ಮೆಕ್ಕಾ (ಸೌದಿ ಅರೇಬಿಯಾ): ಮುಸ್ಲಿಂರ ಪವಿತ್ರ ಯಾತ್ರಾ ಸ್ಥಳ ಎಂದರೆ ಅದು ಮೆಕ್ಕಾ. ಸೌದಿ ಅರೇಬಿಯಾದ ಈ ಪವಿತ್ರ ನಗರ ಮೆಕ್ಕಾಗೆ ಹಜ್ ಯಾತ್ರೆ ಭಾಗವಾಗಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಲಿದ್ದಾರೆ. ಏಕೆಂದರೆ ವಿಶ್ವದ ಅತಿದೊಡ್ಡ ಧಾರ್ಮಿಕ ಕ್ಷೇತ್ರಗಳಲ್ಲಿ ಮೆಕ್ಕಾವೂ ಒಂದು. ಕೊರೊನಾ ವೈರಸ್ ನಿರ್ಬಂಧಗಳ ನಂತರ ಮೆಕ್ಕಾದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಶ್ರದ್ಧಾಳುಗಳು ಈ ಬಾರಿ ಪಾಲ್ಗೊಳ್ಳಲಿದ್ದಾರೆ.
ಹಜ್ ಇಸ್ಲಾಂ ಧರ್ಮದ ಐದು ಪವಿತ್ರ ಆಚರಣೆಗಳಲ್ಲಿ ಮೆಕ್ಕಾವೂ ಒಂದಾಗಿದೆ. ಎಲ್ಲ ಮುಸ್ಲಿಮರು ಜೀವನದಲ್ಲಿ ಒಮ್ಮೆಯಾದರೂ ಮೆಕ್ಕಾ ಯಾತ್ರೆ ಕೈಗೊಳ್ಳಬೇಕು ಎಂಬ ಮಹದಾಸೆ ಹೊಂದಿರುತ್ತಾರೆ. ಯಾತ್ರಾರ್ಥಿಗಳಿಗೆ ಇದು ಅಧ್ಯಾತ್ಮಿಕ ಅನುಭವವಾಗಿದ್ದು, ಇಲ್ಲಿಗೆ ಭೇಟಿ ನೀಡಿದರೆ ಪಾಪಗಳು ಕಳೆದು ಹೋಗಲಿವೆ ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಮೆಕ್ಕಾಗೆ ಭೇಟಿ ನೀಡುವುದರಿಂದ ದೇವರಿಗೆ ನಾವು ಮತ್ತಷ್ಟು ಹತ್ತಿರ ಆಗುತ್ತೇವೆ ಎಂಬ ಭಾವನೆ ಮುಸ್ಲಿಂ ಶ್ರದ್ಧಾಳುಗಳದ್ದಾಗಿದೆ.
1920 ರ ದಶಕದಲ್ಲಿ ಮೆಕ್ಕಾವನ್ನು ಸೌದಿ ರಾಜಮನೆತನ ತಮ್ಮ ವಶಕ್ಕೆ ತೆಗೆದುಕೊಂಡಿತು. ಆ ಬಳಿಕ ತೀರ್ಥಯಾತ್ರೆ ಆಯೋಜಿಸುವುದು ಹೆಮ್ಮೆ ಎಂದು ಅದು ಪರಿಗಣಿಸಿದೆ. ಇಲ್ಲಿನ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲಾಗಿದೆ. ಯಾತ್ರಾರ್ಥಿಗಳ ಯೋಗಕ್ಷೇಮಕ್ಕಾಗಿ ಸೌದಿ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಆದರೂ 2015 ರಲ್ಲಿ ಇಲ್ಲಿ ಉಂಟಾದ ಕಾಲ್ತುಳಿತಕ್ಕೆ ಸುಮಾರು 2,400 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು.
