ನಮ್ಮ ದೇಶದ ಪ್ರಧಾನ ಬೆಳೆಗಳಲ್ಲೊಂದು ಕಬ್ಬು. ದೇಶದ ಉದ್ದಗಲಕ್ಕೂ ಕಬ್ಬಿನ ಬೆಳೆ ಬೆಳೆಯಲಾಗುತ್ತದೆ. ಒಟ್ಟಾರೆ ದೇಶಾದ್ಯಂತ ಸುಮಾರು ಐದು ಕೋಟಿ ಕುಟುಂಬಗಳು ಕಬ್ಬು ಬೆಳೆ ಹಾಗೂ ಸಕ್ಕರೆ ಉದ್ಯಮ ಅವಲಂಬಿಸಿವೆ. ಜಾಗತಿಕವಾಗಿಯೂ ಭಾರತ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶಗಳಲ್ಲೊಂದು ಎಂಬ ಹಿರಿಮೆ ಹೊಂದಿದೆ. ದಕ್ಷಿಣ ಅಮೇರಿಕಾದ ಬ್ರೆಜಿಲ್ ನಂತರ ವಿಶ್ವದಲ್ಲೇ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರ ಭಾರತ.
ಆದರೆ ದುರಂತವೆಂದರೆ, ಈ ಸಕ್ಕರೆ ಸಿಹಿ, ಕಬ್ಬು ಬೆಳೆಗಾರರಿಗೆ ಸಿಗುತ್ತಿಲ್ಲ. ಜಾಗತಿಕವಾಗಿ ಸಕ್ಕರೆ ಉತ್ಪಾದನೆಯಲ್ಲಿ ಭಾರತದ ಪಾಲು ಸುಮಾರು 17%ದಷ್ಟಿದೆ. ಆದರೆ, ಇಷ್ಟೆಲ್ಲವಿದ್ದರೂ, ಪ್ರತಿ ವರ್ಷ ಸಕ್ಕರೆ ಕಾರ್ಖಾನೆಗಳ ಹಾಗೂ ರೈತರ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಕಬ್ಬು ನುರಿಸುವ ಹಂಗಾಮು ಆರಂಭವಾಗುತ್ತಿದ್ದಂತೆ, ಒಂದಲ್ಲ ಒಂದು ಬಿಕ್ಕಟ್ಟು ಉದ್ಭವಿಸುತ್ತದೆ.
ರೈತರ ಆರೋಪವೆಂದರೆ, ಅವರು ಬೆಳೆದ ಕಬ್ಬಿಗೆ ಉತ್ತಮ ಬೆಲೆ ದೊರೆಯುವುದಿಲ್ಲ ಎನ್ನುವುದು. ಕಾರ್ಖಾನೆಗಳ ಸಮಸ್ಯೆ ಅವುಗಳು ಉತ್ಪಾದಿಸುವ ಸಕ್ಕರೆಗೆ ಬೇಡಿಕೆ ಇಲ್ಲ ಎಂಬುದು. ಇದೀಗ ಪರಿಸ್ಥಿತಿ ಅದೆಷ್ಟು ಹದಗೆಡುತ್ತಿದೆ ಎಂದರೆ, ಕಬ್ಬು ವ್ಯವಸಾಯದಿಂದ, ರೈತ ನಿಧಾನವಾಗಿ ದೂರ ಸರಿಯುವಂತಾಗಿದೆ. ತೆಲುಗು ರಾಜ್ಯಗಳಲ್ಲಿ ಇಂತಹ ಒಂದು ಆತಂಕದ ಬೆಳವಣಿಗೆ ರೂಪುಗೊಂಡಿದೆ. ಇದು, ಎಲ್ಲರನ್ನೂ ಆತಂಕ್ಕೆ ದೂಡಿದೆ.
