ಕಳೆದ ವರ್ಷ ಕೋವಿಡ್-19 ಮೊದಲ ಅಲೆಯ ಹಿಡಿತದಲ್ಲಿ ಭಾರತ ಇದ್ದಾಗ, ಬದುಕು ಮತ್ತು ಜೀವನೋಪಾಯದ ವಿಷಯದಲ್ಲಿ ದೇಶವು ಅನುಭವಿಸಿದ ನಷ್ಟ ಅಷ್ಟಿಷ್ಟಲ್ಲ. ಇನ್ನೊಂದೆಡೆ, ಹೆಚ್ಚುತ್ತಿರುವ ಸೋಂಕಿನಿಂದ ಕೈಗೊಂಡ ಲಾಕ್ಡೌನ್ ಕ್ರಮದಿಂದಾಗಿ ಉದ್ಯೋಗ ಮತ್ತು ಉತ್ಪಾದನೆಯು ಕನಿಷ್ಠ ಮಟ್ಟಕ್ಕೆ ಇಳಿಯಿತು. ಇಂತಹ ಪರಿಸ್ಥಿತಿಯಲ್ಲಿ ದೇಶದ ಆರ್ಥಿಕ ಸಂಕಷ್ಟವನ್ನು ಸರಾಗಗೊಳಿಸುವ ಸಲುವಾಗಿ, ಸರ್ಕಾರವು 20 ಲಕ್ಷ ಕೋಟಿ ರೂ.ಗಳ ಬೃಹತ್ ಆತ್ಮನಿರ್ಭರ ಪ್ಯಾಕೇಜ್ ಅನ್ನು 2020ರ ಮೇ 13ರಂದು ಘೋಷಿಸಿತು.
ಮೂಲತಃ ಇದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಹಣ ಹರಿದು ಬರುವಂತೆ ಮಾಡಿ ಬಂಡವಾಳ ಲಭ್ಯತೆಯನ್ನು ಖಾತರಿಪಡಿಸುವ ಕ್ರಮಗಳನ್ನು ಒಳಗೊಂಡಿತ್ತು. ಎಂಎಸ್‌ಎಂಇಗಳಿಂದ (ಲಘು, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳು) ಹಿಡಿದು ಬೀದಿ ವ್ಯಾಪಾರಿಗಳವರೆಗೆ, ವಿವಿಧ ಪಾಲುದಾರರಿಗೆ ನೀಡುವ ಬ್ಯಾಂಕ್ ಸಾಲಗಳಿಗೆ ಸರ್ಕಾರ ಖಾತರಿ ನೀಡುವ ಉಪಕ್ರಮಗಳನ್ನು ಇದು ಹೊಂದಿತ್ತು. ಮತ್ತೊಂದೆಡೆ, ಕೃಷಿ ಸಂಬಂಧಿ ಮೂಲಸೌಕರ್ಯಗಳ ಮೇಲೆ ಗಮನ ಕೇಂದ್ರೀಕರಿಸುವುದರ ಜೊತೆಗೆ ಕೃಷಿ, ಕೈಗಾರಿಕೆ ಮತ್ತು ವ್ಯಾಪಾರವನ್ನು ಸುಲಭವಾಗಿಸುವುದಕ್ಕೆ ಸಂಬಂಧಿಸಿದಂತೆ ಪ್ರಮುಖ ಸುಧಾರಣೆಗಳನ್ನು ತರಲಾಯಿತು. ಇನ್ನೊಂದೆಡೆ, ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳಲ್ಲಿ ಖಾಸಗಿ ವಲಯದ ಪ್ರವೇಶ ಇನ್ನಷ್ಟು ಸುಲಭವಾಯಿತು.