ಹಜ್ ಯಾತ್ರೆ ಮಹತ್ವ ಮತ್ತು ಇತಿಹಾಸ:ಹಜ್ ಯಾತ್ರೆಯು ಪ್ರಪಂಚದಾದ್ಯಂತದ ಮುಸ್ಲಿಮರನ್ನು ಸೌದಿ ಅರೇಬಿಯಾದ ಮೆಕ್ಕಾಕ್ಕೆ ಭೇಟಿ ನೀಡುವಂತೆ ಮಾಡುತ್ತದೆ. ಮೆಕ್ಕಾಕ್ಕೆ ಭೇಟಿ ನೀಡುವ ಮೂಲಕ ಮುಸ್ಲಿಮರು ಪ್ರವಾದಿ ಮುಹಮ್ಮದ್ ಅವರ ಹೆಜ್ಜೆಗಳನ್ನು ಕಾಣಲು ಬಯಸುತ್ತಾರೆ. ಇಬ್ರಾಹಿಂ ಮತ್ತು ಇಸ್ಮಾಯಿಲ್ ಅಥವಾ ಅಬ್ರಹಾಂ ಮತ್ತು ಇಸ್ಮಾಯಿಲ್ ಅವರ ಪ್ರಯಾಣವನ್ನು ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಅಂದಹಾಗೆ ಈ ಪ್ರದೇಶ ಕ್ರಿಶ್ಚಿಯನ್ ಮತ್ತು ಇಸ್ಲಾಂ ಎರಡಕ್ಕೂ ಪವಿತ್ರವಾದ ಸ್ಥಳವಾಗಿದೆ.
ಕುರಾನ್‌ನಲ್ಲಿ ಇದಕ್ಕೆ ಸಂಬಂಧಿಸಿರುವಂತೆ, ಇಬ್ರಾಹಿಂ ತನ್ನ ಮಗ ಇಸ್ಮಾಯಿಲ್‌ನನ್ನು ನಂಬಿಕೆಯ ಪರೀಕ್ಷೆಯಾಗಿ ತ್ಯಾಗ ಮಾಡಲು ಹೇಳುತ್ತಾರೆ. ಆದರೆ ದೇವರು ಕೊನೆಯ ಕ್ಷಣದಲ್ಲಿ ಅವನನ್ನು ಉಳಿಸಿಕೊಳ್ಳುತ್ತಾನೆ. ಇಬ್ರಾಹಿಂ ಮತ್ತು ಇಸ್ಮಾಯಿಲ್ ನಂತರ ಕಾಬಾವನ್ನು ಒಟ್ಟಿಗೆ ನಿರ್ಮಿಸಿದರು ಎಂದು ಇಸ್ಲಾಂನಲ್ಲಿ ಹೇಳಲಾಗಿದೆ. ಕ್ರಿಶ್ಚಿಯನ್ ಮತ್ತು ಯಹೂದಿ ಸಂಪ್ರದಾಯಗಳಲ್ಲಿ, ಅಬ್ರಹಾಂ ತನ್ನ ಇನ್ನೊಬ್ಬ ಮಗ ಐಸಾಕ್‌ನನ್ನು ಮೌಂಟ್ ಮೋರಿಯಾದಲ್ಲಿ ತ್ಯಾಗ ಮಾಡುತ್ತಾನೆ, ಇದು ಜೆರುಸಲೆಮ್‌ನ ಪ್ರಮುಖ ಪವಿತ್ರ ಸ್ಥಳದೊಂದಿಗೆ ಸಂಬಂಧ ಹೊಂದಿರುವುದು ವಿಶೇಷ.
