ಬೆಂಗಳೂರು : ಕುಟುಂಬ ರಾಜಕಾರಣ ವಿರೋಧಿಸಿ ರಾಷ್ಟ್ರ ರಾಜಕಾರಣದಲ್ಲಿ ಯಶಸ್ಸು ಕಂಡಿರುವ ಬಿಜೆಪಿಗೆ ರಾಜ್ಯದಲ್ಲಿ ಫ್ಯಾಮಿಲಿ ಪಾಲಿಟಿಕ್ಸ್ಗೆ ಕಡಿವಾಣ ಹಾಕಿ ಅದನ್ನು ರಾಜಕೀಯವಾಗಿ ದಕ್ಕಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಬಾರದು ಎನ್ನುವ ಧೋರಣೆಯಿಂದ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಅವರನ್ನು ನಿರ್ಲಕ್ಷ್ಯ ಮಾಡುತ್ತ ಬಂದಿರುವ ಬಿಜೆಪಿ ಹೈಕಮಾಂಡ್ಗೆ ಹಲವಾರು ಕಠಿಣ ಸವಾಲುಗಳು ಎದುರಾಗತೊಡಗಿವೆ.
ಸೋಲಿನ ಭಯ : ರಾಜ್ಯ ಬಿಜೆಪಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ಸಂಸದರು ಶಾಸಕರು, ವಿಧಾನ ಪರಿಷತ್ ಸದಸ್ಯರು ಕುಟುಂಬ ರಾಜಕಾರಣ ಹಿನ್ನೆಲೆಯನ್ನು ಹೊಂದಿದವರೇ ಆಗಿದ್ದಾರೆ. ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಬಾರದು ಎನ್ನುವ ಸಿದ್ಧಾಂತಕ್ಕೆ ಬದ್ಧವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಕೌಟುಂಬಿಕ ಹಿನ್ನೆಲೆ ಇದ್ದವರಿಗೆ ಟಿಕೆಟ್ ನೀಡದಿದ್ದರೆ ಚುನಾವಣೆಯಲ್ಲಿ ಸೋಲನುಭವಿಸಿ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತವೆಂದು ರಾಜಕೀಯವಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ.
ಸಂಬಂಧಗಳ ಸಮಸ್ಯೆ : ರಾಜ್ಯದಲ್ಲಿ ಲೋಕಸಭೆ ಸದಸ್ಯರ ಪೈಕಿ ತುಮಕೂರು ಸಂಸದ ಜಿ ಸಿ ಬಸವರಾಜ ಅವರ ಮಗ ಜ್ಯೋತಿ ಗಣೇಶ್ ಶಾಸಕರಾಗಿದ್ದಾರೆ. ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರ ತಂದೆ ಯಡಿಯೂರಪ್ಪ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಅವರ ಪತ್ನಿ ಶಶಿಕಲಾ ಜೊಲ್ಲೆ ಸಚಿವರಾಗಿದ್ದಾರೆ.
ಕಲಬುರಗಿ ಸಂಸದ ಉಮೇಶ ಜಾಧವ್ ಅವರ ಪುತ್ರ ಅವಿನಾಶ್ ಜಾಧವ್ ಶಾಸಕರಾಗಿದ್ದಾರೆ. ಚಾಮರಾಜನಗರ ಸಂಸದ ವಿ ಶ್ರೀನಿವಾಸ ಪ್ರಸಾದ್ ಅಳಿಯ ಹರ್ಷವರ್ಧನ ಶಾಸಕರಿದ್ದಾರೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಚಿಕ್ಕಪ್ಪ ರವಿ ಸುಬ್ರಮಣ್ಯ ಶಾಸಕರಾಗಿದ್ದಾರೆ. ಬಳ್ಳಾರಿ ಸಂಸದ ದೇವೆಂದ್ರಪ್ಪ ಮಾಜಿ ಸಚಿವ ರಮೇಶ ಜಾರಕಿಹೊಳಿ ಹತ್ತಿರದ ಸಂಬಂಧಿಯಾಗಿದ್ದಾರೆ.
