ಹೈದರಾಬಾದ್:ತೆಲಂಗಾಣದಲ್ಲಿ ತೀವ್ರ ಗಮನ ಸೆಳೆದಿದ್ದ ಮುನುಗೋಡು ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಟಿ.ಚಂದ್ರಶೇಖರ್ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಜಯಭೇರಿ ಬಾರಿಸಿದೆ. ಟಕ್ಕರ್ ನೀಡಿದ್ದ ಬಿಜೆಪಿ ಅಭ್ಯರ್ಥಿ ಇಲ್ಲಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿದೆ. ತೀವ್ರ ಜಿದ್ದಾಜಿದ್ದಿನ ಕಣವಾಗಿದ್ದ ಮುನುಗೋಡಿನಲ್ಲಿ ಹಣದ ಹೊಳೆಯೇ ಹರಿದಿದೆ ಎಂಬ ಆರೋಪ ಕೇಳಿಬಂದಿದೆ. ಇದು ಚುನಾವಣೆಗಳು ಹಣ ಮತ್ತು ತೋಳ್ಬಲದ ಮೇಲೆ ನಡೆಯುತ್ತಿವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಹಿಂದಿನ ದಿನಗಳಲ್ಲಿ ಒಂದು ವೋಟಿಗೆ 1 ರೂ.ಗಳನ್ನು ನೀಡಲಾಗುತ್ತಿತ್ತು. ಈಗ ಪ್ರತಿ ವೋಟಿಗೆ 5 ಸಾವಿರ ರೂಪಾಯಿ ನೀಡಲಾಗುತ್ತಿದೆ. ಈ ಪರಿಸ್ಥಿತಿಗೆ ರಾಜಕೀಯ ನಾಯಕರೇ ಕಾರಣ. ವ್ಯವಸ್ಥೆಯನ್ನು ಹದಗೆಡಿಸಲು ರಾಜಕಾರಣಿಗಳು ಮಾಡಬಾರದ ಪಾಪವನ್ನು ಮಾಡುತ್ತಿದ್ದಾರೆ. ರಾಜಕೀಯ ನಾಯಕರ ಚುನಾವಣಾ ಕಾನೂನು ಉಲ್ಲಂಘನೆಗಳಿಗೆ ಚುನಾವಣಾ ಆಯೋಗ ಮೂಕಪ್ರೇಕ್ಷಕನಾಗಿ ಉಳಿದುಕೊಂಡಿದೆ.
ಚುನಾವಣಾ ಕಣದಲ್ಲಿ ಹಣದ್ದೇ ಮೇಲಾಟ:ಚುನಾವಣೆಯ ವೇಳೆ ಹಣ ಎಷ್ಟು ಪ್ರಾಮುಖ್ಯತೆ ಪಡೆಯುತ್ತದೆ ಎಂಬ ಬಗ್ಗೆ ಸಂಸದರೊಬ್ಬರು ಸದನದಲ್ಲಿಯೇ ವಿವರಿಸಿದ್ದರು. ಭಾರತೀಯ ಚುನಾವಣಾ ಆಯೋಗ ನಿಗದಿಪಡಿಸಿದ ಗರಿಷ್ಠ ಚುನಾವಣಾ ವೆಚ್ಚದ ಮಿತಿಯು ಒಂದು ದಿನದ ವೆಚ್ಚಕ್ಕೂ ಸರಿಹೊಂದುವುದಿಲ್ಲ. ಇದರಿಂದ ಚುನಾವಣೆ ಮುಗಿಸಲು ಸಾಧ್ಯವೇ ಎಂದಿದ್ದರು.
ಒಂದು ಅಧ್ಯಯನಗಳ ಪ್ರಕಾರ, 2014ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ 35 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದ ರಾಜಕೀಯ ಪಕ್ಷಗಳು, 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅದು ದುಪ್ಪಟ್ಟಾಗಿ 60 ಸಾವಿರ ಕೋಟಿ ರೂಪಾಯಿ ದಾಟಿತ್ತು. ಕಾಂಚಾಣ ಕುಣಿತ ವಿಧಾನಸಭೆ ಚುನಾವಣೆಗಳಲ್ಲೂ ಮುಂದುವರಿದು ಕಪ್ಪುಹಣ ಯಾವುದೇ ಅಡೆತಡೆಯಿಲ್ಲದೆ ಹರಿದು ಹೋಗುತ್ತಿದೆ.
ಚುನಾವಣಾ ಸುಧಾರಣೆಯ ಬಗ್ಗೆ ಈ ಹಿಂದೆ ನ್ಯಾಯಮೂರ್ತಿ ಚಾಗ್ಲಾ ಅವರು ಹೇಳಿದಂತೆ, ಚುನಾವಣೆಯ ಪಾವಿತ್ರ್ಯತೆಯನ್ನು ಜನಪ್ರತಿನಿಧಿಗಳು ಮಾತ್ರವಲ್ಲ, ಮತದಾರರೂ ಕೂಡ ಕಾಪಾಡಬೇಕು ಎಂದಿದ್ದರು. ಆದರೆ, ಈ ಮಾತಿನ ತದ್ವಿರುದ್ಧವಾಗಿ ಜನರು ಆಮಿಷಗಲಳಿಗೆ ಬಲಿಯಾಗಿ ಹಣಕ್ಕಾಗಿ ಬಹಿರಂಗವಾಗಿಯೇ ಬೇಡಿಕೆ ಸಲ್ಲಿಸುತ್ತಾರೆ. ಈ ವಿಷವರ್ತುಲದಲ್ಲಿ ಸಿಲುಕಿದ ರಾಜಕೀಯ ಪಕ್ಷಗಳು, ಚುನಾವಣೆಯಲ್ಲಿ ಕೋಟಿ-ಕೋಟಿ ಹಣ ಖರ್ಚು ಮಾಡಿ, ನಂತರ ಅದನ್ನು ಮರು ಪಡೆಯಲು ಅನಿಯಂತ್ರಿತ ಭ್ರಷ್ಟಾಚಾರವನ್ನು ಮಾಡುತ್ತಾರೆ.