7 ನೇ ಶತಮಾನದಲ್ಲಿ ಇಸ್ಲಾಂ ಧರ್ಮದ ಆಗಮನದವರೆಗೂ ಕಾಬಾವು, ಅರಬ್ಬರಲ್ಲಿ ಬಹುದೇವತಾ ಆರಾಧನೆಯ ಕೇಂದ್ರವಾಗಿತ್ತು. ಪ್ರವಾದಿ ಮುಹಮ್ಮದ್ ಈ ಸ್ಥಳವನ್ನು ಪವಿತ್ರಗೊಳಿಸಿ ಹಜ್ ಉದ್ಘಾಟಿಸಿದ್ದರು. ಮುಸ್ಲಿಮರು ಕಾಬಾದಲ್ಲಿ ಪೂಜಿಸುವುದಿಲ್ಲ. ಬದಲಿಗೆ ಘನ ಆಕಾರದ ಕಪ್ಪು ರಚನೆ ಅದಾಗಿದ್ದು, ಚಿನ್ನದ ಕಸೂತಿ ಬಟ್ಟೆಯಿಂದ ಮುಚ್ಚಲಾಗಿದೆ. ಆದರೆ ಅದನ್ನು ಅವರ ಅತ್ಯಂತ ಪವಿತ್ರ ಸ್ಥಳ ಮತ್ತು ಏಕತೆ ಮತ್ತು ಏಕದೇವೋಪಾಸನೆಯ ಪ್ರಬಲ ಸಂಕೇತವೆಂದು ಪರಿಗಣಿಸುತ್ತಾರೆ. ಮುಸ್ಲಿಮರು ಜಗತ್ತಿನ ಯಾವುದೇ ಸ್ಥಳದಲ್ಲಿ ಇರಲಿ ತಮ್ಮ ದೈನಂದಿನ ಪ್ರಾರ್ಥನೆಯ ಸಮಯದಲ್ಲಿ ಕಾಬಾದ ಕಡೆಗೆ ಮುಖ ಮಾಡಿ ಪ್ರಾರ್ಥನೆ ಮಾಡುತ್ತಾರೆ.
ಪ್ರವಾದಿ ಅವರ ಕಾಲದಿಂದಲೂ ಪ್ರತಿ ವರ್ಷವೂ ಹಜ್ ಯಾತ್ರೆ ನಡೆಸಿಕೊಂಡು ಬರಲಾಗುತ್ತಿದೆ. ಯುದ್ಧಗಳು, ಪಿಡುಗುಗಳು ಮತ್ತು ಇತರ ಪ್ರಕ್ಷುಬ್ಧತೆಗಳ ನಡುವೆಯೂ ಹಜ್ ಯಾತ್ರೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಮಧ್ಯಯುಗದಲ್ಲಿ, ಮುಸ್ಲಿಂ ಆಡಳಿತಗಾರರು ಕೈರೋ, ಡಮಾಸ್ಕಸ್ ಮತ್ತು ಇತರ ನಗರಗಳಿಂದ ಹೊರಡುವ ಸಶಸ್ತ್ರ ಬೆಂಗಾವಲುಗಳೊಂದಿಗೆ ಬೃಹತ್ ಕಾರಾವಾನ್ಗಳನ್ನು ಆಯೋಜಿಸುತ್ತಿದ್ದರು. ಇದು ಮರುಭೂಮಿಯ ಮೂಲಕ ಪ್ರಯಾಸಕರ ಪ್ರಯಾಣವಾಗಿದ್ದು, ಅಲ್ಲಿ ಬೆಡೋಯಿನ್ ಬುಡಕಟ್ಟು ಜನ ಯಾತ್ರಾರ್ಥಿಗಳ ಮೇಲೆ ದಾಳಿಗಳನ್ನು ನಡೆಸುತ್ತಿದ್ದರು. 1757 ರಲ್ಲಿ ನಡೆದ ಬೆಡೋಯಿನ್ ದಾಳಿ ವೇಳೆ ಹಜ್ ಕಾರವಾನ್ ಗಳನ್ನು ನಾಶಪಡಿಸಿತ್ತು. ಈ ವೇಳೆ ಸಾವಿರಾರು ಯಾತ್ರಿಕರನ್ನು ಕೊಂದು ಹಾಕಲಾಗಿತ್ತು.