ಪಾಟ್ನಾ( ಬಿಹಾರ):ಬಿಹಾರದಲ್ಲಿ ಈಗ ಪ್ರಶಾಂತ ಕಿಶೋರ್ ಹವಾ ಜೋರಾಗುತ್ತಿದೆ. ಸದ್ಯಕ್ಕೆ ರಾಜಕೀಯ ಪಕ್ಷ ಕಟ್ಟುವುದಿಲ್ಲ. ಆದರೆ 3 ಸಾವಿರ ಕಿ.ಮೀ ಯಾತ್ರೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ. ಇದು ಬಿಹಾರ ಅಷ್ಟೇ ಏಕೆ ದೇಶದ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನು ಏಮ್ಸ್ನಲ್ಲಿ ಚಿಕಿತ್ಸೆ ಪಡೆದು ಲವಲವಿಕೆಯಿಂದ ಇರುವ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಪಾಟ್ನಾ ಮರಳುವ ಸನ್ನಾಹದಲ್ಲಿದ್ದಾರೆ. ಈ ಎರಡೂ ದಿಗ್ಗಜರ ನಡೆಗಳು ಇನ್ಮುಂದೆ ಬಿಹಾರದ ರಾಜಕೀಯ ಬದಲು ಮಾಡುವ ಸಾಧ್ಯತೆ ಹೆಚ್ಚಿಸಿವೆ.
ಪಿಕೆ ಜನ್ ಸುರಾಜ್ ಹವಾ:ಹಾಗಾಗಿ ಬಿಹಾರ ರಾಜಕೀಯ ಈಗ ಪಿಕೆ ಹಾಗೂ ಲಾಲೂ ಸುತ್ತವೇ ಸುತ್ತಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸುತ್ತವೇ ಕೇಂದ್ರೀಕೃತವಾಗಲಿದೆ. ಈಗಾಗಲೇ, ಲಾಲೂ ಪ್ರಸಾದ್ ಯಾದವ್ ದೆಹಲಿ ಏಮ್ಸ್‌ನಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ವಾರ ಪಾಟ್ನಾಗೆ ಬಂದಿಳಿಯುವ ನಿರೀಕ್ಷೆಯಿದೆ. ಆದರೆ ಪಿಕೆ ಈಗಾಗಲೇ ಅಕ್ಟೋಬರ್ 2 ರಂದು ಪಾದಯಾತ್ರೆ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಜನ್ ಸುರಾಜ್ ಹೆಸರಿನಲ್ಲಿ ಬಿಹಾರದಾದ್ಯಂತ ಅವರು ಸಂಚರಿಸಲಿದ್ದಾರೆ.
ಇಬ್ಬರದ್ದೂ ಇತಿಹಾಸವೇ:ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರವೀಣರಾಗಿದ್ದು, ಜೆಡಿಯು ಮತ್ತು ಬಿಜೆಪಿ ನಾಯಕತ್ವಕ್ಕೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುವುದಂತೂ ಶತ ಸಿದ್ಧ. ಈ ಇಬ್ಬರು ನಾಯಕರು ಸಕ್ರಿಯರಾದರೆ, ರಾಜ್ಯ ರಾಜಕೀಯದಲ್ಲಿ ಯಾವಾಗಲೂ ಸಂಚಲನ ಇರುವುದು ಗ್ಯಾರಂಟಿ ಅಂತಾ ರಾಜಕೀಯ ನಿಪುಣರು ಅಭಿಪ್ರಾಯಪಟ್ಟಿದ್ದಾರೆ. ಈಗ ಬಿಹಾರದಲ್ಲಿ ಪಿಕೆ ಮತ್ತು ಲಾಲೂ ಅವರ ಹವಾ ತಡೆಯುವುದು ಜೆಡಿಯು ಮತ್ತು ಬಿಜೆಪಿಯಂತಹ ಆಡಳಿತ ಪಕ್ಷಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ.