ಆದಾಗ್ಯೂ, ಆರಂಭಿಕ ಹಂತಗಳಲ್ಲಿ ಕಂಡು ಬಂದಿದ್ದ ಚೇತರಿಕೆಯ ಚಿಹ್ನೆಗಳು, ಪ್ಯಾಕೇಜ್‌ನ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವ ಮೊದಲೇ ಬಲು ಬೇಗ ಮಾಯವಾದವು. ಕೋವಿಡ್-19ರ ಎರಡನೇ ಅಲೆಯು ಯಾವ ಪರಿ ಅಪ್ಪಳಿಸಿತೆಂದರೆ, ದೇಶಾದ್ಯಂತ ಭಾರಿ ಪ್ರಮಾಣದ ಸಾವು ನೋವುಗಳನ್ನು ಹಾಗೂ ಹಿಂದೆಂದೂ ಕಂಡು ಕೇಳರಿಯದ ಪ್ರಮಾಣದ ಸೋಂಕನ್ನು ಉಂಟು ಮಾಡಿದೆ. ಭಾರತೀಯ ಆರ್ಥಿಕತೆಯು 1952ರಿಂದ ಕಾಣದಿದ್ದ ಅತಿ ದೊಡ್ಡ ಸಂಕಷ್ಟವನ್ನು ಈ ಅವಧಿಯಲ್ಲಿ ಎದುರಿಸಿತು.
ರೇಟಿಂಗ್ ಸಂಸ್ಥೆಗಳಿಂದ ಭಾರತದ ಜಿಡಿಪಿ ಕಡಿತ
ಪರಿಸ್ಥಿತಿ ಹೀಗಿರುವಾಗ, ಇನ್ನೊಂದೆಡೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸಂಭವಿಸಬೇಕಿದ್ದ ಆರ್ಥಿಕ ಬೆಳವಣಿಗೆಯ ದರವನ್ನು ತಜ್ಞರು ಮತ್ತಷ್ಟು ಕಡಿತಗೊಳಿಸಿದ್ದಾರೆ. ಎಸ್ & ಪಿ ಗ್ಲೋಬಲ್ ರೇಟಿಂಗ್ಸ್, ತನ್ನ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯ ಪ್ರಮಾಣವನ್ನು ಹಿಂದಿನ ಶೇಕಡಾ 11ರಿಂದ ಶೇಕಡಾ 9.8ಕ್ಕೆ ಕಡಿತಗೊಳಿಸಿದರೆ, ಫಿಚ್ ಸಲ್ಯೂಷನ್ಸ್ ಸಂಸ್ಥೆಯು ಆರ್ಥಿಕತೆಯ ವೃದ್ಧಿಯು ಶೇಕಡಾ 9.5 ರಷ್ಟು ಬೆಳವಣಿಗೆಯಾಗುವ ಮುನ್ಸೂಚನೆ ನೀಡಿದೆ. ಇದು ಬ್ಲೂಮ್‌ಬರ್ಗ್ ಸಂಸ್ಥೆಯ ಮುನ್ನೋಟವಾದ ಶೇಕಡಾ 11ಕ್ಕಿಂತ ಕೆಳಗಿಳಿಸಿದೆ. ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಮುಖ್ಯವಾಗಿ ಆರ್ಥಿಕತೆಯಲ್ಲಿ ಉಳಿತಾಯದ ಕುಸಿತವೇ ಆರ್ಥಿಕ ವೃದ್ಧಿ ದರ ಕುಸಿತದ ಮುನ್ಸೂಚನೆಗೆ ಪ್ರಮುಖ ಕಾರಣಗಳು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದು ಅತ್ಯಂತ ಕಠಿಣ ಸಮಯ
ಕೋವಿಡ್-19ರ ಎರಡನೇ ಅಲೆ ತರಲಿರುವ ಹಾಗೂ ಮೂರನೇ ಅಲೆಯು ದೇಶವನ್ನು ಮತ್ತೆ ಅಪ್ಪಳಿಸುವ ಸಾಧ್ಯತೆಯೊಂದಿಗೆ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಕಠಿಣ ಸಮಯವನ್ನು ನಾವೀಗ ಎದುರಿಸುತ್ತಿದ್ದೇವೆ. ಸರಿಯಾಗಿ ಒಂದು ವರ್ಷದ ನಂತರವೂ ನಾವು ಮತ್ತೆ ಒಂದು ವರ್ಷದ ಹಿಂದೆ ಇದ್ದ ಸ್ಥಾನದಲ್ಲಿಯೇ ಇದ್ದೇವೆ. ಪ್ರಕರಣಗಳ ಸಂಖ್ಯೆ ಕುಸಿತವಾದ ನಂತರ, ಆರ್ಥಿಕತೆ ಪುನರುಜ್ಜೀವನಗೊಳಿಸಲು ಮತ್ತೊಂದು ‘ಪ್ಯಾಕೇಜ್’ ಬೇಕು ಎಂಬ ಬೇಡಿಕೆಗಳು ಮತ್ತೆ ಬರುವುದು ಈಗ ಸ್ಪಷ್ಟವಾಗಿದೆ.
ಇಂತಹ ವಿಪತ್ತಿನ ಸನ್ನಿವೇಶದಲ್ಲಿ ದೇಶವು ಕಠಿಣ ಸವಾಲುಗಳನ್ನು ಎದುರಿಸುತ್ತಿರುವ ಕಾರಣಕ್ಕಾಗಿ, ‘ಆತ್ಮನಿರ್ಭರ ಭಾರತ’ ಎಂಬ ನಮ್ಮ ಕಲ್ಪನೆಯನ್ನು ಪುನರ್ವಿಮರ್ಶಿಸುವುದು ಸೂಕ್ತ ಎನಿಸುತ್ತದೆ. ಆತ್ಮನಿರ್ಭರ ಪ್ಯಾಕೇಜ್‌ನ ವಿಷಯಕ್ಕೆ ಬಂದರೆ, ಕೆಲವು ನಿಗದಿತ ವೆಚ್ಚಗಳಿಗೆ ನೀಡುವ ಸಬ್ಸಿಡಿಗಳ ವಿಷಯಕ್ಕೆ ಸಂಬಂಧಿಸಿದಂತೆ ನೇರ ಬೆಂಬಲವನ್ನು ನೀಡುವ ಬದಲು ಸಾಲಗಳನ್ನು ನೀಡುವತ್ತಲೇ ಇದು ಹೆಚ್ಚಾಗಿ ಗಮನ ಕೇಂದ್ರೀಕರಿಸಿದೆ. ಈ ಸನ್ನಿವೇಶದಲ್ಲಿ ಗಮನಿಸಬೇಕಾದ ಅಂಶ ಎಂದರೆ, ಉದ್ಯಮವು ಯಾವಾಗ ಸಾಲದ ಮೊರೆ ಹೋಗುತ್ತದೆ ಎಂದರೆ, ಉದ್ಯಮವು ಅಭಿವೃದ್ಧಿ ಹೊಂದುತ್ತದೆ ಎಂಬ ಸಾಕಷ್ಟು ವಿಶ್ವಾಸವಿದ್ದಾಗ ಹಾಗೂ ಅದರ ನಿರೀಕ್ಷಿತ ಆದಾಯವು ಸಾಲದ ಮೇಲೆ ಪಾವತಿಸಿದ ಬಡ್ಡಿಗೆ ಸಮಾನವಾಗಿ ಅಥವಾ ಅದಕ್ಕೂ ಹೆಚ್ಚಿಗೆ ಇರುವಂತಿದ್ದಾಗ ಮಾತ್ರ. ಆರ್ಥಿಕತೆಗೆ ಸಂಬಂಧಿಸಿದಂತೆ ಅನಿಶ್ಚಿತತೆ ಹೆಚ್ಚುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಸರಕು ಮತ್ತು ಸೇವೆಗಳ ಬಳಕೆ ಪ್ರಮಾಣ ಸಹಜವಾಗಿ ಕುಸಿಯುತ್ತದೆ. ಇಂತಹ ಸಮಯದಲ್ಲಿ, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಯಾವ ರೀತಿಯ ಪ್ಯಾಕೇಜ್ನ್ನು ತರಬೇಕು ಎಂಬುದನ್ನು ನಿರ್ಧರಿಸುವುದಕ್ಕಿಂತ ಮುಂಚೆ ನಾವು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸುವ ಹಾಗೂ ಅದಕ್ಕೆ ತಕ್ಕಂತೆ ನೀತಿಗಳನ್ನು ವಿನ್ಯಾಸಗೊಳಿಸುವ ಅವಶ್ಯಕತೆ ಇದೆ.