ಹೈದರಾಬಾದ್:ಕೊರೊನಾ ಎಂಬ ಸಾಂಕ್ರಾಮಿಕ ಮಹಾಮಾರಿ ಈವರೆಗೆ ಸುಮಾರು 4,25,000 ಜನರ ಮೇಲೆ ಪರಿಣಾಮ ಬೀರಿದೆ. 13,700 ಜನರ ಜೀವವನ್ನು ಆಪೋಶನ ತೆಗೆದುಕೊಂಡಿದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೋಂಕು ತಡೆಗಟ್ಟಲು ಎಲ್ಲಾ ಬಗೆಯಲ್ಲಿಯೂ ಅತ್ಯುತ್ತಮ ಯತ್ನ ನಡೆಸಿವೆ.
ವಿವಿಧ ಸಾಂಕ್ರಾಮಿಕ ರೋಗಗಳ ವಿರುದ್ಧ ಟೊಂಕಕಟ್ಟಿ ನಿಂತಿರುವ ಅಧಿಕಾರಿಗಳಿಗೆ ಋತುಮಾನದ ಬದಲಾವಣೆ ಅಂದರೆ, ಮಳೆಗಾಲದ ಪ್ರಾರಂಭ ಆಗಿರುವುದು ಮತ್ತಷ್ಟು ತಲೆನೋವಾಗಿ ಪರಿಣಮಿಸಿದ್ದು, ಸಾರ್ವಜನಿಕರು ಸಂದಿಗ್ಧತೆ ಎದುರಿಸುತ್ತಿದ್ದಾರೆ. ಹಂದಿ ಜ್ವರ ( ಎಚ್ 1 ಎನ್ 1 ) ವೈರಸ್‌ಗೆ ಸಂಬಂಧಿಸಿದಂತೆ ವರದಿ ಆಗುತ್ತಿರುವ ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ ಎಂದು ಕೇಂದ್ರ ಸರ್ಕಾರ ಈ ವರ್ಷ ಸಂಸತ್ತಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ.
ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ ಹಾಗೂ ತಮಿಳುನಾಡಿನಲ್ಲಿ ಅತಿ ಹೆಚ್ಚು ಹಂದಿ ಜ್ವರ ಪ್ರಕರಣಗಳು ವರದಿ ಆಗಿವೆ. ಸಾಂಕ್ರಾಮಿಕ ರೋಗಗಳ ಪಿಡುಗು ಈಗಾಗಲೇ ದೇಶದಲ್ಲಿ ಪ್ರಾರಂಭ ಆಗಿದೆ. ಇಂತಹ ಸಂದರ್ಭದಲ್ಲಿ ಕೇವಲ ಕೊರೊನಾ ವೈರಸ್ ನಿಯಂತ್ರಣ ಮತ್ತು ಚಿಕಿತ್ಸೆಗೆ ಮಾತ್ರ ಗಮನ ಕೇಂದ್ರೀಕರಿಸಿ ಇತರೆ ರೋಗಗಳಿಗೆ ಲಸಿಕೆ ಅಥವಾ ರೋಗನಿರೋಧಕ ಪ್ರಕ್ರಿಯೆಗೆ ಮುಂದಾಗದೇ ಹೋದರೆ ಅಂತಿಮವಾಗಿ ಸಾಮಾನ್ಯ ಸಾಂಕ್ರಾಮಿಕ ರೋಗ ಕೂಡ ಭೀಕರ ಪಿಡುಗಾಗಿ ಪರಿಣಮಿಸುವ ಸ್ಥಿತಿ ನಿರ್ಮಾಣ ಆಗಬಹುದು, ಇದರಿಂದಾಗಿ ಕೊರೊನಾ ರೀತಿಯದ್ದೇ ಆದ ಅಥವಾ ಅದಕ್ಕೂ ಭೀಕರ ಎನಿಸಿದ ಮತ್ತೊಂದು ರೋಗ ತನ್ನ ಕರಾಳ ಹಸ್ತ ಚಾಚಬಹುದು ಎಂಬ ಭೀತಿ ಇದೆ.
ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ, ಅತಿಸಾರ, ಟೈಫಾಯಿಡ್, ಅಪಾಯಕಾರಿ ವೈರಲ್ ಜ್ವರಗಳು, ಕಾಲರಾ, ಮೆನಿಂಜೈಟಿಸ್, ಕಾಮಾಲೆ ರೀತಿಯ ರೋಗಗಳು ಮಳೆಗಾಲದಲ್ಲಿ ಸಾಮಾನ್ಯವಾಗಿದ್ದು ಪ್ರಾಣಕ್ಕೆ ಸಂಚಕಾರ ತಂದೊಡ್ಡಬಹುದಾದ ಕಾಯಿಲೆಗಳಿಗೆ ಮುನ್ನುಡಿ ಬರೆಯುತ್ತವೆ. ಕೊರೊನಾ ಲಕ್ಷಣ ಇರುವ ರೋಗಿಗಳಿಗೆ ಡೆಂಗ್ಯೂ ಆವರಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು ಮುಂಬೈನಲ್ಲಿ ಈಗಾಗಲೇ ಈ ಕುರಿತು ವರದಿ ಆಗಿದೆ.
ಸಾಮಾನ್ಯ ಮತ್ತು ಕಾಲಿಕವಾದ ಶೀತ, ಕೆಮ್ಮು ಮತ್ತು ಜ್ವರದ ಸಾಮಾನ್ಯ ಲಕ್ಷಣಗಳು ಕೊರೊನಾದ ಲಕ್ಷಣ ಕೂಡ ಆಗಿದ್ದು ದೇಶದ ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿವೆ. ‘ ಮಳೆಗಾಲ ಆರಂಭ ಆಗಲಿರುವ ಹಿನ್ನೆಲೆಯಲ್ಲಿ ಕೊರೊನಾ ಅಲ್ಲದ ರೋಗಗಳ ನಿರ್ಮೂಲನೆಗೆ ವೈದ್ಯಕೀಯ ವ್ಯವಸ್ಥೆಗಳನ್ನು ಬಲಪಡಿಸಬೇಕು ಮತ್ತು ಸನ್ನದ್ಧವಾಗಿ ಇಟ್ಟುಕೊಳ್ಳಬೇಕು ’ ಎಂದು ಐದು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದರು. ಮಾರಕ ಜ್ವರಗಳು ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸುತ್ತಿರುವಾಗ ಕೋವಿಡ್ ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ !
ಕಲುಷಿತ ನೀರು, ಆಹಾರ, ಗಾಳಿ ಹಾಗೂ ಕೀಟಗಳಿಂದ ಪಸರಿಸುವ ರೋಗಗಳಾದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ, ಅತಿಸಾರ, ಕಾಮಾಲೆ ಹಾಗೂ ಟೈಫಾಯಿಡ್ ಹರಡುವುದನ್ನು ತಡೆಗಟ್ಟಲು ಅತ್ಯಾಧುನಿಕ ವ್ಯವಸ್ಥೆ ರೂಪಿಸುವ ಅವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರ ಜನವರಿಯಲ್ಲಿ ಅಭಿಪ್ರಾಯಪಟ್ಟಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಪದವಿ ಪೂರ್ಣಗೊಳಿಸಿದ ವೈದ್ಯರಿಗೆ ಕ್ಲಿನಿಕಲ್ ಅಲ್ಲದ ವಲಯದಲ್ಲಿ ಜವಾಬ್ದಾರಿಗಳನ್ನು ವಹಿಸುವುದರಿಂದ ಸೋಂಕು ತಡೆಗಟ್ಟುವಿಕೆಗೆ ಮಾತ್ರ ಅಲ್ಲದೆ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ರೀತಿಯ ಜೀವನಶೈಲಿ ಕಾಯಿಲೆಗಳ ವಿರುದ್ಧ ಸೆಣಸಲು ಅನುಕೂಲ ಆಗಲಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ಈಗಾಗಲೇ ಸೂಚಿಸಿದೆ.
