ಪಿಡಿಎಂ (ಪಾಕಿಸ್ತಾನ್ ಡೆಮಾಕ್ರಟಿಕ್ ಮೂಮೆಂಟ್) 11 ಪಕ್ಷಗಳ ಸಂಘಟನೆಯಾಗಿದ್ದು, ಅಕ್ಟೋಬರ್ 25ರಂದು ಖ್ವೆಟ್ಟಾದಲ್ಲಿ ಮೂರನೇ ಬಾರಿಗೆ ತನ್ನ ಬೀದಿ ಬದಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಸರ್ಕಾರ ವಿರೋಧಿ ರಾಜಕೀಯ ಪಕ್ಷಗಳ ಒಕ್ಕೂಟವಾಗಿರುವ ಇದು, ದೇಶದ ಅಧಿಕಾರ ವಲಯದಲ್ಲಿ ಮಹತ್ವದ ಬದಲಾವಣೆಗೆ ಸೂಚಕವಾಗಿದೆ.
ಲಂಡನ್‌ನಿಂದ ಮಾಜಿ ಪ್ರಧಾನಿ ನವಾಜ್ ಷರೀಫ್ ವಿಡಿಯೋ ಲಿಂಕ್ ಮೂಲಕ ಮಾಡಿದ ತೀಕ್ಷ್ಣ ಭಾಷಣವು, ಪಾಕಿಸ್ತಾನದ ರಾಜಕೀಯ ಅಖಾಡಕ್ಕೆ ಅವರು ಪ್ರವೇಶಿಸುವ ಸೂಚನೆಯನ್ನು ನೀಡಿದೆ. 1999ರಲ್ಲಿ ಜನರಲ್ ಮುಷರಫ್ ಸೇನಾ ದಂಗೆ ನಡೆಸಿದ ನಂತರ ಬಂಧನಕ್ಕೊಳಗಾದ ಮತ್ತು ಜೈಲಿಗೆ ಹೋಗಿ ಬಂದ ಅತ್ಯಂತ ಹಿರಿಯ ಮತ್ತು ಅನುಭವಿ ರಾಜಕೀಯ ನಾಯಕ ಷರೀಫ್.
ಪಾಕಿಸ್ತಾನದಲ್ಲಿ ಪ್ರಸ್ತುತ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಸರ್ಕಾರವು 2018 ಆಗಸ್ಟ್‌ನಲ್ಲಿ ಅಧಿಕಾರಕ್ಕೆ ಏರಿದ್ದು, ರಾವಲ್ಪಿಂಡಿಯಲ್ಲಿನ ಸೇನೆ ‘ಆಯ್ಕೆ’ ಮಾಡಿರುವಂತೆ ತೋರುತ್ತಿದೆ. ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಾಜ್ವಾ ಮಾತಿಗೆ ಪ್ರಧಾನಿ ಖಾನ್ ತಲೆಯಾಡಿಸುತ್ತಿರುವಂತೆ ತೋರುತ್ತಿದೆ. ಸೇನಾ ಮುಖ್ಯಸ್ಥರ ಅಧಿಕಾರಾವಧಿಯನ್ನು ಖಾನ್ ಮುಂದುವರಿಸಿರುವುದು ಕೇವಲ ಜನರ ಹುಬ್ಬೇರಿಸುವಂತೆ ಮಾಡಿದ್ದಲ್ಲ. ಇದರಿಂದಾಗಿ ಸೇನಾಮುಖ್ಯಸ್ಥರು ಮತ್ತು ಪ್ರಧಾನಿ ಅವಲಂಬನೆಯನ್ನು ಇನ್ನಷ್ಟು ಹೆಚ್ಚಳ ಮಾಡಿವೆ. ವಿಚಿತ್ರವೆಂದರೆ, 1990 ರಲ್ಲಿ ಪ್ರಧಾನಿಯಾಗಿ ಮೊದಲ ಬಾರಿಗೆ ನವಾಜ್ ಷರೀಫ್ ಅಧಿಕಾರಕ್ಕೇರಿದಾಗ, ಅವರನ್ನೂ ಸೇನೆ ಆಯ್ಕೆ ಮಾಡಿದೆ ಎಂದೇ ಆರೋಪಿಸಲಾಗಿತ್ತು.
ತನ್ನ ರಾಜಕೀಯ ವಿರೋಧಿಗಳನ್ನು ಮಣಿಸುವ ಉದ್ದೇಶವನ್ನೇ ಎರಡು ವರ್ಷಗಳ ಆಡಳಿತ ಗಮನ ಹರಿಸಿರುವುದು, ಪಾಕಿಸ್ತಾನದ ಬೀದಿ ಬೀದಿಯಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ ಮತ್ತು ಇದೇ ಕಾರಣಕ್ಕೆ ಸೆಪ್ಟೆಂಬರ್‌ನಲ್ಲಿ ಪಿಡಿಎಂ ಸ್ಥಾಪನೆಯೂ ಆಗಿದೆ. ನಾಲ್ಕು ಪ್ರಮುಖ ವಿಪಕ್ಷಗಳಾದ ಪಿಎಂಎಲ್‌ಎನ್ (ಪಾಕಿಸ್ತಾನ್ ಮುಸ್ಲಿಮ್ ಲೀಗ್ ನವಾಝ್), ಪಿಪಿಪಿ (ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ), ಜೆಯುಎಲ್‌ಎಫ್ (ಜಮಿಯಾ ಉಲೆಮಾ ಇ ಇಸ್ಲಾಮ್ ಫಜ್ಲುರ್) ಮತ್ತು ಪಾಖ್ತುಂಖ್ವಾ ಮಿಲ್ಲಿ ಅವಾಮಿ ಪಕ್ಷವು ಪ್ರಮುಖವಾಗಿ ಇದರಲ್ಲಿವೆ. ಇತರ ಪಕ್ಷಗಳೆಂದರೆ ಬಲೂಚ್ ನ್ಯಾಷನಲ್ ಪಾರ್ಟಿ ಮತ್ತು ಪಾಷ್ತೂನ್ ತಹಫುಜ್ ಮೂಮೆಂಟ್ ಎಲ್ಲವೂ ತಮ್ಮ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಪಿಡಿಎಂ ರೂಪಿಸಿವೆ.
