ಕರ್ನಾಟಕ

karnataka

ETV Bharat / opinion

ವಾಟ್ಸ್‌ಆ್ಯಪ್ ಪ್ರೈವಸಿ.. ನಾಗರಿಕರ ಗೌಪ್ಯತೆ ಸರ್ಕಾರದ ಜವಾಬ್ದಾರಿ.. - ನೂತನ ವಾಟ್ಸಾಪ್ ಪ್ರೈವಸಿ ಪ್ರಶ್ನಿಸಿ ಹೈಕೊರ್ಟ್​​ಗೆ ಅರ್ಜಿ

ವಿಶ್ವದ 90ಕ್ಕೂ ಹೆಚ್ಚು ದೇಶಗಳಲ್ಲಿ ವೈಯಕ್ತಿಕ ಗೌಪ್ಯತೆಯ ರಕ್ಷಣೆಗಾಗಿ ಬಲವಾದ ಕಾನೂನುಗಳು ಜಾರಿಯಲ್ಲಿವೆ. ಐರೋಪ್ಯ ಒಕ್ಕೂಟ ಜಾರಿಗೆ ತಂದಿರುವ ಸಾಮಾನ್ಯ ದತ್ತಾಂಶ ಸಂರಕ್ಷಣಾ ನಿಯಂತ್ರಣ (ಜಿಡಿಪಿಆರ್) ಈಗ ಇರುವ ಕಾನೂನುಗಳಲ್ಲಿ ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದು ಪರಿಗಣಿಸಲಾಗಿದೆ..

citizens-privacy-is-governments-responsibility
ವಾಟ್ಸಾಪ್ ಪ್ರೈವಸಿ

By

Published : Jan 26, 2021, 4:30 PM IST

ಬೆಂಗಳೂರು ​:ಬಹತೇಕ ಮೊಬೈಲ್ ಫೋನ್ ಬಳಕೆದಾರರಿಗೆ ವಾಟ್ಸ್‌ಆ್ಯಪ್ ಎಂಬ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ ಬಗ್ಗೆ ಯಾವುದೇ ಪರಿಚಯ ಮಾಡಿಕೊಡಬೇಕಾದ ಅಗತ್ಯ ಇಲ್ಲ. ನಮ್ಮ ಅಂತರ್ಜಾಲ ಬಳಕೆದಾರರ ಸಂಖ್ಯೆ ಈಗಾಗಲೇ 70 ಕೋಟಿ ಗಡಿ ದಾಟಿದೆ ಮತ್ತು ಇನ್ನೂ ಅಧಿಕವಾಗುತ್ತಲೇ ಇದೆ.

ನಮ್ಮ ದೇಶದ ಇಂಟರ್ನೆಟ್ ಬಳಕೆದಾರರಲ್ಲಿ ಸುಮಾರು 40 ಕೋಟಿಯಷ್ಟು ಮಂದಿ ವಾಟ್ಸ್‌ಆ್ಯಪ್‌ ಬಳಸುತ್ತಿದ್ದಾರೆ. ಇದು ಭಾರತದಲ್ಲಿ ಅಪ್ಲಿಕೇಶನ್‌ನ ಜನಪ್ರಿಯತೆಯನ್ನು ಸ್ಪಷ್ಟವಾಗಿ ತಿಳಿಸುತ್ತದೆ.

ಜನರ ಜೀವನದಲ್ಲಿ ಹಾಸುಹೊಕ್ಕಾಗಿ ಇರುವ ಇಂತಹ ಜನಪ್ರಿಯ ಮೊಬೈಲ್ ಅಪ್ಲಿಕೇಶನ್ ಇತ್ತೀಚೆಗೆ ತನ್ನ ಗೌಪ್ಯತೆ ನೀತಿ ಬದಲಾಯಿಸುತ್ತಿರುವುದಾಗಿ ಘೋಷಿಸಿದೆ ಮತ್ತು 2021ರ ಫೆಬ್ರವರಿ 8ರೊಳಗೆ ಹೊಸ ನೀತಿಗೆ ಸಮ್ಮತಿ ಸೂಚಿಸದೇ ಇರುವವರು ಅಪ್ಲಿಕೇಶನ್ ಬಳಸಲು ಸಾಧ್ಯವಿಲ್ಲ.

ಪ್ರಪಂಚದ ಎಲ್ಲೆಡೆ 200 ಕೋಟಿ ಬಳಕೆದಾರರ ಆಘಾತ ಮತ್ತು ನಿರಾಶೆಗೆ ಕಾರಣ ಆಗುವಂತೆ, ವಾಟ್ಸ್‌ಆ್ಯಪ್‌ನ ಹೊಸ ನೀತಿ ಪ್ರಕಾರ ಕಂಪನಿಯ ಮಾಲೀಕ ಫೇಸ್‌ಬುಕ್ ಮತ್ತು ಸಹೋದರ ಸಂಸ್ಥೆಗಳಿಗೆ ಗೌಪ್ಯತಾ ಮಾಹಿತಿ ಹಂಚಿಕೊಳ್ಳುವುದಾಗಿ ಸೂಚನೆ ನೀಡಿದೆ.

ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತಿತರ ಸಾಮಾಜಿಕ ಮಾಧ್ಯಮ ವೇದಿಕೆಗಳೊಂದಿಗೆ ಹಂಚಿಕೊಂಡಿರುವ ಮಾಹಿತಿಯು ಎಲ್ಲಾ ಅಂತರ್ಜಾಲ ಬಳಕೆದಾರರಿಗೆ ಮುಕ್ತವಾಗಿರುತ್ತದೆ ಎಂಬ ಭಯದಿಂದ ಹಲವರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

ಇದರ ಪರಿಣಾಮವಾಗಿ ಲಕ್ಷಾಂತರ ಬಳಕೆದಾರರು ಟೆಲಿಗ್ರಾಮ್ ಮತ್ತು ಸಿಗ್ನಲ್‌ನಂತಹ ಇತರ ಅಪ್ಲಿಕೇಶನ್‌ಗಳ ಮೊರೆ ಹೋಗಿದ್ದಾರೆ. ಇದು ಸ್ವಾಭಾವಿಕವಾಗಿ ವಾಟ್ಸ್‌ಆ್ಯಪ್ ಬಗ್ಗೆ ಆತಂಕ ಸೃಷ್ಟಿಸಿದೆ. ಹೊಸ ಗೌಪ್ಯತಾ ನೀತಿ ಹಿಂಪಡೆಯುವಂತೆ ಸೂಚಿಸಲು ಖುದ್ದು ಕೇಂದ್ರ ಸರ್ಕಾರವೇ ಪ್ರಯತ್ನ ಪಡುತ್ತಿದೆ.

ಸರ್ಕಾರದ ನಿರ್ದೇಶನದ ಮುಗುಮ್ಮಾಗಿ ಉಳಿದಿರುವ ವಾಟ್ಸ್ಆ್ಯಪ್‌ ತನ್ನ ಹೊಸ ಗೌಪ್ಯತಾ ನೀತಿ ಜಾರಿಗೆ ತರುವುದನ್ನು ಮೇ 15ರವರೆಗೆ ಮುಂದೂಡಿದೆ. ಸಾಮಾಜಿಕ ಮಾಧ್ಯಮ ದೈತ್ಯ ಎನಿಸಿಕೊಂಡಿರುವ ವಾಟ್ಸ್‌ಆ್ಯಪ್‌ ಆ ದಿನಾಂಕದ ವೇಳೆಗೆ ಬಳಕೆದಾರರಿಗೆ ತನ್ನ ಗೌಪ್ಯತಾ ಸುರಕ್ಷತೆ ಬಗ್ಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದೆ. ಕಟ್ಟಕಡೆಗೆ ಪ್ರಕರಣದಲ್ಲಿ ವಾಟ್ಸ್‌ಆ್ಯಪ್‌ ತನ್ನ ಬಲವಾದ ನಿಲುವು ಏನು ಎಂಬುದನ್ನು ಇದು ಸ್ಪಷ್ಟವಾಗಿ ವಿವರಿಸುತ್ತದೆ.

ವಾಟ್ಸ್‌ಆ್ಯಪ್‌ನ ಹೊಸ ಗೌಪ್ಯತಾ ನೀತಿ ಪ್ರಶ್ನಿಸಿ ವಕೀಲರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಹೈಕೋರ್ಟ್, ಸಾಮಾಜಿಕ ಮೆಸೇಜಿಂಗ್‌ ಅಪ್ಲಿಕೇಶನ್‌ನ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳುವುದು ವೈಯಕ್ತಿಕ ವಿಷಯ ಆಗಿದೆ ಮತ್ತು ಆ ವೇದಿಕೆಯನ್ನು ಬಳಸುವುದು ಅಥವಾ ಬಳಸದೇ ಇರುವ ಆಯ್ಕೆಗೆ ಅವಕಾಶ ಇದೆ ಎಂದು ನ್ಯಾಯಾಲಯ ತಿಳಿಸಿದೆ.

ವಿಷಯವನ್ನು ಅಲ್ಲಿಗೇ ಮುಕ್ತಾಯಗೊಳಿಸಲು ಸಾಧ್ಯ ಇಲ್ಲ ಎಂಬಷ್ಟು ಸೂಕ್ಷ್ಮವಾಗಿದೆ ಸಮಸ್ಯೆ. ಮಾಹಿತಿ ಸುರಕ್ಷತೆ ಕುರಿತು ಇತ್ತೀಚೆಗೆ ಭಾರತದ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಮತ್ತೊಂದು ಅರ್ಜಿ ಸುದ್ದಿಯಲ್ಲಿತ್ತು. ಮಾಹಿತಿ ಕದಿಯುವಿಕೆಯ ಆರೋಪಗಳನ್ನು ನಿರಾಕರಿಸಿರುವ ವಾಟ್ಸ್‌ಆ್ಯಪ್‌ ದತ್ತಾಂಶ ಸುರಕ್ಷತೆಗೆ ಹೆಚ್ಚಿನ ಭದ್ರತೆ ಒದಗಿಸುತ್ತಿರುವುದಾಗಿ ಹೇಳಿಕೊಂಡಿದೆ.