ಅಸ್ತಿತ್ವಕ್ಕೆ ಸವಾಲು: ದೇಶದ ಸಕ್ಕರೆ ಉದ್ಯಮ, ಹಿಂದೆಂದಿಗಿಂತಲೂ ತೀವ್ರವಾದ, ಸಂಕೀರ್ಣ ಸವಾಲು-ಬಿಕ್ಕಟ್ಟನ್ನು ಇಂದು ಎದುರಿಸುತ್ತಿದೆ. ಕಬ್ಬು ಕೃಷಿ , ಸಕ್ಕರೆ ಉತ್ಪಾದನೆ ಮತ್ತು ನುರಿಸಿದ ಬಳಿಕ ಶೇಕಡಾವಾರು ಸಕ್ಕರೆ ಉತ್ಪಾದನೆಯಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ದೇಶದ ಮೊದಲ ಮೂರು ಸ್ಥಾನಗಳಲ್ಲಿವೆ. ದೇಶದ ಕಬ್ಬು ಕೃಷಿ ಹಾಗೂ ಸಕ್ಕರೆ ಉತ್ಪಾದನೆಯಲ್ಲಿ ಈ ಮೂರು ರಾಜ್ಯಗಳು ಶೇಕಡಾ 80ರಷ್ಟು ಪಾಲು ಪಡೆದಿವೆ. ಕಳೆದ ಕೆಲ ವರ್ಷಗಳಲ್ಲಿ ದೇಶದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಒಂದು ಕ್ರಾಂತಿ ಸಂಭವಿಸಿದೆ. ದತ್ತಾಂಶಗಳ ಪ್ರಕಾರ ದೇಶದಲ್ಲಿ ಸಕ್ಕರೆ ಉತ್ಪಾದನೆಯು 2015-16ರಲ್ಲಿ 2.48 ಕೋಟಿ ಟನ್‌ಗಳಷ್ಟಿದ್ದರೆ, 2017-18ರಲ್ಲಿ ಇದು 3.23 ಕೋಟಿ ಟನ್‌ಗಳಿಗೆ ಏರಿಕೆ ಕಂಡಿತು. ಆದರೆ, ಮರು ವರ್ಷ ಅಂದರೆ, 2019-20ರಲ್ಲಿ ಸಕ್ಕರೆ ಉತ್ಪಾದನೆ 2.72 ಕೋಟಿ ಟನ್‌ಗಳಿಗೆ ಇಳಿಯಿತು.
ಈಗ ಕಬ್ಬು ನುರಿಸುವ ಹಂಗಾಮು ದೇಶಾದ್ಯಂತ ಬಿರುಸಾಗಿ ಸಾಗಿದೆ. ಆದರೆ, ದೇಶದಲ್ಲಿ ಸಕ್ಕರೆ ನುರಿಸುವ ಹಂಗಾಮು ಪ್ರಾರಂಭವಾದ ಎರಡು ತಿಂಗಳ ನಂತರ, ತೆಲುಗು ರಾಜ್ಯಗಳಲ್ಲಿ ಕೇವಲ ಎಂಟು ಗಿರಣಿಗಳು ಮಾತ್ರ ಕಬ್ಬು ನುರಿಸಲು ಆರಂಭಿಸಿವೆ. ಆಂಧ್ರಪ್ರದೇಶದ ಒಟ್ಟು 29 ಸಕ್ಕರೆ ನುರಿಸುವ ಕಾರ್ಖಾನೆಗಳಲ್ಲಿ 17 ಗಿರಣಿಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ. ಉಳಿದ 12ರಲ್ಲಿ ಕೇವಲ ಒಂಬತ್ತು ಕಾರ್ಖಾನೆಗಳು ಮಾತ್ರ ಈ ಬಾರಿ ಕಬ್ಬು ನುರಿಸಲು ಆರಂಭಿಸಿವೆ. ಇನ್ನು ನೆರೆಯ ತೆಲಂಗಾಣದಲ್ಲಿ ಈ ವರ್ಷ ಕೇವಲ ಏಳು ಗಿರಣಿಗಳು ಮಾತ್ರ ಕಬ್ಬು ನುರಿಸಲಿವೆ. ದಶಕಗಳಿಂದ ಸಶಕ್ತವಾಗಿದ್ದ ಸಕ್ಕರೆ ಕಾರ್ಖಾನೆಗಳು ಈಗ ನಷ್ಟವನ್ನು ಭರಿಸಲಾಗದ ಕಾರಣ ಬಾಗಿಲು ಹಾಕುತ್ತಿವೆ. ಅನೇಕ ಸಕ್ಕರೆ ಕಾರ್ಖಾನೆಗಳನ್ನು ಆಧುನೀಕರಿಸಲು ಸಾಧ್ಯವಾಗದೆ, ನಿರ್ವಹಣಾ ಸಾಮರ್ಥ್ಯದ ಕೊರತೆಯಿಂದಾಗಿ ನಷ್ಟ ಉಂಟಾಗಿ, ಅವುಗಳು ಮುಚ್ಚಲ್ಪಟ್ಟಿವೆ.