ಬಿಜೆಪಿಯ ಶಾಸಕರುಗಳಲ್ಲಿ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ಸಹೋದರ ರಮೇಶ ಜಾರಕಿಹೊಳಿ ಶಾಸಕರಾಗಿದ್ದಾರೆ. ಕರುಣಾಕರ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಶಾಸಕರಾಗಿದ್ದಾರೆ. ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸಹೋದರ ಹನುಮಂತಪ್ಪ ನಿರಾಣಿ ಮತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ಕುಟುಂಬ ರಾಜಕಾರಣದ ಕುಡಿಯಾಗಿದ್ದಾರೆ. ಬೊಮ್ಮಾಯಿ ಅವರ ತಂದೆ ಎಸ್ ಆರ್ ಬೊಮ್ಮಾಯಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದರು. ಸೊರಬದ ಶಾಸಕ ಕುಮಾರ ಬಂಗಾರಪ್ಪ ಅವರ ತಂದೆ ಎಸ್ ಬಂಗಾರಪ್ಪ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದರಾಗಿದ್ದರು.
ಸಂಬಧಿಕರಲ್ಲೇ ಟಿಕೆಟ್ ನಿರೀಕ್ಷೆ : ಬಿಜೆಪಿಯಲ್ಲಿನ ಹೆಚ್ಚಿನ ಶಾಸಕರು, ಸಂಸದರುಗಳು ಒಂದಿಲ್ಲೊಂದು ರೀತಿಯಲ್ಲಿ ಕೌಟುಂಬಿಕ ರಾಜಕಾರಣದ ಹಿನ್ನೆಲೆಯನ್ನ ಹೊಂದಿದವರಾಗಿದ್ದಾರೆ. ಸದ್ಯ ಬಿಜೆಪಿಯಲ್ಲಿರುವ ಹೆಚ್ಚಿನ ಶಾಸಕರು ಮತ್ತು ಸಂಸದರುಗಳು ಬರಲಿರುವ ಚುನಾವಣೆಯಲ್ಲಿ ತಮ್ಮ ಮಕ್ಕಳಿಗೆ, ಸಹೋದರರಿಗೆ ಹಾಗು ಹತ್ತಿರದ ಸಂಬಂಧಿಗಳಿಗೆ ಪಕ್ಷದ ಟಿಕೆಟ್ನ್ನು ನಿರೀಕ್ಷಿಸುತ್ತಿದ್ದಾರೆ. ಕೆಲವರು ಮಕ್ಕಳ ಉತ್ತಮ ರಾಜಕೀಯಕ್ಕಾಗಿಯೇ ಬಿಜೆಪಿ ಪಕ್ಷವನ್ನ ಸೇರಲು ಲೆಕ್ಕಾಚಾರ ಹಾಕಿದ್ದಾರೆ. ಸಚಿವ ಎಂ ಟಿ ಬಿ ನಾಗರಾಜ್ ಮಗನ ಭವಿಷ್ಯಕ್ಕಾಗಿಯೇ ಬಿಜೆಪಿ ಸೇರಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪನವರು ತಮ್ಮ ಪುತ್ರ ಬಿ ವೈ ವಿಜಯೇಂದ್ರಗೆ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಮ್ಮ ಮಗ ಕಾಂತರಾಜು ಅವರಿಗೆ, ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ತಮ್ಮ ಸೊಸೆ ಅಥವಾ ಮಗನಿಗೆ, ಸಂಸದ ಬಿ ಎನ್ ಬಚ್ಚೇಗೌಡ ತಮ್ಮ ಮಗನಿಗೆ, ಮಾಜಿ ಸಂಸದ ಪ್ರಭಾಕರ ಕೋರೆ ತಮ್ಮ ಪುತ್ರ ಅಮಿತ್ ಕೋರೆಗೆ, ಸಚಿವ ಉಮೇಶ್ ಕತ್ತಿ ತಮ್ಮ ಸಹೋದರ ರಮೇಶ್ ಕತ್ತಿಗೆ, ಸಚಿವ ಗೋವಿಂದ ಕಾರಜೋಳ ಅವರು ತಮ್ಮ ಇಬ್ಬರು ಮಕ್ಕಳಿಗೆ, ಸಚಿವ ವಿ ಸೋಮಣ್ಣ ತಮ್ಮ ಪುತ್ರ ಅರುಣ್ ಸೋಮಣ್ಣ ಅವರಿಗೆ ಬರಲಿರುವ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಕೊಡಿಸುವ ಇರಾದೆಯಲ್ಲಿದ್ದಾರೆ.