‘ಡಿಎಂಕೆ ಪಕ್ಷದ ಚುನಾವಣಾ ಪ್ರಣಾಳಿಕೆಗೆ ಸವಾಲು ಒಡ್ಡುವ ರೀತಿ ತೋರುತ್ತಿರುವ ಮತ್ತೊಂದು ಪ್ರಣಾಳಿಕೆ ಈಗ ಹೊರಗೆ ಬಂದಿದೆ. ಹರಾಜಿನಲ್ಲಿ ಸ್ಪರ್ಧಾತ್ಮಕವಾಗಿರುವ ಹರಾಜು ಕೂಗಿನಂತೆ ಭಾಸವಾಗುವ ಈ ಪ್ರಣಾಳಿಕೆಯು ನಾವು ನೀಡಿದ್ದ ಭರವಸೆಯ ಸುಧಾರಿತ ಆವೃತ್ತಿಯಂತೆ ಕಾಣುತ್ತಿದ್ದು, ಎಲ್ಲವನ್ನೂ ತಂದುಕೊಡುವ ಭರವಸೆ ನೀಡುತ್ತಿವೆ’ ಎಂದು ಹತ್ತು ವರ್ಷಗಳ ಹಿಂದೆ ಡಿಎಂಕೆ ನಾಯಕ ಮತ್ತು ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ದಿ. ಕರುಣಾನಿಧಿ ಹೇಳಿದ್ದರು.
ಎರಡು ದ್ರಾವಿಡ ಪಕ್ಷಗಳ ಸರ್ವೋಚ್ಚ ನಾಯಕರಾಗಿದ್ದ ಜಯಲಲಿತಾ ಮತ್ತು ಕರುಣಾನಿಧಿ ನಿಧನರಾದ ನಂತರ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆಯು ಭರವಸೆಗಳ ಮಹಾ ಪ್ರವಾಹಕ್ಕೆ ಮತ್ತೊಮ್ಮೆ ಸಾಕ್ಷಿಯಾಗುತ್ತಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆ ಮುಂದಿನ ತಿಂಗಳು 6ರಂದು ಮತದಾನ ಎದುರಿಸಲಿದೆ. ಅಂದಾಜು 6.1 ಕೋಟಿ ಮತದಾರರನ್ನು ಆಕರ್ಷಿಸಲು ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಭರ್ಜರಿ 500 ಭರವಸೆಗಳನ್ನು ನೀಡಿದೆ. ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಡೇಟಾ ಟ್ಯಾಬ್‌ಗಳನ್ನು ಒದಗಿಸುವುದು; ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ ಬೆಲೆಯಲ್ಲಿ ಕಡಿತ; ಪಡಿತರ ಚೀಟಿ ಹೊಂದಿರುವ ಪ್ರತಿ ಮಹಿಳೆಗೆ ರೂ. 1000, ಹಿಂದು ದೇವಾಲಯಗಳಿಗೆ ತೀರ್ಥಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ರೂ. 25,000ದಿಂದ ರೂ. 1 ಲಕ್ಷ ಸಹಾಯಧನದಂತಹ ಭರವಸೆಗಳು ಈ ಪ್ರಣಾಳಿಕೆಯಲ್ಲಿವೆ.
ಚುನಾವಣೆಯಲ್ಲಿ ಹ್ಯಾಟ್ರಿಕ್ ಸಾಧಿಸುವ ಉದ್ದೇಶದಿಂದ ಎಐಎಡಿಎಂಕೆ ಪಕ್ಷವು ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ತನ್ನ ಆವೃತ್ತಿಯಲ್ಲಿ ಮತ್ತಷ್ಟು ಸುಧಾರಿಸಿದೆ. ವಾಷಿಂಗ್ ಮಷೀನ್‌ಗಳು ಮತ್ತು ಸೌರ ಒಲೆಗಳ ಉಚಿತ ಸರಬರಾಜು, ಪಡಿತರ ಚೀಟಿ ಹೊಂದಿರುವ ಪ್ರತಿ ಮಹಿಳೆಗೆ ರೂ. 1500 ನೆರವು ನೀಡುವಂತಹ ಭರವಸೆಗಳನ್ನು ನೀಡಿದೆ. ಪ್ರಣಾಳಿಕೆಯಲ್ಲಿ ಘೋಷಿಸುವ ಇಂತಹ ಉಚಿತ ಕೊಡುಗೆಗಳು ಮತದಾರರ ಮನಸ್ಸಿನ ಮೇಲೆ ಅನಗತ್ಯವಾಗಿ ಪ್ರಭಾವ ಬೀರುತ್ತವೆ ಎಂದು 2013ರಲ್ಲಿ ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗೆ ಅಡ್ಡಿ ಉಂಟು ಮಾಡುವ ಇಂತಹ ಪ್ರವೃತ್ತಿಯನ್ನು ನಿರುತ್ಸಾಹಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ರಾಜಕೀಯ ಪಕ್ಷಗಳೊಂದಿಗೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿದ ನಂತರ ಚುನಾವಣಾ ಆಯೋಗವು ರೂಪಿಸಿದ್ದ ಮಾರ್ಗಸೂಚಿಗಳು ಚುನಾವಣಾ ಭರವಸೆಗಳ ಪ್ರವಾಹವನ್ನು ತಡೆಯುವಲ್ಲಿ ಸಫಲವಾಗಿಲ್ಲ. ಪ್ರತಿ ಚುನಾವಣೆಯಲ್ಲಿಯೂ ಇದು ಮತ್ತೆ ಮತ್ತೆ ಸಾಬೀತಾಗಿದೆ.
ಮತದಾರರಿಗೆ ಅಧಿಕಾರದ ಫಲವನ್ನು ಆಸ್ವಾದಿಸಲು ಯತ್ನಿಸುವ ರಾಜಕೀಯ ಪಕ್ಷಗಳ ಇಂತಹ ಚುನಾವಣಾ ಪ್ರಣಾಳಿಕೆಗಳು ರಾಜ್ಯಗಳನ್ನು ಸಾಲದ ಬಲೆಗೆ ಎಳೆಯುತ್ತವೆ ಎಂಬುದು ದುರದೃಷ್ಟಕರ ಸಂಗತಿ.