ಈ ಇಮ್ರಾನ್ ಖಾನ್ ವಿರೋಧಿ ದಳದ ಅಧ್ಯಕ್ಷರಾಗಿ ಪಾಷ್ತುಮ್ ನಾಯಕ ಜೆಯುಎಲ್‌ಎಫ್‌ನ ಫಜ್ಲುರ್ ರಹಮಾನ್ ಇದ್ದಾರೆ ಮತ್ತು ಯುವ ನಾಯಕಿ ಹಾಗೂ ಪಿಎಂಎಲ್‌ಎನ್‌ನ ಉಪಾಧ್ಯಕ್ಷೆ ಮರ್ಯಮ್ ನವಾಝ್ ಇದ್ದಾರೆ. ಇವರು ನವಾಜ್ ಶರೀಫ್ ಪುತ್ರಿಯಾಗಿದ್ದಾರೆ. ಪಿಪಿಪಿ ಮುಖ್ಯಸ್ಥ ಹಾಗೂ ಜುಲ್ಫಿಕರ್ ಅಲಿ ಭುಟ್ಟೋ (ಪಾಕಿಸ್ತಾನದ ಜನರಲ್ ಜಿಯಾ ಉಲ್ ಹಖ್‌ರಿಂದ ನೇಣಿಗೇರಿಸಲ್ಪಟ್ಟ ಮಾಜಿ ಪ್ರಧಾನಿ) ಮೊಮ್ಮಗ ಮತ್ತು 2007 ಡಿಸೆಂಬರ್‌ನಲ್ಲಿ ಹತ್ಯೆಗೀಡಾದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜಿರ್ ಭುಟ್ಟೋ ಪುತ್ರ ಬಿಲಾಲ್ ಭುಟ್ಟೋ ಝರ್ದಾರಿ ಇದ್ದಾರೆ.
ಹಲವು ದಶಕಗಳಿಂದಲೂ ಪಾಕಿಸ್ತಾನದಲ್ಲಿ ಅಧಿಕಾರವನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಮತದಾರರ ಆಯ್ಕೆಯನ್ನು ಕಡೆಗಣಿಸಿದ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ ಷರೀಫ್ “ಈ ಉತ್ಸಾಹವನ್ನು ನೋಡಿದರೆ, ಯಾರೂ ಇನ್ನು ಮತದಾರರ ಗೌರವವನ್ನು ಉಲ್ಲಂಘಿಸುವ ಪ್ರಯತ್ನ ಮಾಡುವುದಿಲ್ಲ. ಈ ಉತ್ಸಾಹವನ್ನು ನಾನು ಗುಜ್ರನ್‌ವಾಲಾ ಮತ್ತು ಕರಾಚಿಯಲ್ಲಿ ಗಮನಿಸಿದ್ದೇನೆ. ಈಗ ಇದು ಖ್ವೆಟ್ಟಾದಲ್ಲಿ ಕಾಣಿಸುತ್ತಿದೆ” ಎಂದಿದ್ದಾರೆ.
ಪಿಡಿಎಂ ಕಳೆದ ಕೆಲವು ತಿಂಗಳುಗಳಲ್ಲಿ ಒಂದಾದ ಮೇಲೆ ಒಂದರಂತೆ ಗುಜ್ರನ್‌ವಾಲಾ, ಪಂಜಾಬ್ ಮತ್ತು ಕರಾಚಿ ಹಾಗೂ ಸಿಂದ್‌ನಲ್ಲಿ ನಡೆಸಿದ ಪ್ರತಿಭಟನೆಗಳನ್ನು ಗಮನದಲ್ಲಿಟ್ಟುಕೊಂಡು ಷರೀಫ್ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ಅತ್ಯಂತ ದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಇರುವ ಪಂಜಾಬ್, ಸಿಂದ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ವ್ಯಾಪಿಸುವ ಉದ್ದೇಶದಿಂದ ಖ್ವೆಟ್ಟಾ, ಬಲೂಚಿಸ್ತಾನ ಪ್ರತಿಭಟನೆಗಳು ನಡೆದಿವೆ. ಇಮ್ರಾನ್ ಖಾನ್ ಸರ್ಕಾರಕ್ಕೆ ಈ ಪ್ರತಿಭಟನೆಗಳು ನೀಡಿದ ಸಂಕೇತವೂ ಸ್ಪಷ್ಟವಾಗಿವೆ.
ಪಿಡಿಎಂ ನಿಲುವಿನಲ್ಲಿ ಅತ್ಯಂತ ವಿಶಿಷ್ಟವಾದ ಸಂಗತಿಯೆಂದರೆ, ಮಾಜಿ ಪ್ರಧಾನಿ ನವಾಜ್ ಷರೀಫ್ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಸೇನೆಯನ್ನು ತೆಗಳಿದ್ದಾರೆ ಮತ್ತು ತಾನು ಅಧಿಕಾರದಿಂದ ಕೆಳಗಿಳಿಯಲು ಜನರಲ್ ಬಾಜ್ವಾ ನೇರ ಕಾರಣ ಎಂದು ಆರೋಪಿಸಿದ್ದಾರೆ.