ಹಮಾಸ್ ಉಗ್ರರ ವಿರುದ್ಧ ಭೀಕರ ಯುದ್ಧ ಸಾರಿರುವ ಇಸ್ರೇಲ್ನ ಪ್ರಮುಖ ರಕ್ಷಣಾ ಕವಚವೇ ಐರನ್ ಡೋಮ್. ಅದರ ಬಲದಿಂದಲೇ ಶತ್ರುಪಡೆಗಳ ಕ್ಷಿಪಣಿಗಳನ್ನು ಪುಡಿಗಟ್ಟಿ ದೇಶ ರಕ್ಷಣೆ ಮಾಡುತ್ತಿದೆ. ಅಂಥದ್ದೇ ಐರನ್ಡೋಮ್ಗೆ ಈಗ ಭಾರತ ಕೂಡ ಸಜ್ಜಾಗುತ್ತಿದೆ. ಶತ್ರುಗಳ ಉಪಟಳ ಹೆಚ್ಚುತ್ತಿರುವ ಕಾರಣ ವಾಯುದಾಳಿ ಸಮರ್ಥವಾಗಿ ತಡೆಯಲು 'ಪ್ರಾಜೆಕ್ಟ್ ಕುಶ್' ಹೆಸರಿನಲ್ಲಿ ಆತ್ಮ ನಿರ್ಭರ್ ಯೋಜನೆಯಡಿ 'ಐರನ್ ಡೋಮ್' ಹೊಂದಲು ಯೋಜನೆ ರೂಪಿಸಿದೆ.
ಭಾರತವು ತನ್ನ ವಾಯು ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಲು ಮಹತ್ವದ ಹೆಜ್ಜೆ ಇಡುತ್ತಿದ್ದು, ಸ್ವದೇಶಿ ನಿರ್ಮಿತ ಐರನ್ ಡೋಮ್ ಸಿದ್ಧತೆಗೆ ಮುಂದಾಗಿದೆ. ಪ್ರಾಜೆಕ್ಟ್ ಕುಶ್ ಅಡಿ ದೀರ್ಘ ಶ್ರೇಣಿಯ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು 2028-2029 ರ ಹೊತ್ತಿಗೆ ಹೊಂದಲು ಯೋಜಿಸಿದೆ. ರಷ್ಯಾದ ಎಸ್ - 400 ನಂತಹ ಸಾಮರ್ಥ್ಯ ಇದರಲ್ಲಿ ಹೊಂದುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಭದ್ರತೆಗೆ ಸಂಬಂಧಿಸಿದ ಕ್ಯಾಬಿನೆಟ್ ಸಮಿತಿಯು 2022 ರಲ್ಲಿ ಇಂತಹ ಯೋಜನೆಗೆ ಅನುಮೋದನೆ ನೀಡಿದೆ. ಡಿಆರ್ಡಿಒ ಮತ್ತು ಖಾಸಗಿ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳ ಜಂಟಿ ಪ್ರಯತ್ನದಲ್ಲಿ, ಸುಧಾರಿತ ವ್ಯವಸ್ಥೆಯ ಐದು ಸ್ಕ್ವಾಡ್ರನ್‌ಗಳನ್ನು ಅಂದಾಜು 21,700 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲು ಸರ್ಕಾರ ಮುಂದಾಗಿದೆ.
