ಸ್ಯಾನ್ ಫ್ರಾನ್ಸಿಸ್ಕೋ : ರೀಲ್ಸ್ ಎಂಬುದು ಈಗ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಟ್ರೆಂಡ್ ಆಗಿದೆ. ರೀಲ್ಸ್ ನೋಡುವವರ ಸಂಖ್ಯೆ ಹೆಚ್ಚಾದಂತೆ ರೀಲ್ಸ್ ಮಾಡುವವರ ಸಂಖ್ಯೆಯೂ ವೃದ್ಧಿಯಾಗುತ್ತಿದೆ. ಸದ್ಯ ವಿಶ್ವದಲ್ಲಿ ರೀಲ್ಸ್ ವಿಷಯದಲ್ಲಿ ಮೆಟಾ ಒಡೆತನದ ಇನ್ಸ್ಟಾಗ್ರಾಮ್ ಕೂಡ ಜನಪ್ರಿಯ ಪ್ಲಾಟ್ಫಾರ್ಮ್ಗಳಲ್ಲಿ ಒಂದಾಗಿದೆ. ರೀಲ್ಸ್ನ ಹೆಚ್ಚುತ್ತಿರುವ ಜನಪ್ರಿಯತೆಯ ಹಿನ್ನೆಲೆಯಲ್ಲಿ ಈಗ ಇನ್ಸ್ಟಾಗ್ರಾಮ್ ತನ್ನ ರೀಲ್ಸ್ ಅವಧಿಯನ್ನು 10 ನಿಮಿಷಕ್ಕೆ ಹೆಚ್ಚಿಸಲು ಮುಂದಾಗಿದೆ. ಇದರಿಂದ ಬಳಕೆದಾರರು ಇನ್ನು ಮುಂದೆ 10 ನಿಮಿಷಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗಲಿದೆ.
ಮೊಬೈಲ್ ಡೆವಲಪರ್ ಮತ್ತು ಲೀಕರ್ ಅಲೆಸ್ಸಾಂಡ್ರೊ ಪಲುಝಿ ಎಂಬುವರು ಬುಧವಾರ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಇನ್ಸ್ಟಾ ದ ಈ ಬೆಳವಣಿಗೆಯನ್ನು ಹಂಚಿಕೊಂಡಿದ್ದಾರೆ. ಎರಡು ಪಕ್ಕದ ರೀಲ್ಸ್ ಪುಟಗಳ ಸ್ಕ್ರೀನ್ ಶಾಟ್ಗಳನ್ನು ಅವರು ಶೇರ್ ಮಾಡಿದ್ದಾರೆ. ಒಂದು ಮೂರು ನಿಮಿಷಗಳ ಕಾಲ ರೆಕಾರ್ಡ್ ಮಾಡಲು ಮತ್ತು ಇನ್ನೊಂದು 10 ನಿಮಿಷಗಳ ಕಾಲ ರೆಕಾರ್ಡ್ ಮಾಡಲು ಎಂದು ಅವರು ಪೋಸ್ಟ್ ಮಾಡಿದ್ದಾರೆ.
"#Instagram 10 ನಿಮಿಷಗಳವರೆಗೆ #Reels ರಚಿಸುವ ವೈಶಿಷ್ಟ್ಯವನ್ನು ತಯಾರಿಸುತ್ತಿದೆ" ಎಂದು ಅಲೆಸ್ಸಾಂಡ್ರೊ ಪಲುಝಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ, ರೀಲ್ಸ್ ಅವಧಿಯನ್ನು ವಿಸ್ತರಿಸುವ ಯೋಜನೆಯ ಬಗ್ಗೆ ಮೆಟಾ ಇನ್ನೂ ದೃಢಪಡಿಸಿಲ್ಲ ಎಂದು ವರದಿ ತಿಳಿಸಿದೆ. ರೀಲ್ಸ್ ಅವಧಿಯನ್ನು 10 ನಿಮಿಷಕ್ಕೆ ಹೆಚ್ಚಿಸುವ ಮೂಲಕ ಇನ್ಸ್ಟಾ ಯೂಟ್ಯೂಬ್ಗೆ ಪೈಪೋಟಿ ನೀಡಲಿದೆ. ಜಗತ್ತಿನ ಮತ್ತೊಂದು ರೀಲ್ಸ್ ಪ್ಲಾಟ್ಫಾರ್ಮ್ ಟಿಕ್ಟಾಕ್ ಈಗಾಗಲೇ ಹೆಚ್ಚಿನ ಅವಧಿಯ ರೀಲ್ಸ್ ವೈಶಿಷ್ಟ್ಯ ಹೊಂದಿರುವುದು ಗಮನಾರ್ಹ.