ಗುರುವಾರ ಪಾಟ್ನಾದಲ್ಲಿ ಸುದ್ಧಿಗೋಷ್ಠಿ ನಡೆಸಿ ಸಂಚಲನ ಸೃಷ್ಟಿಸಿರುವ ಪ್ರಶಾಂತ ಕಿಶೋರ್, ಕಳೆದ 30 ವರ್ಷಗಳಿಂದ ಲಾಲೂ - ನಿತೀಶ್ ಆಡಳಿತದಿಂದ ಬಿಹಾರದ ಜನ ತತ್ತರಿಸಿದ್ದಾರೆ. ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿದ್ದಾರೆ. ಹೀಗಾಗಿ ಪಿಕೆ ಎರಡೂ ಪಕ್ಷಗಳನ್ನು ಟೀಕಿಸಿದ್ದು, ಇಲ್ಲಿ ಹೊಸ ಶಕ್ತಿ ಉದಯಿಸುವುದಂತೂ ಗ್ಯಾರಂಟಿ
ಪಿಕೆ ಹೇಳಿಕೆಗೆ ಪ್ರಾಮುಖ್ಯತೆ ನೀಡಲ್ಲ ಎಂದ ನಿತೀಶ್:ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಕಿಶೋರ್ ಅವರ ಮಾತಿಗೆ ಪ್ರಾಮುಖ್ಯತೆ ನೀಡುವುದಿಲ್ಲಎಂದು ಹೇಳಿದ್ದಾರೆ. ಅವರು ಏನೇನೋ ಹೇಳ್ತಾರೆ ಅವಕ್ಕೆಲ್ಲ ಪ್ರತಿಕ್ರಿಯೆ ನೀಡುತ್ತಾ ಕುಳಿತುಕೊಳ್ಳಲು ಆಗೋದಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್ ಕೂಡ ಪಿಕೆ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶಾಂತ ಕಿಶೋರ್ ಒಬ್ಬ ಉದ್ಯಮಿ ಎಂದು ಅವರ ಮಾತನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಅವರಿಗೆ ಸಂಬಂಧಿಸಿದ ಯಾವುದೇ ಸುದ್ದಿಗಳನ್ನು ನಾನು ನೋಡುವುದಿಲ್ಲ ಅಥವಾ ಕೇಳುವುದಿಲ್ಲ ಎಂದು ಹೇಳಿದ್ದಾರೆ. ಇದೇನೇ ಇರಲಿ ಪ್ರಶಾಂತ್ ಕಿಶೋರ್ ಬಿಹಾರದ ಜನರ ಲಕ್ಷ್ಯ ಸೆಳೆಯಲು ಸನ್ನದ್ಧರಾಗಿದ್ದಾರೆ. ಅಷ್ಟೇ ಅಲ್ಲ ಅವರ ಸುದ್ದಿಗೋಷ್ಠಿ ರಾಜಕೀಯ ನಾಯಕರ ಗಮನ ಸೆಳೆದಿದೆ ಕೂಡಾ.
ಪಿಕೆಯಷ್ಟೇ ಹವಾ ಕ್ರಿಯೇಟ್ ಮಾಡಿದ ಲಾಲೂ ಪ್ರಸಾದ್ ಯಾದವ್:ದೆಹಲಿ ಏಮ್ಸ್‌ನಿಂದ ಲಾಲೂ ಪ್ರಸಾದ್ ಯಾದವ್ ಬಿಡುಗಡೆಗೊಂಡಿದ್ದಾರೆ. ಇದೇ ವೇಳೆ, ಅವರು ಲೌಡ್ ಸ್ಪೀಕರ್( ಧ್ವನಿವರ್ಧಕ) ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಈ ವಿವಾದ ದೇಶಕ್ಕೆ ಮಾರಕ ಎಂದು ಹೇಳಿದ್ದಾರೆ. ಇದೇ ವೇಳೆ, ಕೇಂದ್ರದ ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದಿದೆ. ಲಾಲೂ ಪ್ರಸಾದ್ ಯಾದವ್ ಅವರ ಹೇಳಿಕೆಗೆ ಹಲವು ಬಿಜೆಪಿ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಾತನಾಡಿ, ಸ್ವಲ್ಪ ಶಾಂತ ಮನಸ್ಸಿನಿಂದ ಕುಳಿತು, ಲಾಲೂ ಪ್ರಸಾದ್ ಯಾದವ್ ಹನುಮಾನ್ ಚಾಲೀಸಾವನ್ನು ಪಠಿಸುವಂತೆ ಸಲಹೆ ನೀಡಿದ್ದಾರೆ.
ಇದನ್ನು ಓದಿ:ಬಿಹಾರ ಸುಧಾರಣೆಗೋಸ್ಕರ 3 ಸಾವಿರ ಕಿ.ಮೀ ಪಾದಯಾತ್ರೆ: ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಘೋಷಣೆ