ಒಂದು ದೇಶದ 'ರಾಜಕೀಯ ಪರಿವರ್ತನೆ' ಅಷ್ಟು ಸುಲಭವಲ್ಲ. ಈ ಕಠಿಣ ಪ್ರಕ್ರಿಯೆಗೆ ಪ್ರಭಾವಿ ನಾಯಕ, ಉತ್ತಮ ನಾಯಕತ್ವದ ಅಗತ್ಯವಿದೆ. ರಾಜಕೀಯ ಬದಲಾವಣೆಯ ವೇಗವು ಕೆಲವು ಫಲಾನುಭವಿಗಳನ್ನು ಸೃಷ್ಟಿಸುತ್ತದೆ ಮತ್ತು ಕೆಲವರಿಂದ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ. ಅಷ್ಟೇ ಅಲ್ಲ ಬದಲಾವಣೆಯ ವೇಗವು ರಾಜಕೀಯ ಪರಿವರ್ತನೆಯ ಸಂಪೂರ್ಣ ಪ್ರಕ್ರಿಯೆಯನ್ನು ಹಾಳುಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ, ಅನಿಶ್ಚಿತತೆಗಳನ್ನು ಉಂಟುಮಾಡುತ್ತದೆ. ಅಭಿವೃದ್ಧಿ ಬದಲಾಗಿ ದೇಶವನ್ನು ಹಿಮ್ಮೆಟ್ಟಿಸಲು ಸಹ ಕಾರಣವಾಗಬಹುದು.
ಈ ಹಂತದಲ್ಲಿಯೇ ನಾಯಕತ್ವದ ಪಾತ್ರ ಮತ್ತು ರಾಜಕೀಯವು ಹೊಸ ಆಯಾಮವನ್ನು ಪಡೆದುಕೊಳ್ಳುತ್ತದೆ. ದೇಶವನ್ನು ಪರಿವರ್ತನೆಯತ್ತ ಕೊಂಡೊಯ್ಯುವ ಭರದಲ್ಲಿ ಹಗೆತನವನ್ನು ಹೆಚ್ಚಿಸುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಸಮಯ ಮತ್ತು ಪರಿಸ್ಥಿತಿಯ ನಿರ್ವಹಣೆ ಮಾಡುವ ವ್ಯಕ್ತಿ ಮಾತ್ರ ಉತ್ತಮ ನಾಯಕನಾಗಿ ಹೊರಹೊಮ್ಮಲು ಸಾಧ್ಯ. ವರ್ಣಭೇದ ನೀತಿಯನ್ನು ಆಧರಿಸಿದ ರಾಜಕೀಯ ವ್ಯವಸ್ಥೆಯಲ್ಲಿ, ಬಹುಪಕ್ಷ ಪ್ರಜಾಪ್ರಭುತ್ವ ಆಡಳಿತವಿದ್ದ ದಕ್ಷಿಣ ಆಫ್ರಿಕಾದ ಪರಿವರ್ತನೆಯ ಸಮಯದಲ್ಲಿ ನೆಲ್ಸನ್ ಮಂಡೇಲಾ ಇಂತಹ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸಿದ್ದರು.
ಕಳೆದ ಕೆಲವು ದಿನಗಳಿಂದ ಪ್ರಧಾನಿ ಅಬಿ ಅಹ್ಮದ್ ನೇತೃತ್ವದ ಇಥಿಯೋಪಿಯನ್ ಸರ್ಕಾರವು ಟೈಗ್ರೇನ್ ಪಡೆ ಮೇಲೆ ವೈಮಾನಿಕ ದಾಳಿ ಸೇರಿದಂತೆ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಇಥಿಯೋಪಿಯನ್ ಸೇನೆ ಹಾಗೂ ಟೈಗ್ರೇನ್ ಪಡೆ- ಎರಡೂ ಕಡೆಯಿಂದ ಮಿಲಿಟರಿ ಕಾರ್ಯಾಚರಣೆಗಳು ಸರಿಯಾಗಿ ಇಲ್ಲದಿದ್ದರೆ ದೇಶವು ಮತ್ತೆ ಅಂತರ್ಯುದ್ಧಕ್ಕೆ ಇಳಿಯುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಸೂಚನೆಗಳಿವೆ.
ಪ್ರಧಾನಿ ಅಬಿ ಅಹ್ಮದ್ ಹಾಗೂ ಸುಧಾರಣೆಗಳು
ಅಬಿ ಅಹ್ಮದ್ ಅವರು 2018 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮತ್ತು ರಾಜಕೀಯ ಸುಧಾರಣೆಗಳ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ, ದೇಶವು ತನ್ನ ದೇಶೀಯ ರಾಜಕೀಯದಲ್ಲಿ ಮತ್ತು ವಿದೇಶಾಂಗ ನೀತಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಕಂಡಿದೆ.
ಮಾಜಿ ಸೇನಾಧಿಕಾರಿಯೂ ಆಗಿದ್ದ ಅಹ್ಮದ್, ಇಥಿಯೋಪಿಯಾ ಮತ್ತು ಏರಿಟ್ರಿಯಾ ನಡುವಿನ 20 ವರ್ಷಗಳ ಸಂಘರ್ಷವನ್ನು ಕೊನೆಗೊಳಿಸಿದರು. ಅಷ್ಟೇ ಅಲ್ಲ ಉಭಯ ರಾಷ್ಟ್ರಗಳ ನಡುವೆ ಮತ್ತೆ ಸ್ನೇಹ-ಶಾಂತಿ ಸ್ಥಾಪನೆಯಾಗುವಲ್ಲಿ ಕಾರಣರಾದರು. ಇದನ್ನು ಗುರುತಿಸಿ ಅಹ್ಮದ್‌ಗೆ 2019 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು. "ಶಾಂತಿ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಸಾಧಿಸುವ ಅವರ ಪ್ರಯತ್ನಗಳಿಗಾಗಿ ಮತ್ತು ನಿರ್ದಿಷ್ಟವಾಗಿ ನೆರೆಯ ಏರಿಟ್ರಿಯಾದೊಂದಿಗಿನ ಗಡಿ ಸಂಘರ್ಷವನ್ನು ಪರಿಹರಿಸುವ ಅಹ್ಮದ್ ಅವರ ನಿರ್ಣಾಯಕ ಕ್ರಮಗಳಿಗಾಗಿ ಪ್ರಶಸ್ತಿ ನೀಡಲಾಗಿದೆ" ಎಂದು ನೊಬೆಲ್ ಸಮಿತಿ ಉಲ್ಲೇಖಿಸಿತ್ತು.
ಸುಡಾನ್ ಮತ್ತು ದಕ್ಷಿಣ ಸುಡಾನ್‌ನಲ್ಲಿನ ಘರ್ಷಣೆಯನ್ನು ಕೊನೆಗೊಳಿಸುವಲ್ಲಿ, ಜಿಬೌಟಿ ಮತ್ತು ಏರಿಟ್ರಿಯಾ ನಡುವಿನ ಸಂಬಂಧವನ್ನು ತಿಳಿಗೊಳಿಸುವಲ್ಲಿ, ಕೀನ್ಯಾ ಮತ್ತು ಸೊಮಾಲಿಯಾ ನಡುವಿನ ಗಡಿ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವಲ್ಲಿ ಅಹ್ಮದ್ ಸಕ್ರಿಯ ಪಾತ್ರ ವಹಿಸಿದ್ದರು. ಹೀಗಾಗಿ ಅಹ್ಮದ್ ಅವರ ಅಧಿಕಾರಾವಧಿಯು ಆಫ್ರಿಕಾದಲ್ಲಿ ಶಾಂತಿಯನ್ನು ತರುವ ಪ್ರಯತ್ನಗಳಿಂದ ಗುರುತಿಸಲ್ಪಟ್ಟಿದೆ.
ಆಂತರಿಕ ರಾಜಕೀಯವನ್ನು ಸುಧಾರಿಸಲು ಪ್ರಯತ್ನಗಳು
ಜನಸಂಖ್ಯೆಯಲ್ಲಿ ಆಫ್ರಿಕಾದ ಎರಡನೇ ಅತಿದೊಡ್ಡ ದೇಶವಾದ ಇಥಿಯೋಪಿಯಾದ ಆಂತರಿಕ ರಾಜಕೀಯವನ್ನು ಸುಧಾರಿಸುವಲ್ಲಿ ಅಹ್ಮದ್ ಅವರ ಪ್ರಯತ್ನಗಳು ವಿವಾದಾಸ್ಪದವಾಗಿವೆ ಮತ್ತು ಸಾಕಷ್ಟು ವಿರೋಧವನ್ನು ಎದುರಿಸುತ್ತಿವೆ. ಒರೊಮಾ ಸಮುದಾಯದಿಂದ ಇಥಿಯೋಪಿಯಾದ ಪ್ರಧಾನಿಯಾದ ಮೊದಲ ವ್ಯಕ್ತಿ ಇವರಾಗಿದ್ದಾರೆ. ಅಲ್ಲದೇ 44ನೇ ವಯಸ್ಸಿನಲ್ಲಿ ಪ್ರಧಾನಿ ಪಟ್ಟ ಪಡೆದ ಆಫ್ರಿಕಾದ ಅತ್ಯಂತ ಕಿರಿಯ ನಾಯಕ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ.
ಅಹ್ಮದ್, ಸಾವಿರಾರು ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿಸಿದ್ದಾರೆ. ಸಂಪುಟದ ಅರ್ಧದಷ್ಟು ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದ್ದಾರೆ. ಇಥಿಯೋಪಿಯನ್ ಪೀಪಲ್ಸ್ ರೆವಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್ (EPRDF) ಎಂದು ಕರೆಯಲ್ಪಡುವ ಆಡಳಿತ ಒಕ್ಕೂಟದಲ್ಲಿ ಮಹತ್ವದ ಬದಲಾವಣೆಗಳನ್ನು ತಂದರು.