ಕಳೆದ ಕೆಲವು ದಶಕಗಳಲ್ಲಿ ಭಾರತದಲ್ಲಿ ಹೆಚ್ಚಿನ ಮಟ್ಟದ ಸಾಮಾಜಿಕ ಪರಿವರ್ತನೆ ಕಂಡುಬಂದಿದೆ. ಸಾಮಾಜಿಕ ಒಳಗೊಳ್ಳುವಿಕೆ, ಸಾಮಾಜಿಕ ನೈತಿಕತೆ ಹಾಗೂ ಕಠಿಣ ದೃಷ್ಟಿಕೋನಗಳು ಹಿಂದಿಗಿಂತ ಹೆಚ್ಚು ಸೂಕ್ಷ್ಮವಾಗಿದ್ದರೂ ಸಹ, ಲೈಂಗಿಕ ಶಿಕ್ಷಣದ ವಿಷಯದಲ್ಲಿ ಇನ್ನೂ ಸಾಕಷ್ಟು ಪರಿವರ್ತನೆಗಳು ಆಗಬೇಕಿವೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳಷ್ಟೇ ಸ್ಥಗಿತವಾಗಿಲ್ಲ, ಇದುವರೆಗೆ ಲೈಂಗಿಕ ಶಿಕ್ಷಣವು ಎಷ್ಟರ ಮಟ್ಟಿಗೆ ಲಭ್ಯವಿತ್ತೋ ಅದು ಕೂಡಾ ಸಿಗದಂತೆ ಆಗಿಬಿಟ್ಟಿದೆ. ಕಲಿಕೆಯಲ್ಲಿ ಅವಶ್ಯಕವಾಗಿರುವ ಶಿಕ್ಷಕ - ವಿದ್ಯಾರ್ಥಿ ಮತ್ತು ಶಿಕ್ಷಕ - ತರಗತಿಗಳ ನಡುವಿನ ಸಂವಹನ ಬಹುತೇಕ ಸ್ಥಗಿತಗೊಂಡಿದೆ. ಬಹುತೇಕ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಈಗ ಬೋಧನೆಯ ಸಮಯದಲ್ಲಿ ಅವರು ಕೇವಲ ಮೊಬೈಲ್ ಪರದೆ ಮಾತ್ರ ನೋಡಬೇಕಾಗಿದ್ದು, ನೈಜವಾದ ಕಲಿಕೆ ಸಾಧ್ಯವಾಗದೇ ಆತಂಕ ಮತ್ತು ಒತ್ತಡವನ್ನು ಅನುಭವಿಸುತ್ತಿದ್ದಾರೆ.
ಗೆಳೆಯ-ಗೆಳತಿಯರು ಪರಸ್ಪರ ಸಂವಹನ ಹಾಗೂ ಹಂಚಿಕೊಳ್ಳುವ ಮೂಲಕ ಹೊಸತನವನ್ನು ಗ್ರಹಿಸುತ್ತಿದ್ದ ಸಾಧ್ಯತೆಗಳು ಈಗ ತೀರಾ ಕಡಿಮೆಯಾಗಿದ್ದು, ಅದರಲ್ಲಿಯೂ ಹದಿಹರೆಯದವರು ಈ ದೈಹಿಕ ಉಪಸ್ಥಿತಿಯ ಅಲಭ್ಯತೆಯಿಂದ ತುಂಬಾ ಕಷ್ಟ ಎದುರಿಸುತ್ತಿದ್ದಾರೆ. ಇದು ಒಂದು ಸಮಸ್ಯೆಯಾದರೆ, ಬಹುತೇಕ ಎಲ್ಲರೂ ಈಗ ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ, ಅಂತರ್ಜಾಲದಲ್ಲಿ ಬೆದರಿಕೆ ಹಾಗೂ ಕಿರುಕುಳವನ್ನು ಎದುರಿಸುವ ಅಪಾಯ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಲೈಂಗಿಕ ಶಿಕ್ಷಣಕ್ಕೆ ಸೂಕ್ತ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳದೇ ಹೋದರೆ, ಈ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗುತ್ತದೆ.
ವೇಗದ ಇಂಟರ್ನೆಟ್ ಸಂಪರ್ಕ ಮತ್ತು ಸಾಂಕ್ರಾಮಿಕ ರೋಗ ತಂದಿಟ್ಟಿರುವ ಮನೆಯಲ್ಲಿಯೇ ಅಧ್ಯಯನ ಮಾಡಬೇಕಾದ ಈ ಕಾಲದಲ್ಲಿ, ಲೈಂಗಿಕ ಶಿಕ್ಷಣದ ನಿಭಾಯಿಸುವಿಕೆ ಹಾಗೂ ವಿಧಾನ - ಎರಡರಲ್ಲೂ ಬದಲಾವಣೆ ಇರಬೇಕಿದೆ. ಸದ್ಯ ನಮ್ಮ ಪರಿಸರದಲ್ಲಿರುವ ಸಾಂಪ್ರದಾಯಿಕ ವಿಧಾನದಲ್ಲಿರುವ ಮೌಢ್ಯತೆಯ ಕುಂದುಗಳನ್ನು ಸರಿಪಡಿಸುವ ಮೂಲಕ ಲೈಂಗಿಕ ಶಿಕ್ಷಣವನ್ನು ನಿಜವಾಗಿಯೂ ಒಳಗೊಳ್ಳುವಂತಹ, ಪ್ರಗತಿಪರ ಹಾಗೂ ಲಿಂಗ-ತಟಸ್ಥವಾಗಿಸಬೇಕಿದೆ.