ಯಾರು ಯಾವುದೇ ನೀತಿ ಅಳವಡಿಸಿಕೊಂಡ್ರೂ, ನಾಗರಿಕರ ವೈಯಕ್ತಿಕ ಗೌಪ್ಯತೆಗೆ ಸಂಬಂಧಿಸಿದಂತೆ ರಾಜಿ ಮಾಡಿಕೊಳ್ಳುವುದನ್ನು ಕ್ಷಮಿಸಲು ಸಾಧ್ಯ ಇಲ್ಲ. ವೈಯಕ್ತಿಕ ಗೌಪ್ಯತೆ ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕು, ಅದು ಜೀವನದ ಹಕ್ಕು, ಸಮಾನತೆಯ ಹಕ್ಕು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಎಂದು 2017ರಲ್ಲಿ ಸುಪ್ರೀಂಕೋರ್ಟ್ ಉಚ್ಚರಿಸಿದ್ದನ್ನು ನೆನಪಿಸಿಕೊಳ್ಳುವುದು ಸೂಕ್ತ ಎನಿಸುತ್ತದೆ. ಜನತೆಯ ಗೌಪ್ಯತೆ ಕಾಪಾಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಆಗ ಸೂಚನೆ ನೀಡಿತ್ತು.

ವಿಶ್ವದ 90ಕ್ಕೂ ಹೆಚ್ಚು ದೇಶಗಳಲ್ಲಿ ವೈಯಕ್ತಿಕ ಗೌಪ್ಯತೆಯ ರಕ್ಷಣೆಗಾಗಿ ಬಲವಾದ ಕಾನೂನುಗಳು ಜಾರಿಯಲ್ಲಿವೆ. ಐರೋಪ್ಯ ಒಕ್ಕೂಟ ಜಾರಿಗೆ ತಂದಿರುವ ಸಾಮಾನ್ಯ ದತ್ತಾಂಶ ಸಂರಕ್ಷಣಾ ನಿಯಂತ್ರಣ (ಜಿಡಿಪಿಆರ್) ಈಗ ಇರುವ ಕಾನೂನುಗಳಲ್ಲಿ ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದು ಪರಿಗಣಿಸಲಾಗಿದೆ.

ಆ ದೇಶಗಳಲ್ಲಿ ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳು ಗೌಪ್ಯ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ, ಅಂತಹ ಯಾವುದೇ ಬಲವಾದ ಕಾನೂನು ಬಳಕೆಯಲ್ಲಿ ಇಲ್ಲದ ಭಾರತದ ಪರಿಸ್ಥಿತಿಯ ಲಾಭ ಪಡೆಯಲು ವಾಟ್ಸ್‌ಆ್ಯಪ್ ಪ್ರಯತ್ನ ಪಡುತ್ತಿದೆ. ವಾಟ್ಸ್‌ಆ್ಯಪ್ ಆಟ ಯಶಸ್ವಿಯಾಗಲು ಸರ್ಕಾರ ಅನುಮತಿ ಕೊಡಬಾರದು.

ನಾಗರಿಕರ ಖಾಸಗಿ ಮಾಹಿತಿಯನ್ನು ಇತರ ಉದ್ದೇಶಗಳಿಗೆ ಬಳಸಲು ಅನುಮತಿ ನೀಡದೇ ಇರುವ ಕಾನೂನನ್ನು ಸರ್ಕಾರ ತಕ್ಷಣ ಜಾರಿಗೆ ತರಬೇಕು. ತಜ್ಞರ ಪ್ರಕಾರ, 2019ರ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಪರಿಚಯಿಸಲಾದ ವೈಯಕ್ತಿಕ ಮಾಹಿತಿ ಸುರಕ್ಷತಾ ಮಸೂದೆ ಸಾಕಷ್ಟು ಪ್ರಬಲವಾಗಿಲ್ಲ. ಜಿಡಿಪಿಆರ್ ಮಾದರಿಯಲ್ಲಿ ಬಲವಾದ ಕಾನೂನನ್ನು ಜಾರಿಗೊಳಿಸುವುದು ವಾಟ್ಸ್ಆ್ಯಪ್‌ ಸೃಷ್ಟಿಸಿರುವ ವಿವಾದಕ್ಕೆ ತಕ್ಕ ಮದ್ದಾಗುತ್ತದೆ.

ABOUT THE AUTHOR

...view details