ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಚೀನಾವು ತೀರಾ ಮುಖ್ಯ ಎಂದು ಪರಿಗಣಿಸಲಾದ ಗೋಗ್ರಾ - ಹಾಟ್‌ಸ್ಪ್ರಿಂಗ್ಸ್ ಅಕಾ ಪೆಟ್ರೋಲ್ ಪಾಯಿಂಟ್ 15 ಅಥವಾ ಪಿಪಿ 15 ಫ್ಲ್ಯಾಷ್ ಪಾಯಿಂಟ್‌ನಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಒಪ್ಪಿಕೊಂಡಿವೆ. ಈ ದ್ವಿಪಕ್ಷೀಯ ಮಾತುಕತೆಯ ಯಶಸ್ಸಿನಿಂದಾಗಿ ಪೂರ್ವ ಲಡಾಖ್‌ನಲ್ಲಿರುವ ಸುಮಾರು 130 ಚದರ ಕಿಮೀ ಕಣಿವೆಯಲ್ಲಿ ಭಾರತದ ಪ್ರವೇಶಕ್ಕೆ ಅವಕಾಶ ದೊರೆತಂತಾಗಿದೆ.
ಭಾರತ ಮತ್ತು ಚೀನಾ ಹೊರಡಿಸಿದ ಜಂಟಿ ಹೇಳಿಕೆಯಲ್ಲಿ ಏನಿದೆ?: ಸೆಪ್ಟೆಂಬರ್ 8 2022 ರಂದು, ಭಾರತ - ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆ 16 ನೇ ಸುತ್ತಿನ ಮಾತುಕತೆಯಲ್ಲಿ ಒಮ್ಮತಕ್ಕೆ ಬರಲಾಗಿದೆ. ಗೋಗ್ರಾ-ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಪಡೆಗಳು ಸಮನ್ವಯ ಮತ್ತು ಯೋಜಿತ ರೀತಿಯಲ್ಲಿ ಕೆಲಸ ಮಾಡಲು ಪರಸ್ಪರ ಒಪ್ಪಿಕೊಂಡಿವೆ. ಈ ಒಮ್ಮತದ ನಿರ್ಣಯದಿಂದಾಗಿ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ನೆಲಸಲು ಸಹಕಾರಿಯಾಗಲಿದೆ.
ಜುಲೈ 17, 2022 ರಂದು 16 ನೇ ಸುತ್ತಿನ ಮಾತುಕತೆಗಳು ನಡೆದಿದ್ದವು. PP 15 ಸಮಸ್ಯೆ ಪರಿಹಾರವಾದರೆ, ಸೂಕ್ಷ್ಮವಾದ ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ವಲಯಗಳಲ್ಲಿ ಇರುವ ಸಮಸ್ಯೆಗಳು ಮಾತ್ರವೇ ಹಾಗೇ ಉಳಿಯಲಿವೆ.
ಕಣಿವೆಯ ಸುಮಾರು 130 ಚದರ ಕಿ.ಮೀ.ಗೆ ಭಾರತೀಯ ಪ್ರವೇಶವನ್ನು ಚೀನಾ ನಿರ್ಬಂಧಿಸಿತ್ತು. ಈ ಪರಿಣಾಮವಾಗಿ ತ್ಸೋಗ್ ತ್ಸಾಲು ಪ್ರದೇಶ ಎಂದು ಕರೆಯಲ್ಪಡುವ ಚೆಂಗ್ ಚೆನ್ಮೋ ಕಣಿವೆಯ ಸಾಮಾನ್ಯ ಪ್ರದೇಶದಲ್ಲಿ ನೆಲೆಗೊಂಡಿರುವ PP-15 ನಲ್ಲಿ ಎರಡು ಕಡೆಯ ಪಡೆಗಳು ಪರಸ್ಪರ ಮುಖಾಮುಖಿಯಾಗುತ್ತಲೇ ಇದ್ದವು. ವಿವಾದಿತ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಕೂಡ ಇದೇ ಪ್ರದೇಶದಲ್ಲಿದೆ. ಈ ದ್ವಿಪಕ್ಷೀಯ ಮಾತುಕತೆಯಲ್ಲಿ ಒಮ್ಮತಕ್ಕೆ ಬಂದಿದ್ದರಿಂದ ಈ ಪ್ರದೇಶದಲ್ಲಿ ಭಾರತ ಪ್ರವೇಶ ಮಾಡಲು ಅವಕಾಶ ಸಿಕ್ಕಂತಾಗಿದೆ.