ಸ್ವದೇಶಿ ನಿರ್ಮಿತ ಐರನ್ ಡೋಮ್:ಸ್ವದೇಶಿ ನಿರ್ಮಿತ ದೀರ್ಘ ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆಯಾದ ಈ ಐರನ್ಡೋಮ್ ಮೂರು ಹಂತದ ಪ್ರತಿಬಂಧಕ ಕ್ಷಿಪಣಿಗಳನ್ನು ಹೊಂದಿದೆ. ವಾಯು ರಕ್ಷಣಾ ವ್ಯವಸ್ಥೆಗೆ ಈ ಕ್ಷಿಪಣಿಗಳನ್ನು 150 ಕಿಮೀ, 250 ಕಿಮೀ ಮತ್ತು 350 ಕಿಮೀ ವ್ಯಾಪ್ತಿಯನ್ನು ಹೊಂದುವಂತೆ ವಿನ್ಯಾಸಗೊಳಿಸಲಾಗುತ್ತಿದೆ. ಆ ಮೂಲಕ ವೈಮಾನಿಕ ಬೆದರಿಕೆಗಳ ವಿರುದ್ಧ ಸಮರ್ಥ ಗುರಾಣಿಯನ್ನು ಇದು ಒದಗಿಸಲಿದೆ. LR-SAM ವ್ಯವಸ್ಥೆಯು ಸಣ್ಣ ವಿಮಾನಗಳಿಗೆ 250 ಕಿಮೀ ವ್ಯಾಪ್ತಿಯಲ್ಲಿ ಮತ್ತು AWACS ದೊಡ್ಡ ವಿಮಾನಗಳಿಗೆ 350 ಕಿಮೀ ವರೆಗಿನ ಗುರಿಗಳನ್ನು ಹೊಡೆದು ಹಾಕುವ ಸಾಮರ್ಥ್ಯ ಅಳವಡಿಸಲಾಗುತ್ತಿದೆ. ಈ ವ್ಯವಸ್ಥೆಯು ಶೇಕಡಾ 85 ರಷ್ಟು ನಿಖರತೆಯೊಂದಿಗೆ ಏಕ ಕ್ಷಿಪಣಿ ವಾಯು ರಕ್ಷಣೆ ನೀಡಿದರೆ, ಕೇವಲ 5 ಸೆಕೆಂಡುಗಳ ಅಂತರದಲ್ಲಿ 2 ವಿಭಿನ್ನ ಕ್ಷಿಪಣಿಗಳನ್ನು ಅನುಕ್ರಮವಾಗಿ ಉಡಾವಣೆ ಮಾಡಿದಾಗ ಶೇಕಡಾ 98.5 ರಷ್ಟು ನಿಖರತೆಯೊಂದಿಗೆ ಗುರಿಯನ್ನು ಭೇದಿಸುವ ಸಾಮಾರ್ಥ್ಯ ಇದಕ್ಕಿರಲಿದೆ ಎಂದು ಅಂದಾಜಿಸಲಾಗಿದೆ.
ಪ್ರಾಜೆಕ್ಟ್ ಕುಶ್ನ ಮತ್ತೊಂದು ಪ್ರಮುಖ ಅಂಶ ಎಂದರೆ ದೀರ್ಘ ಶ್ರೇಣಿಯ ಕಣ್ಗಾವಲು ಮತ್ತು ಅಗ್ನಿಶಾಮಕ ನಿಯಂತ್ರಣ ರಾಡಾರ್‌ಗಳ ಅಭಿವೃದ್ಧಿ. ಈ ಅತ್ಯಾಧುನಿಕ ರಾಡಾರ್‌ಗಳು ವೈರಿ ಪ್ರದೇಶದ 500 - 600 ಕಿಮೀ ವ್ಯಾಪ್ತಿಯ ವಾಯುಪ್ರದೇಶವನ್ನು ಸ್ಕ್ಯಾನ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಇದು ಭಾರತೀಯ ವಾಯುಪಡೆಗೆ (IAF) ಪಾಕಿಸ್ತಾನದ ಸಂಪೂರ್ಣ ವಾಯುಪ್ರದೇಶವನ್ನು ಸ್ಕ್ಯಾನ್ ಮಾಡುವ ಅವಕಾಶ ಸಿಗಲಿದೆ. ಚೀನಾದ ವಾಯುಪಡೆಯ ಮೇಲೆ ನಿಗಾ ಇಡಲು ಆಯಕಟ್ಟಿನ ಸ್ಥಳವಾದ ಟಿಬೆಟಿಯನ್ ಪ್ರಸ್ಥಭೂಮಿವರೆಗೂ ರಾಡಾರ್‌ಗಳು ಕೆಲಸ ಮಾಡುತ್ತದೆ.