ಸಕ್ಕರೆ ಕಾರ್ಖಾನೆಗಳು ಏಕೆ ನಷ್ಟ ಅನುಭವಿಸುತ್ತಿವೆ? ಅವುಗಳು ಏಕೆ ಮುಚ್ಚಲ್ಪಡುತ್ತಿವೆ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಸುಮಾರು ಒಂದು ಟನ್ ಕಬ್ಬು ನುರಿಸಿದರೆ, 100 ಕೆಜಿ ಸಕ್ಕರೆ ಉತ್ಪಾದಿಸಬಹುದು. ಇದರಲ್ಲಿ, ನುರಿಸಿದ ಬಳಿಕ ಸಿಗುವ ಸಕ್ಕರೆ ಪ್ರಮಾಣ 10 ಶೇಕಡಾ. ಇದನ್ನು ರಿಕವರಿ ರೇಟ್ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಪ್ರಮಾಣ, ಉತ್ತರ ಪ್ರದೇಶ (ಶೇ 13), ಮಹಾರಾಷ್ಟ್ರ (ಶೇ 12) ಮತ್ತು ಕರ್ನಾಟಕ (ಶೇ 11) ರಷ್ಟಿದೆ. ತೆಲುಗು ರಾಜ್ಯಗಳಲ್ಲಿ ಇದು ಶೇಕಡಾ 9-9.5 ಮೀರುವುದಿಲ್ಲ. ಇದು ದೊಡ್ಡ ಸವಾಲು. ಇನ್ನೊಂದೆಡೆ, ಕೇಂದ್ರವು ಘೋಷಿಸಿದ ಬೆಂಬಲ ಬೆಲೆಗಳು ಅವೈಜ್ಞಾನಿಕವಾಗಿದ್ದು, ರೈತರಿಗೆ ನಷ್ಟವನ್ನುಂಟು ಮಾಡುತ್ತಿವೆ. ಕಬ್ಬಿನ ಬೆಳೆಗೆ, ಕೇಂದ್ರವು ಘೋಷಿಸಿರುವ ಬೆಂಬಲ ಬೆಲೆ ಕ್ವಿಂಟಲ್‌ಗೆ 285 ರೂ. ಇದು 2018-19ರಲ್ಲಿ 275 ರೂಪಾಯಿಗಳಾಗಿತ್ತು. ಅಂದರೆ, ಕೇವಲ ಹತ್ತು ರುಪಾಯಿ ಹೆಚ್ಚಳ. ಇದೇ ಅವಧಿಯಲ್ಲಿ ಕಬ್ಬು ಕತ್ತರಿಸುವ ಕೂಲಿ ದರ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ.
