ಸ್ಯಾನ್ ಫ್ರಾನ್ಸಿಸ್ಕೋ: ಯೂಟ್ಯೂಬ್ ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಚೀನಾದ ಶಾರ್ಟ್ ವಿಡಿಯೋ ತಯಾರಿಕಾ ಅಪ್ಲಿಕೇಶನ್ ಟಿಕ್ ಟಾಕ್ ತನ್ನ ಬಳಕೆದಾರರು 15 ನಿಮಿಷಗಳ ಅವಧಿಯ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುವಂಥ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಸಾಮಾಜಿಕ ಮಾಧ್ಯಮ ಸಲಹೆಗಾರ ಮ್ಯಾಟ್ ನವಾರಾ, ಹೊಸ ವೈಶಿಷ್ಟ್ಯ ಲಭ್ಯವಾಗಿರುವ ಬಳಕೆದಾರರಿಗೆ ತೋರಿಸಲಾದ ಸಂದೇಶದ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ.
"ಟಿಕ್ ಟಾಕ್ 15 ನಿಮಿಷಗಳ ವಿಡಿಯೊ ಅಪ್ಲೋಡ್ ಮಿತಿಯನ್ನು ಪರೀಕ್ಷಿಸುತ್ತಿದೆ. ಈ ಹಿಂದೆ ಗರಿಷ್ಠ 10 ನಿಮಿಷದ ವಿಡಿಯೊ ಪೋಸ್ಟ್ ಮಾಡಬಹುದಿತ್ತು" ಎಂದು ಅವರು ಇನ್ಸ್ಟಾಗ್ರಾಮ್ ಥ್ರೆಡ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಕ್ರೀನ್ ಶಾಟ್ ಪ್ರಕಾರ, ಬಳಕೆದಾರರು ಟಿಕ್ ಟಾಕ್ ಅಪ್ಲಿಕೇಶನ್ ಮತ್ತು ಡೆಸ್ಕ್ಟಾಪ್ ಎರಡರಿಂದಲೂ ಪ್ಲಾಟ್ಫಾರ್ಮ್ಗೆ 15 ನಿಮಿಷದ ವಿಡಿಯೋಗಳನ್ನು ಅಪ್ಲೋಡ್ ಮಾಡಬಹುದು. ಪ್ರಸ್ತುತ ಕೆಲವೇ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ನೀಡಿ ಇದನ್ನು ಪರೀಕ್ಷಿಸಲಾಗುತ್ತಿದೆ ಎಂದು ಟಿಕ್ ಟಾಕ್ ಟೆಕ್ ಕ್ರಂಚ್ಗೆ ತಿಳಿಸಿದೆ.
ಟಿಕ್ಟಾಕ್ 2022ರ ಫೆಬ್ರವರಿಯಲ್ಲಿ ತನ್ನ ಪ್ಲಾಟ್ಫಾರ್ಮ್ ಮೇಲೆ ಅಪ್ಲೋಡ್ ಮಾಡಬಹುದಾದ ಗರಿಷ್ಠ ವಿಡಿಯೋ ಅವಧಿಯನ್ನು 3 ನಿಮಿಷಗಳಿಂದ 10 ನಿಮಿಷಗಳಿಗೆ ವಿಸ್ತರಿಸಿತ್ತು. ಅದಕ್ಕೂ ಮುನ್ನ ಆರಂಭದಲ್ಲಿ ಕೇವಲ 15 ಸೆಕೆಂಡ್ ಇದ್ದ ವಿಡಿಯೋ ಅವಧಿಯನ್ನು 60 ಸೆಕೆಂಡ್ಗೆ ಹೆಚ್ಚಿಸಲಾಗಿತ್ತು. ಸ್ಟ್ಯಾಟಿಸ್ಟಾ ಪ್ರಕಾರ, 2023 ರ ಮೂರನೇ ತ್ರೈಮಾಸಿಕದಲ್ಲಿ ಟಿಕ್ಟಾಕ್ ವಿಶ್ವಾದ್ಯಂತ ಬಳಕೆದಾರರಿಂದ ಸುಮಾರು 272.7 ಮಿಲಿಯನ್ ಡೌನ್ಲೋಡ್ಗಳನ್ನು ಕಂಡಿದೆ.