10 ವರ್ಷದ ಮಗುವೊಂದು ಅಳುತ್ತ ಹೈದರಾಬಾದ್‌ನಿಂದ ದೆಹಲಿಗೆ ಹೊರಟಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನದಲ್ಲಿ ಕುಳಿತಿದ್ದುದನ್ನು ಕಂಡು ಏರ್ ಹೋಸ್ಟೆಸ್ ಅಮೃತಾ ಅಹ್ಲುವಾಲಿಯಾ ವಿಚಾರಿಸಿದಾಗ, 1991ರ ಆಗಸ್ಟ್‌ನಲ್ಲಿ ಮಾನವ ಕಳ್ಳಸಾಗಣೆ ಎಂಬ ಪೆಡಂಭೂತ ಜಗತ್ತಿಗೆ ಅನಾವರಣವಾಗಿತ್ತು. ಈಕೆಯ ಬಳಿ ವಿಚಾರಿಸಿದಾಗ, ತನ್ನನ್ನು 60 ಅಥವಾ 70 ವರ್ಷದ ವ್ಯಕ್ತಿಗೆ ಮದುವೆ ಮಾಡಲಾಗಿದೆ. ಆತ ನನ್ನನ್ನು ಗಲ್ಫ್‌ಗೆ ಕರೆದುಕೊಂಡು ಹೋಗುತ್ತಿದ್ದಾನೆ ಎಂದು ಮಗು ಹೇಳಿತ್ತು. ದೇಶದಿಂದ ಹೊರಗೆ ಮಗುವನ್ನು ಕರೆದುಕೊಂಡು ಹೋಗುವುದನ್ನು ಏರ್ ಹೋಸ್ಟೆಸ್ ತಡೆದರು. ಅಷ್ಟೇ ಅಲ್ಲ, ಆ ಮಗುವನ್ನು ಮದುವೆಯಾದ ವ್ಯಕ್ತಿಗೆ ಶಿಕ್ಷೆ ಕೊಡಿಸುವಲ್ಲಿಯೂ ಏರ್ ಹೋಸ್ಟೆಸ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಆತ ಜಾಮೀನು ಪಡೆದು ಹೊರಬಂದ ನಂತರ, ನಕಲಿ ಪಾಸ್‌ಪೋರ್ಟ್ ಬಳಸಿ ದೇಶವನ್ನು ತೊರೆದಿದ್ದು ಬೇರೆಯದೇ ಸಂಗತಿ.
ಇದಾದ ನಂತರ ಸ್ವಲ್ಪ ದಿನಗಳಲ್ಲೇ ಕುದುರೆ ರೇಸ್‌ಗಾಗಿ, ಗಲ್ಫ್ ಕೋಟ್ಯಾಧೀಶರಿಗೆ 4 ರಿಂದ 10 ವರ್ಷಗಳ ಮಕ್ಕಳನ್ನು ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂತು. ಈ ಮಕ್ಕಳನ್ನು ಕುದುರೆಯ ಬಾಲಕ್ಕೆ ಕಟ್ಟಿ ಜಾಕಿಗಳ ರೀತಿ ಬಳಸಲಾಗುತ್ತಿತ್ತು. ಈ ಮಕ್ಕಳು ಎಷ್ಟು ಜೋರಾಗಿ ಕಿರುಚುತ್ತಾರೋ ಅಷ್ಟು ಜೋರಾಗಿ ಕುದುರೆ ಓಡುತ್ತಿತ್ತು. ಈ ಮಕ್ಕಳನ್ನು ಸರಿಯಾಗಿ ಕಟ್ಟದಿದ್ದರೆ, ಬಿದ್ದು ತೀವ್ರವಾಗಿ ಗಾಯಗೊಳ್ಳುತ್ತಿದ್ದರು. ಈ ರೇಸ್‌ನಲ್ಲಿ ಬದುಕುಳಿದರೆ ಮತ್ತೊಂದು ರೇಸ್‌ಗೆ ಅವರನ್ನು ಬಳಸಲಾಗುತ್ತಿತ್ತು. ಮಕ್ಕಳನ್ನು ಲೈಂಗಿಕವಾಗಿಯೂ ಬಳಸಿಕೊಳ್ಳುತ್ತಿದ್ದರು.