ಇದರ ಜೊತೆಗೆ, ಕಳೆದ ಮೂರು ವರ್ಷಗಳಲ್ಲಿ ರಿಕವರಿ ರೇಟ್ ಶೇ 10 ರಷ್ಟು ಎಂದು ಪರಿಗಣಿಸಲಾಗಿದೆ. ಈ ಮೊದಲು ಅದು ಶೇ 9.5 ಎಂದು ನಿಗದಿಪಡಿಸಲಾಗಿತ್ತು. ಒಂದೊಮ್ಮೆ ಈ ಪ್ರಮಾಣ ಶೇಕಡಾ 9.5ಕ್ಕಿಂತ ಕಡಿಮೆಯಾದರೆ ಕ್ವಿಂಟಲ್‌ಗೆ 270.75 ರೂ.ಗೆ ಬೆಲೆಯನ್ನು ಕಡಿತಗೊಳಿಸುವುದು ರೈತರನ್ನು ಮತ್ತಷ್ಟು ನಷ್ಟಕ್ಕೆ ದೂಡುತ್ತದೆ. ಕಾರ್ಮಿಕರ ಕೊರತೆ ಕಾರಣಕ್ಕಾಗಿ ಕಬ್ಬಿನ ಕಟಾವಿನಲ್ಲಿ ವಿಳಂಬವಾಗಿ, ಅದನ್ನು ನುರಿಸಲು ಸರಿಯಾದ ಸಮಯಕ್ಕೆ ಕಾರ್ಖಾನೆಗೆ ಸಾಗಿಸಲು ಸಾಧ್ಯವಾಗದಿದ್ದರೆ, ಕಬ್ಬಿನಲ್ಲಿನ ಸುಕ್ರೋಸ್ ಪ್ರಮಾಣ ಕಡಿಮೆಯಾಗಿ, ರೈತರಿಗೆ ನಷ್ಟವಾಗುತ್ತದೆ. ಈ ಎಲ್ಲದರ ನಡುವೆ, ನಮ್ಮ ಕಾರ್ಖಾನೆಗಳಲ್ಲಿ ಸಕ್ಕರೆಯ ಉತ್ಪಾದನಾ ವೆಚ್ಚ ಪ್ರತಿ ಕೆ.ಜಿ.ಗೆ 37-38 ರೂಪಾಯಿ. ಆದರೆ ಮಾರಾಟದ ಬೆಲೆ ಕೆ.ಜಿ.ಗೆ 31-32 ರೂ. ಹೀಗಿದ್ದರೆ, ಯಾವುದಾದರು ಒಂದು ಉದ್ಯಮವು ಬದುಕುಳಿಯಲು ಸಾಧ್ಯವೇ?
ಕೈಗಾರಿಕೆಗಳ ಆತಂಕ:ಇನ್ನು ಸಕ್ಕರೆ ಕಾರ್ಖಾನೆಗಳು ನಷ್ಟದ ದೊಡ್ಡ ಆತಂಕದಲ್ಲಿವೆ. ಸಕ್ಕರೆ ಕಾರ್ಖಾನೆಗಳ ಪ್ರಕಾರ, ಸಕ್ಕರೆ ಉತ್ಪಾದನೆ ಪ್ರಕ್ರಿಯೆಯಲ್ಲಿ ಉಂಟಾಗುವ ನಷ್ಟಕ್ಕೆ, ಕೇಂದ್ರ ಸರ್ಕಾರವು ಯಾವುದೇ ಪರಿಹಾರವನ್ನು ಖಾತರಿಪಡಿಸುತ್ತಿಲ್ಲ.
ಈ ನಡುವೆ, ಸಕ್ಕರೆ ಕಾರ್ಖಾನೆಗಳ ಸಂಕಷ್ಟ ನೀಗಿಸಲು, ಕೇಂದ್ರ ಸರಕಾರ ಕೂಡಾ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚಿನ ಲಾಭ ತಂದುಕೊಡಬಲ್ಲ ಉಪ ಉತ್ಪನ್ನಗಳ ಬಳಕೆಯತ್ತ ಅದು ಹೆಚ್ಚಿನ ಆಸಕ್ತಿ ತೋರಿದೆ. ಈ ಹಿನ್ನೆಲೆಯಲ್ಲಿ, ಸಕ್ಕರೆ ಉತ್ಪಾದನೆಗಿಂತ ಎಥೆನಾಲ್ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರವು ನಿರ್ಧರಿಸಿದೆ. ಸಕ್ಕರೆ ಉದ್ಯಮವನ್ನು ಬೆಂಬಲಿಸಲು ಕೇಂದ್ರ ಸರ್ಕಾರ ಕಳೆದ ವರ್ಷ 8,000 ಕೋಟಿ ರೂ ಪರಿಹಾರ ಘೋಷಿಸಿತ್ತು. ಇದರಲ್ಲಿ ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರವು ಸಕ್ಕರೆ ಕಾರ್ಖಾನೆಗಳಿಗೆ 5,732 ಕೋಟಿ ರೂ ನೀಡಿದೆ. ಹೀಗೆ ಹೆಚ್ಚಳವಾಗುವ ಎಥನಾಲ್ ಉತ್ಪಾದನೆಗೆ ಮಾರುಕಟ್ಟೆ ಕಂಡುಕೊಳ್ಳುವ ಸಲುವಾಗಿ, ಮುಂದಿನ ಹತ್ತು ವರ್ಷಗಳಲ್ಲಿ ಪೆಟ್ರೋಲ್‌ಗೆ ಶೇಕಡಾ 20ರಷ್ಟು ಎಥೆನಾಲ್ ಅನ್ನು ಬೆರೆಸುವ ಗುರಿಯನ್ನು ಕೇಂದ್ರ ಸರಕಾರ ಘೋಷಿಸಿದೆ. ಇದರ ಜೊತೆಗೆ ಎಥನಾಲ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಕೇಂದ್ರ ಗಮನಹರಿಸಿದೆ. ಇದರಿಂದಾಗಿ ಕಚ್ಚಾ ತೈಲ ಆಮದಿನ ಹೊರೆ ದೇಶದ ಮೇಲೆ ಕಡಿಮೆಯಾಗಲಿದೆ.
ಕಬ್ಬು ಕೃಷಿ ಕ್ಷೇತ್ರದಲ್ಲಿನ ಅನಿಶ್ಚಿತತೆ: ಇನ್ನು, ಸಕ್ಕರೆ ಕಾರ್ಖಾನೆಗಳಂತೆ ಅನಿಶ್ಚಿತತೆಯನ್ನು ಕಬ್ಬು ಬೆಳೆಗಾರರು ಕೂಡಾ ಎದುರಿಸುತ್ತಿದ್ದಾರೆ. ಕಬ್ಬನ್ನು ಕಾರ್ಖಾನೆಗೆ ಸಾಗಿಸಿದ ನಂತರ, ಅದರ ಮೊತ್ತವನ್ನು ಕಾರ್ಖಾನೆಗಳು ಸರಿಯಾದ ಸಮಯಕ್ಕೆ ಪಾವತಿಸದ ಕಾರಣ, ರೈತರು ಕಬ್ಬಿನ ಕೃಷಿಗೆ ಕೈ ಹಾಕಲು ಹೆದರುವಂತಾಗಿದೆ. ಇದರ ಪರಿಣಾಮವಾಗಿ, ತೆಲುಗು ರಾಜ್ಯಗಳಲ್ಲಿ ಕಬ್ಬು ಬೆಳೆಯುವ ಪ್ರದೇಶದ ವ್ಯಾಪ್ತಿ ಹಾಗೂ ಸಕ್ಕರೆ ಉತ್ಪಾದನೆ ಅನಿಶ್ಚಿತತೆಯೆಡೆಗೆ ಸಾಗಿದೆ. ಉದಾಹರಣೆಗೆ, 2006-07ರಲ್ಲಿ ಆಂಧ್ರ ಪ್ರದೇಶದಲ್ಲಿ ಸುಮಾರು ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿನ ಸಾಗುವಳಿ ನಡೆದಿತ್ತು. ಆದರೆ ಇದು ಈಗ ಸುಮಾರು 49 ಸಾವಿರ ಹೆಕ್ಟೇರ್‌ಗೆ ಇಳಿದಿದೆ. ಈ ಕುಗ್ಗುವಿಕೆ, ಕಬ್ಬು ಬೆಳೆಗಾರರು ಏಕೆ ಇದರ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂಬುದಕ್ಕೆ ಒಂದು ಉದಾಹರಣೆ. ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ಜೊತೆಗೆ, ಅದರ ಉಪಉತ್ಪನ್ನಗಳಾದ ಮೊಲಾಸಿಸ್, ಎಥೆನಾಲ್, ಕಬ್ಬಿನ ತಿರುಳು ಮತ್ತು ವಿದ್ಯುತ್ ಉತ್ಪಾದನೆಯಿಂದ ಹೆಚ್ಚುವರಿ ಆದಾಯ ದೊರೆಯುತ್ತದೆ. ಆದರೆ ರೈತನಿಗೆ ಬೇರೆ ಆದಾಯ ಮೂಲವಿಲ್ಲ. ಸಕ್ಕರೆ ಉತ್ಪಾದನೆ, ಮೊಲಾಸಸ್ ಇಳುವರಿ, ಎಥೆನಾಲ್ ಉತ್ಪಾದನೆ, ಮದ್ಯ ಮತ್ತು ಜಿಎಸ್‌ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹಿಸುತ್ತಿವೆ. ಆದಾಗ್ಯೂ, ಕಬ್ಬು ಕೃಷಿಯ ಹೆಚ್ಚುತ್ತಿರುವ ವೆಚ್ಚವನ್ನು ಭರಿಸಲು, ಉತ್ತಮ ಬೆಂಬಲ ದರವನ್ನು ಕಬ್ಬಿಗೆ ನಿಗದಿಪಡಿಸಲಾಗುತ್ತಿಲ್ಲ ಎಂದು ಕಬ್ಬು ಬೆಳೆಗಾರರ ಸಂಘಟನೆಗಳು ಆರೋಪಿಸುತ್ತಿವೆ.
