ನವದೆಹಲಿ:ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಿಜೋರಾಂ ಎಂಬ ಐದು ರಾಜ್ಯಗಳಲ್ಲಿ ನ್ಯಾಯಸಮ್ಮತ ಮತ್ತು ಪಾರದರ್ಶಕ ವಿಧಾನಸಭಾ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು (EC) ಬದ್ಧವಾಗಿದೆ. ಆದ್ದರಿಂದ, ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಮೊದಲು ಕೇಂದ್ರ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಶುಕ್ರವಾರ ಮಹತ್ವದ ಸಭೆ ನಡೆಸಿದರು. ಇದರಲ್ಲಿ ಅವರು ಅಭ್ಯರ್ಥಿಗಳು ತಮ್ಮ ಅಪರಾಧ ದಾಖಲೆಗಳನ್ನು ಬಹಿರಂಗಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಹಣದ ಬಲವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಮತ್ತು ಹಿಂಸಾಚಾರ ಮುಕ್ತ ಚುನಾವಣೆ ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ವೀಕ್ಷಕರಿಗೆ ಮನವಿ ಮಾಡಿದೆ. ಇದರ ಹೊರತಾಗಿ ಕ್ರಿಮಿನಲ್ ಅಪರಾಧಿಗಳನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸುವ ಬಗ್ಗೆ ರಾಜಕೀಯ ಪಕ್ಷಗಳು ಸ್ಪಷ್ಟೀಕರಣವನ್ನು ನೀಡಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ಭಾರತೀಯ ರಾಜಕೀಯದಲ್ಲಿ ಇದು ಅತ್ಯಂತ ನಿರಾಶಾದಾಯಕ ಸಂಗತಿಯಾಗಿದ್ದು, ರಾಜಕಾರಣಿಗಳ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ ಎಂದು ತಿಳಿದುಬಂದಿದೆ.
306 ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) 763 ರಾಜ್ಯಸಭಾ ಮತ್ತು ಲೋಕಸಭೆ ಸಂಸದರ ಚುನಾವಣಾ ಪ್ರಮಾಣಪತ್ರಗಳ ಇತ್ತೀಚಿಗೆ ಪರಿಶೀಲನೆ ಮಾಡಿದೆ. ಅವರಲ್ಲಿ 40 ಪ್ರತಿಶತ ಅಥವಾ 306 ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿದೆ. ಇವರಲ್ಲಿ 194 ಮಂದಿ ಗಂಭೀರ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದಲ್ಲಿ ಇಂತಹ ಅಂಶವು ಬೆಳಕಿಗೆ ಬಂದಿದ್ದು, ಇದು ಖಂಡಿತವಾಗಿಯೂ ಆತಂಕಕಾರಿ ಸಂಗತಿಯಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಸಂಸದರ ಸಂಖ್ಯೆ ಹೆಚ್ಚಾಗಿದೆ. 2004 ರಲ್ಲಿ 128 ಸಂಸದರ ಮೇಲೆ ಅಪರಾಧ ಪ್ರಕರಣಗಳು ಹಾಗೂ 2019 ರಲ್ಲಿ ಚುನಾಯಿತರಾದ 233 ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇವೆ. ಅಚ್ಚರಿಯ ಸಂಗತಿ ಎಂದರೆ ದೇಶದ ಸುಮಾರು 4,000 ಜನಪ್ರತಿನಿಧಿಗಳ ಪೈಕಿ ಶೇ.44ರಷ್ಟು ನಾಯಕರ ಮೇಲೆ ಅಪರಾಧ ಪ್ರಕರಣಗಳ ಆರೋಪವಿದೆ. ಇದು ನಮ್ಮ ಜನಪ್ರತಿನಿಧಿಗಳಲ್ಲಿ ಪ್ರಾತಿನಿಧ್ಯದ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಏಕೆಂದರೆ ಕೊಲೆಯಿಂದ ಹಿಡಿದು ಭ್ರಷ್ಟಾಚಾರದವರೆಗಿನ ಅಪರಾಧಗಳ ಆರೋಪ ಎದುರಿಸುತ್ತಿರುವವರಿಗೆ ಭಾರತದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಯನ್ನು ನೀಡಲಾಗುತ್ತಿದೆ.