ಲೈಂಗಿಕ ಶಿಕ್ಷಣದ ವಿಷಾದಕರ ಕೊರತೆಯಿಂದಾಗಿ ದೇಶದ ಹೆಚ್ಚಿನ ಭಾಗಗಳಲ್ಲಿ ಲೈಂಗಿಕ ಕಿರುಕುಳ ಮತ್ತು ದೈಹಿಕ ಸ್ವಾಯತ್ತತೆಯ ಉಲ್ಲಂಘನೆ ಬಗ್ಗೆ ತಿಳಿದಿಲ್ಲ. ಒಪ್ಪಿಗೆ, ಉಲ್ಲಂಘನೆ ಮತ್ತು ಅತ್ಯಾಚಾರದ ನಡುವಿನ ಅಂತರ ಅರ್ಥವಾಗುವುದಿಲ್ಲ, ಹಾಗೂ ಇಂತಹ ಘಟನೆಗಳು ಸಂಭವಿಸಿದಾಗ ಸಾಮಾಜಿಕ ಕಳಂಕವು ಅವನ್ನು ಮುಚ್ಚಿಡುವಂತೆ ಮಾಡುತ್ತದೆ. ಇದರಿಂದಾಗಿ ಅಪರಾಧಿಗಳು ಇನ್ನಷ್ಟು ಧೈರ್ಯ ಹೊಂದುವಂತಾಗಿದೆ. ಯುನಿಸೆಫ್ ಮತ್ತು ಪ್ರಯಾಸ್ ಎಂಬ ಸರ್ಕಾರೇತರ ಸಂಸ್ಥೆಯ ಮೂಲಕ ಭಾರತೀಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಡೆಸಿದ ಅಧ್ಯಯನದ ಪ್ರಕಾರ, 5 ರಿಂದ 12 ವರ್ಷದೊಳಗಿನ 53% ಮಕ್ಕಳು ಲೈಂಗಿಕವಾಗಿ ಶೋಷಣೆಗೆ ಒಳಗಾಗಿದ್ದಾರೆ ಎನ್ನುವುದು ಆಘಾತಕಾರಿ ಸಂಗತಿ. ಬಹುತೇಕ ಪ್ರಕರಣಗಳಲ್ಲಿ, ಅಪರಾಧಿಗಳು ಸಂತ್ರಸ್ತರ ಹತ್ತಿರದ ಸಂಬಂಧಿಗಳಾಗಿರುತ್ತಾರೆ. ಹಾಗೂ ಈ ಎಲ್ಲಾ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗದೇ ಹೋಗುತ್ತವೆ.
ವಿಶಾಲ ದೃಷ್ಟಿಕೋನದ ಅವಶ್ಯಕತೆ:
ಭಾರತದಲ್ಲಿ ಲೈಂಗಿಕ ಶಿಕ್ಷಣವನ್ನು ಬಹುತೇಕವಾಗಿ ಹದಿಹರೆಯದ ಗರ್ಭಧಾರಣೆ ಮತ್ತು ಎಚ್ಐವಿ / ಏಡ್ಸ್‌ಗೆ ಸಮಾನ ಎಂಬಂತೆ ಪರಿಗಣಿಸಲಾಗುತ್ತದೆ. ಮುಟ್ಟನ್ನು ಅರ್ಥೈಸುವುದು ಸಹ ಬಹುತೇಕ ಹೀಗೆಯೇ. ಹೀಗಾಗಿ ಈ ವಿಷಯ ಕುರಿತಂತೆ ಇನ್ನಷ್ಟು ವಿಶಾಲವಾದ ತಿಳಿವಳಿಕೆ ಬೇಕಿದ್ದು, ಲಿಂಗ ಗುರುತಿಸುವಿಕೆ, ದೃಷ್ಟಿಕೋನ ಮತ್ತು ವೈವಿಧ್ಯತೆಗೆ ಅನುಗುಣವಾಗಿ ಇದನ್ನು ಸಾಧಿಸುವ ಅವಶ್ಯಕತೆಯಿದೆ.
ಮತ್ತೊಂದು ವಿಷಯವೆಂದರೆ, ಒಮ್ಮತದ ಹೊರತಾಗಿಯೂ ಮತ್ತು ಒಂದು ವಿಷಯವಾಗಿ ಇದು ಕಡ್ಡಾಯವಾಗಿದ್ದರೂ ಸಹ, ತಮ್ಮ ಪಠ್ಯಕ್ರಮದಲ್ಲಿ ಯಾವುದೇ ರೀತಿಯ ಲೈಂಗಿಕ ಶಿಕ್ಷಣವನ್ನು ಹೊಂದಿರದ ಸಾಕಷ್ಟು ಶಾಲೆಗಳು ಮತ್ತು ಇತರ ಸಂಸ್ಥೆಗಳು ಇನ್ನೂ ಸಾಕಷ್ಟಿವೆ. ‘ಲೈಂಗಿಕ ಮತ್ತು ಸಂತಾನೋತ್ಪತ್ತಿ ಹಕ್ಕುಗಳ ಯುವ ಒಕ್ಕೂಟ’ ದ ವರದಿಯ ಪ್ರಕಾರ, ರಾಜ್ಯಗಳ ಪ್ರೌಢ ಶಿಕ್ಷಣ ಮಂಡಳಿಯೊಂದಿಗೆ ಸಂಲಗ್ನವಾಗಿರುವ ಬಹುತೇಕ ಖಾಸಗಿ ಮತ್ತು ಸಾರ್ವಜನಿಕ ಶಾಲೆಗಳು ತಮ್ಮ ಪಠ್ಯಕ್ರಮದಲ್ಲಿ ಯಾವುದೇ ರೀತಿಯ ಲೈಂಗಿಕ ಶಿಕ್ಷಣವನ್ನು ಹೊಂದಿಲ್ಲ’.