ಕಬ್ಬು ಬೆಳೆಗಾರರ ಪ್ರಕಾರ, ಸರಕಾರ, ಕಬ್ಬು ಬೆಳೆ ವಿಮೆಯನ್ನು ಜಾರಿಗೆ ತರಬೇಕು. ಜೊತೆಗೆ, ರೈತರಿಗೆ ಉತ್ತರ ಪ್ರದೇಶದ ಮಾದರಿಯಲ್ಲಿ ಹೆಚ್ಚಿನ ಇಳುವರಿ ನೀಡುವ ಹೊಸ ಪ್ರಭೇದಗಳನ್ನು ಪೂರೈಸಬೇಕು ಮತ್ತು ಉತ್ತಮ ಬೆಂಬಲ ಬೆಲೆ ನೀಡಬೇಕು. ತಮ್ಮ ರಾಜ್ಯದ ರೈತರಿಗೆ, ಕಬ್ಬು ಬೆಳೆಯಲು ಪ್ರೋತ್ಸಾಹ ಧನಗಳನ್ನು ಘೋಷಿಸುವ ಮೂಲಕ, ಕಬ್ಬಿನ ಕೃಷಿಯಿಂದ ರೈತರು ಹೊರಗುಳಿಯುವುದನ್ನು ತಪ್ಪಿಸಬಹುದು. ಆ ಮೂಲಕ ಸಕ್ಕರೆ ಕಾರ್ಖಾನೆಗಳನ್ನು ಕೂಡಾ ರಕ್ಷಿಸಲು ಸಾಧ್ಯವಿದೆ ಎನ್ನುತ್ತಾರೆ ರೈತರು.
ಕಬ್ಬು ಬೆಳೆಗಾರರ ಪ್ರಕಾರ, ಕಾರ್ಮಿಕರ ಕೊರತೆ ನೀಗಿಸಲು ಕಬ್ಬು ಕಟಾವು ಯಂತ್ರಗಳನ್ನು ಸಕ್ಕರೆ ಕಾರ್ಖಾನೆಗಳು ನೀಡಬೇಕು ಹಾಗೂ ಸಮಯಕ್ಕೆ ಸರಿಯಾಗಿ ಕಬ್ಬು ಕಟಾವು ಆದೇಶ ನೀಡಬೇಕು. ಇದು ಸಮಸ್ಯೆಯನ್ನು ನೀಗಿಸುತ್ತದೆ. ಈ ನಡುವೆ ಸಕ್ಕರೆ ಕಾರ್ಖಾನೆಗಳು, ತಮ್ಮ ಯಂತ್ರೋಪಕರಣಗಳನ್ನು ಆಧುನೀಕರಿಸಲು ಹಣಕಾಸಿನ ನೆರವಿನ ಭರವಸೆಯನ್ನು ಸರಕಾರಗಳಿಂದ ಅಪೇಕ್ಷಿಸುತ್ತಿವೆ. ಈ ಎಲ್ಲಾ ಉಪಕ್ರಮಗಳು, ಕಬ್ಬು ಬೆಳೆಯನ್ನು ಮತ್ತೊಮ್ಮೆ, ರೈತರ ನಡುವೆ ಜನಪ್ರಿಯಗೊಳಿಸಬಹುದು. ಈ ಹಿನ್ನೆಲೆಯಲ್ಲಿ, ಕೇಂದ್ರ ಸರಕಾರದ ಮುಂದಿನ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಆರ್ಥಿಕ ನೆರವಿನ ಭರವಸೆ ಅತ್ಯಗತ್ಯ: ಪ್ರಸ್ತುತ ದೇಶದಲ್ಲಿ 500 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಲ್ಲಿ 201 ಕಾರ್ಖಾನೆಗಳು ಭಟ್ಟಿ ಇಳಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಪೈಕಿ 121 ಕಾರ್ಖಾನೆಗಳು ಎಥೆನಾಲ್ ಉತ್ಪಾದಿಸುತ್ತವೆ. ಅವರ ಎಥೆನಾಲ್ ಉತ್ಪಾದನಾ ಸಾಮರ್ಥ್ಯ ಸುಮಾರು 380 ಕೋಟಿ ಲೀಟರ್. ದೇಶದ ಸಕ್ಕರೆ ಕಾರ್ಖಾನೆಗಳು ಮುಖ್ಯವಾಗಿ ಸಕ್ಕರೆ ಉತ್ಪಾದನೆ, ಕಚ್ಚಾ ಸಕ್ಕರೆ ಸಂಸ್ಕರಣೆ ಕಬ್ಬಿನ ಮೊಲಾಸಸ್ ಮತ್ತು ಕಬ್ಬಿನ ತಿರುಳಿನಿಂದ ತಮ್ಮ ಆದಾಯವನ್ನು ಗಳಿಸುತ್ತವೆ. ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ತಕ್ಕಂತೆ ಸಕ್ಕರೆ ಕಾರ್ಖಾನೆಗಳು ತಮ್ಮ ಯಂತ್ರೋಪಕರಣಗಳನ್ನು ಆಧುನೀಕರಿಸಲು ಪ್ರಯತ್ನಿಸುತ್ತಿವೆ. ಈ ವಿಷಯದಲ್ಲಿ ಕೇಂದ್ರವು ಸಕ್ಕರೆ ಉದ್ಯಮದ ಬೆಂಬಲಕ್ಕೆ ನಿಲ್ಲಬೇಕು ಎಂಬುದು ಉದ್ಯಮಿಗಳ ಮನವಿ. ತೈಲ ಕಂಪನಿಗಳು ತಮ್ಮ ಬಾಕಿ ಹಣವನ್ನು ತ್ವರಿತವಾಗಿ, ಸರಿಯಾದ ಸಮಯದಲ್ಲಿ ಪಾವತಿಸುತ್ತಿರುವುದರಿಂದ, ಎಥೆನಾಲ್ ಉತ್ಪಾದನೆ ಲಾಭದಾಯಕವಾಗುತ್ತದೆ.
ಸದ್ಯ, ಸಕ್ಕರೆ ಮಾರಾಟದ ಮೂಲಕ ಸಕ್ಕರೆ ಕಾರ್ಖಾನೆಗಳಿಗೆ ಸಮಯಕ್ಕೆ ಸರಿಯಾಗಿ ಹಣ ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಾಕಿ ಹಣವನ್ನು ರೈತರಿಗೆ ಸೂಕ್ತ ಸಮಯದಲ್ಲಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದು ಸಕ್ಕರೆ ಉದ್ಯಮವನ್ನು ನಾಶಮಾಡುತ್ತಿದೆ. ಈ ಕಾರಣಗಳಿಂದಾಗಿ ಕಳೆದ ಐದು ವರ್ಷಗಳಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳು ಮುಚ್ಚಿ ಹೋಗಿವೆ. ಈ ನಿಟ್ಟಿನಲ್ಲಿ, ಸರಕಾರದ ಮಧ್ಯಪ್ರವೇಶ ಅನಿವಾರ್ಯ.