ಇನ್ನೂ ಇತ್ತೀಚೆಗೆ ಮಕ್ಕಳನ್ನು ಗುತ್ತಿಗೆದಾರರು ಇಟ್ಟಿಗೆ ಗಾರೆಗಳಲ್ಲಿ ಕೆಲಸಕ್ಕೆ ಬಳಸುತ್ತಿರುವುದು ಪತ್ತೆಯಾಗಿತ್ತು. ವಯಸ್ಕ ಮಹಿಳೆಯರು ಮತ್ತು ಮಕ್ಕಳನ್ನು ಇಂತಹ ಗಾರೆಗಳಲ್ಲಿ ಜೀತದಾಳುಗಳ ರೀತಿ ನಡೆಸಿಕೊಳ್ಳಲಾಗುತ್ತಿದೆ. ವಿಪರೀತ ಕೆಲಸ ಮಾಡಿಸಿಕೊಂಡು ಪುಡಿಗಾಸನ್ನು ಇವರಿಗೆ ನೀಡಲಾಗುತ್ತಿತ್ತು. 2013 ರಲ್ಲಿ ಕೆಲವು ಗಾರೆಗಳಲ್ಲಿ ಕೆಲಸಗಾರರು ಗುತ್ತಿಗೆದಾರರ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಇದರ ಪರಿಣಾಮ ತೀವ್ರವಾಗಿತ್ತು. ಅವರನ್ನು ಹಿಡಿದ ಗುತ್ತಿಗೆದಾರರು ಅಮಾನವೀಯವಾಗಿ ಕೈ, ಕಾಲುಗಳನ್ನು ಕತ್ತರಿಸಿ ಹಾಕಿದ್ದರು.
ಕೆಲವೇ ದಿನಗಳ ಹಿಂದೆ, ವಾರಕ್ಕೆ 250 ರೂ.ಗೆ ಇಟ್ಟಿಗೆ ಗಾರೆಯಲ್ಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಜನಾಂಗದ ಯುವತಿ ಮಾನ್ಸಿ ಬರಿಹಾ ತೋರಿದ ಧೈರ್ಯದ ಬಗ್ಗೆ ದಿನಪತ್ರಿಕೆಯೊಂದರಲ್ಲಿ ವರದಿಯಾಗಿತ್ತು. ಇವರು ಕೆಲಸ ತೊರೆಯಲು ನಿರ್ಧರಿಸಿದಾಗ ಗುತ್ತಿಗೆದಾರರು ಮತ್ತು ಅವರ ಗೂಂಡಾಗಳು ಅಮಾನವೀಯವಾಗಿ ಥಳಿಸಿದ್ದರು. ಈ ಘಟನೆಯನ್ನು ಮಾನ್ಸಿ ರೆಕಾರ್ಡ್ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದರು. ಇದು ಭಾರಿ ವೈರಲ್ ಆಗಿ ಅಧಿಕಾರಿಗಳವರೆಗೆ ತಲುಪಿತ್ತು. ಇದು ತಮಿಳುನಾಡಿನಲ್ಲಿನ 6000 ಕ್ಕೂ ಹೆಚ್ಚು ಗಾರೆ ಕೆಲಸಗಾರರನ್ನು ರಕ್ಷಿಸಲು ಕಾರಣವಾಗಿತ್ತು.
ಈ ಪೈಕಿ ಕೆಲವು ಸನ್ನಿವೇಶಗಳಲ್ಲಿ ಮಾನವ ಕಳ್ಳಸಾಗಣೆಗೆ ಒಳಗಾದ ಸಂತ್ರಸ್ತರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದೂ ದಾಖಲಾಗಿದೆ. ವಿಶ್ವದ ಒಟ್ಟಾರೆ ಮಾನವ ಕಳ್ಳಸಾಗಣೆ ಸಂತ್ರಸ್ತರ ಪೈಕಿ ಶೇ. 70 ರಷ್ಟು ಮಹಿಳೆಯರು ಮತ್ತು ಹೆಣ್ಣು ಮಕ್ಕಳಾಗಿರುತ್ತಾರೆ ಎಂದು ವಿಶ್ವಸಂಸ್ಥೆಯ ಒಂದು ವರದಿ ಉಲ್ಲೇಖಿಸಿದೆ. ಲೈಂಗಿಕ ಬಳಕೆಯನ್ನು ಹೊರತುಪಡಿಸಿ ಅವರನ್ನು ಬೇರೆ ಯಾವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ? ಭಾರತದಲ್ಲೇನೂ ಈ ಪ್ರಮಾಣ ಕಡಿಮೆ ಇದೆ ಎಂದು ಹೇಳಲಾಗುವುದಿಲ್ಲ. ಆದರೆ ಎಷ್ಟೇ ಪ್ರಮಾಣದಲ್ಲಿ ಮಾನವ ಕಳ್ಳಸಾಗಣೆ ನಡೆಯುತ್ತಿದ್ದರೂ ಅದನ್ನು ಯಾವುದೇ ಕಾರಣಕ್ಕೂ ಸಮ್ಮತಿಸಲಾಗದು. ಲೈಂಗಿಕ ತೃಷೆಗೆ ಬಳಕೆಯಾಗುವ ಬಹುತೇಕರು ಬಡವರು ಮತ್ತು ಸಾಲ ತೆಗೆದುಕೊಂಡು ಮರುಪಾವತಿ ಮಾಡಲಾಗದ ಹಂತ ತಲುಪಿದವರಾಗಿರುತ್ತಾರೆ. ಬಡತನದಿಂದಾಗಿಯೇ ತಮ್ಮ ಮಕ್ಕಳನ್ನು ಪಾಲಕರು ಮಾರಾಟ ಮಾಡಿದ ಹಲವು ಉದಾಹರಣೆಗಳಿವೆ. ಸಣ್ಣ ವಯಸ್ಸಿನ ಬಾಲಕ ಮತ್ತು ಬಾಲಕಿಯರನ್ನು ಅಪಹರಿಸಿ ಕಳ್ಳಸಾಗಣೆ ಮಾಡುವ ಜಾಲಕ್ಕೆ ಮಾರಾಟ ಮಾಡಿದ ಉದಾಹರಣೆಗಳೂ ಇವೆ.
ಇನ್ನೊಂದು ರೀತಿಯ ಮಾನವ ಕಳ್ಳಸಾಗಣೆಯು ಸ್ವಲ್ಪ ಸುಧಾರಿತ ಶೈಲಿಯಲ್ಲಿ ನಡೆಯುತ್ತದೆ. ಬಾಲ್ಯ ವಿವಾಹ ಅಥವಾ ಬಾಲ ಕಾರ್ಮಿಕತನ ಅಥವಾ ಜೀತದಾಳು ರೂಪದಲ್ಲೂ ನಡೆಯುತ್ತದೆ. ಇದು ಹಿಂದಿನ ಕಾಲದ ಜೀತಕ್ಕಿಂತ ಯಾವ ರೀತಿಯಲ್ಲೂ ಭಿನ್ನವಾಗಿಲ್ಲ. ಇನ್ನೂ ಇತ್ತೀಚಿನ ಹೊಸ ಮಾನವ ಕಳ್ಳಸಾಗಣೆ ಎಂದರೆ, ಸೈಬರ್ ಕಳ್ಳಸಾಗಣೆ. ಇಲ್ಲಿ ಬಾಲಕಿಯರನ್ನು ಕಳ್ಳಸಾಗಣೆದಾರರು ಮತ್ತು ಅವರ ಏಜೆಂಟರುಗಳು ಇಂಟರ್ನೆಟ್‌ನಲ್ಲಿ ಪ್ರಚೋದಿಸುತ್ತಾರೆ. ಕೊನೆಗೆ ಅವರನ್ನು ಲೈಂಗಿಕ ವ್ಯಾಪಾರಕ್ಕೆ ಬಳಸಿಕೊಳ್ಳುತ್ತಾರೆ. ಎಲ್ಲ ಸಂವಹನವೂ ಇಂಟರ್ನೆಟ್‌ನಲ್ಲಿ ನಡೆಯುವುದರಿಂದ, ಏಜೆಂಟರು ಮತ್ತು ಗುತ್ತಿಗೆದಾರರು ಯಾರೆಂಬುದೇ ಸಂತ್ರಸ್ತರಿಗೆ ತಿಳಿದಿರುವುದಿಲ್ಲ. ಇದರಿಂದ ಕಳ್ಳಸಾಗಣೆದಾರರನ್ನು ಪತ್ತೆ ಮಾಡುವುದು ಕಷ್ಟವಾಗುತ್ತದೆ. ಅಷ್ಟೇ ಅಲ್ಲ, ಗುರುತಿಸಿದರೂ ಅವರ ಅಪರಾಧವನ್ನು ಸಾಬೀತುಪಡಿಸಿ ಶಿಕ್ಷೆ ವಿಧಿಸುವುದು ದುಸ್ಸಾಧ್ಯವಾಗುತ್ತದೆ.