ಕಲಾ-ಅಜರ್, ಫಿಲೇರಿಯಾ ರೀತಿಯ ವಿವಿಧ ರೋಗಗಳ ಸಂಪೂರ್ಣ ನಿರ್ಮೂಲನೆಯ ಗುರಿ ಸರ್ಕಾರಗಳ ಎದುರು ಇತ್ತು. ಆದರೆ ಕೋವಿಡ್ -19 ಹದ್ದುಬಸ್ತಿನಲ್ಲಿ ಇಡಲು ಮತ್ತು ಲಾಕ್‌ಡೌನ್ ಅನುಷ್ಠಾನಕ್ಕೆ ಒತ್ತು ನೀಡಲು ಮುಂದಾಗಿದ್ದರಿಂದಾಗಿ, ಇವುಗಳ ನಿರ್ಮೂಲನೆ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಪ್ರತಿವರ್ಷ 40 ಲಕ್ಷಕ್ಕೂ ಹೆಚ್ಚಿನ ಕ್ಷಯರೋಗ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಮಲೇರಿಯಾ ಸೋಂಕು ಕೂಡ ಅಷ್ಟೇ ವ್ಯಾಪಕವಾಗಿ ಇದೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ( ಜಿ ಬಿ ಡಿ ನಿಯತಕಾಲಿಕ ) ನಡೆಸಿದ ಅಧ್ಯಯನದ ಪ್ರಕಾರ ಭಾರತದ ಎಲ್ಲೆಡೆ ದಿನಕ್ಕೆ ಸುಮಾರು 11,000 ಜನರು ‘ ಪಟ್ಟಿಮಾಡಿದ ಮಾರಣಾಂತಿಕ ಕಾಯಿಲೆಗಳ ’ ಮೊದಲ ಐದು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ದೇಶದ ಸಾವಿರಾರು ಡೆಂಗ್ಯೂ ಪ್ರಕರಣಗಳ ಬಗ್ಗೆ ಗಂಭೀರವಾಗಿ ಗಮನ ಸೆಳೆದಿರುವ ತೆಲಂಗಾಣ ಹೈಕೋರ್ಟ್, ಪ್ರತಿ ಸಾವಿಗೆ ಶೀಘ್ರ ಪರಿಹಾರ ನೀಡಬೇಕಿದ್ದು ಕಾಯಿಲೆಯನ್ನು ತಡೆಗಟ್ಟಲು ಕಾಳಜಿ ವಹಿಸಬೇಕು ಎಂದು ನೇರವಾಗಿ ಸೂಚನೆ ನೀಡಿದೆ. ರೋಗಗಳ ಋತು ಎನಿಸಿಕೊಂಡ ಮಳೆಗಾಲದ ಆರಂಭಕ್ಕೆ ಮುನ್ನ ಸೊಳ್ಳೆ ಸಂತಾನೋತ್ಪತ್ತಿ ತಾಣಗಳ ನಿರ್ಮೂಲನೆ ಮತ್ತು ಪರಿಸರ ನೈರ್ಮಲ್ಯ ಅಗತ್ಯ ಕೆಲಸ ಎಂಬುದು ನಿಜ.
ಸರ್ಕಾರಿ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಲ್ಲಿ ವೈದ್ಯರು ಹಾಗೂ ಶುಶ್ರೂಷಾ ಸಿಬ್ಬಂದಿ ಕೊರತೆ ಕೂಡ ಮತ್ತೊಂದು ಕಹಿ ಸಂಗತಿ. ಕೈ ತೊಳೆಯುವುದು ಮತ್ತು ಮುಖಗವಸು ಬಳಕೆ ರೀತಿಯ ಕೊರೊನಾ ಕಡ್ಡಾಯ ತಡೆಗಟ್ಟುವ ಕ್ರಮಗಳು ಸ್ವಲ್ಪ ರಕ್ಷಣೆ ನೀಡಬಹುದಾದರೂ, ಸೊಳ್ಳೆ ಆವಾಸಸ್ಥಾನಗಳು ಮತ್ತು ಸಂತಾನೋತ್ಪತ್ತಿಗೆ ಅವಕಾಶ ನೀಡದೆ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿ ಇಡುವುದು ಕಡ್ಡಾಯ ಆಗಿದೆ. ಮಾತ್ರವಲ್ಲ ಇದು ನಮ್ಮಲ್ಲಿ ಪ್ರತಿಯೊಬ್ಬರೂ ತಪ್ಪದೆ ಸ್ವಯಂಪ್ರೇರಣೆಯಿಂದ ಪಾಲಿಸಬೇಕಾದ ನಿಯಮ ಆಗಬೇಕಿದೆ.