ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಈ ಹಿಂದೆ ಪಾಕ್ ಸೇನಾ ಸಹಾಯದಿಂದಲೇ ಅಧಿಕಾರಕ್ಕೆ ಬಂದಿದ್ದರು ಎಂಬ ಮಾತಿದೆ. ಇದೀಗ ಅದೇ ಸೇನೆಯಿಂದಲೇ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಇದಕ್ಕೆ ಕಾರಣ ಉಕ್ರೇನ್ ಮೇಲೆ ರಷ್ಯಾ ಯುದ್ಧ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಉಕ್ರೇನ್ ವಿರುದ್ಧ ರಷ್ಯಾ ದಾಳಿ ಮಾಡಿದ್ದರ ವಿರುದ್ಧ ಇದ್ದರೆ, ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ರಷ್ಯಾದ ಕ್ರಮವನ್ನು ಖಂಡಿಸುವ ಮಾತನ್ನಾಡಿದ್ದಾರೆ.
ಇದು ಇಬ್ಬರ ಮಧ್ಯೆ ಕಂದಕ ಸೃಷ್ಟಿಸಿ ಇಮ್ರಾನ್ ಖಾನ್ ಅಧಿಕಾರಕ್ಕೆ ಕುತ್ತು ತಂದಿದೆ ಎನ್ನಲಾಗಿದೆ. ಅಲ್ಲದೇ ಪ್ರಜಾಪ್ರಭುತ್ವದ ನೆಲೆಯ ಮೇಲೆ ರಚಿಸಲಾದ ಸರ್ಕಾರವನ್ನು ಸೇನೆ ಮತ್ತೊಮ್ಮೆ ಛಿದ್ರ ಮಾಡಲು ಮುಂದಾಗಿದೆ. ಇದಲ್ಲದೇ, ಮತ್ತೊಂದು ಪ್ರಮುಖ ವಿಷಯವಾದ ಚೀನಾ ಮತ್ತು ಅಮೆರಿಕಾದ ಜೊತೆಗಿನ ಸಂಬಂಧದ ಬಗ್ಗೆ ಉಭಯ ನಾಯಕರ ನಡುವೆ ಸಹಮತ ಏರ್ಪಡುತ್ತಿಲ್ಲ.
ಇತ್ತೀಚೆಗಷ್ಟೇ ಇಮ್ರಾನ್ ಖಾನ್ ಅಮೆರಿಕಾವನ್ನು ಟೀಕಿಸಿದ್ದರು. ತನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಅಮೆರಿಕಾ ತಂತ್ರ ಹೆಣೆದಿದೆ ಎಂದು ಆರೋಪಿಸಿದ್ದರು. ಇನ್ನೊಂದೆಡೆ ಚೀನಾದ ಜೊತೆಗೆ ಮಿಲಿಟರಿ ಒಪ್ಪಂದವನ್ನೂ ಮುಂದುವರೆಸಿದ್ದಾರೆ. ಇನ್ನು ಜನರಲ್ ಬಾಜ್ವಾ ಉಭಯ ದೇಶಗಳ ಜೊತೆಗೆ ಉತ್ತಮ ಸಂಬಂಧ ಮುಂದುವರಿಸಲು ಯೋಜಿಸಿದ್ದಾರೆ. ಇದು ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಿದೆ.