ, 28 ಸಾವಿರ ಅಡಿ ಎತ್ತರದಲ್ಲಿ ಉಳಿಯುವಂತೆ ಮಾಡಲು ಡಿಆರ್ಡಿಒ ಯೋಜಿಸಿದೆ ಎಂದು ತಿಳಿದು ಬಂದಿದೆ.
TAPAS UAV ಯ 200ನೇ ಹಾರಾಟವನ್ನು ಟ್ರೈ ಸರ್ವೀಸ್ ತಂಡ ಇದೇ ಮೊದಲ ಬಾರಿಗೆ 27ನೇ ಜೂನ್ 2023 ರಂದು ಯಶಸ್ವಿಯಾಗಿ ಪ್ರದರ್ಶಿಸಿದೆ. UAV ಅಭಿವೃದ್ಧಿಗಾಗಿ ತ್ರಿ ಸೇವಾ ತಂಡವು ಸ್ಥಳೀಯ ಪ್ರಯತ್ನಗಳನ್ನು ಶ್ಲಾಘಿಸಿದೆ. TAPAS ಈಗ ಬಳಕೆದಾರರ ಪ್ರಯೋಗಗಳಿಗೆ ಸಿದ್ಧವಾಗಿದೆ ಎಂದು ಡಿಆರ್ಡಿಒ ತಂಡ ಘೋಷಣೆ ಮಾಡಿದೆ.
ಈ ಮಾನವ ರಹಿತ ಯುದ್ಧ ವಿಮಾನ ಸತತವಾಗಿ 24 ಗಂಟೆ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ 28 ಸಾವಿರ ಅಡಿ ಎತ್ತರದಲ್ಲಿ ಸಾಗುವ ಉದ್ದೇಶ ಹೊಂದಿರುವ ವಿಮಾನ, ಗರಿಷ್ಠ 350 ಕೆ ಜಿ ತೂಕ ಹೊರುವ ಸಾಮರ್ಥ್ಯ ಹೊಂದಿದೆ. ತಪಸ್ ಮಾನವ ರಹಿತ ವಿಮಾನ ಯುಎವಿ ಸ್ವದೇಶಿ ನಿರ್ಮಿತ ಡ್ರೋಣ್ ಆಗಿದ್ದು, ಇಸ್ರೇಲ್ನ ಹೀರಾವನ್ನು ಮೀರಿಸುವ ಸಾಮರ್ಥ್ಯ ಹೊಂದಿದೆ.
ಮಧ್ಯಮ ಎತ್ತರದ ಈ ತಪಸ್ ಅನ್ನು ಬೆಂಗಳೂರು ಮೂಲದ ಏರೋನಾಟಿಕಲ್ ಡೆವೆಲಪ್ಮೆಂಟ್ ಎಸ್ಟಾಬ್ಲಿಶ್ಮೆಂಟ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಈ ತಪಸ್ ಭಾರತೀಯ ರಕ್ಷಣಾ ಪಡೆಗಳ ಮೂರೂ ಸಶಸ್ತ್ರ ಪಡೆಗಳಿಗೆ ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ನೆರವು ನೀಡಲು ಅಭಿವೃದ್ಧಿಪಡಿಸಲಾಗಿದೆ.
ಇದನ್ನು ಓದಿ:Emergency landing: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