ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಐತಿಹಾಸಿಕ ಚಂದ್ರಯಾನ-3ರ ಕುರಿತು ಮಾಹಿತಿಗಳನ್ನು ಒದಗಿಸುತ್ತಾ ಬಂದಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನೆಡೆಗೆ ಯಶಸ್ವಿಯಾಗಿ ಸಾಗುತ್ತಿದೆ. ಆಗಸ್ಟ್ 23ರಂದು ಚಂದ್ರಯಾನ 3 ಚಂದ್ರನ ದಕ್ಷಿಣ ಧ್ರುವದ ಮೇಲೆ ತನ್ನ ಮೊದಲ ಸಾಫ್ಟ್ ಲ್ಯಾಂಡಿಂಗ್ ನಡೆಸಲು ಪ್ರಯತ್ನಿಸಲಿದೆ. ಈ ಕುರಿತು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಅವರು ನೀಡಿರುವ ವಿವರಣೆ ಹೀಗಿದೆ..
ಚಂದ್ರಯಾನ-3 ಈಗಾಗಲೇ ಯಶಸ್ವಿ ಡಿಬೂಸ್ಟಿಂಗ್ ಪ್ರಕ್ರಿಯೆ ನಡೆಸಿದ್ದು, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ಗಳನ್ನು ಒಳಗೊಂಡಿರುವ ಲ್ಯಾಂಡರ್ ಮಾಡ್ಯುಲ್ ಪ್ರಸ್ತುತ 113 ಕಿಲೋಮೀಟರ್ × 157 ಕಿಲೋಮೀಟರ್ ವ್ಯಾಪ್ತಿಯ ಕಕ್ಷೆಯಲ್ಲಿದೆ. ಎರಡನೆಯ ಡಿಬೂಸ್ಟಿಂಗ್ ಪ್ರಕ್ರಿಯೆ ಆಗಸ್ಟ್ 20, 2023ರಂದು ಅಂದಾಜು ಭಾರತೀಯ ಕಾಲಮಾನ 2:00 ಗಂಟೆಗೆ ನಡೆಯುವ ನಿರೀಕ್ಷೆಗಳಿವೆ.
ಈ ವರ್ಷ ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3, ಈ ಮೊದಲು ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಿ, ರೋವರ್ ಚಲಾಯಿಸಲು ಉದ್ದೇಶಿಸಿದ್ದ ಚಂದ್ರಯಾನ-2 ಯೋಜನೆಯ ಪರಿಷ್ಕೃತ ಆವೃತ್ತಿಯಾಗಿದೆ.
ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್‌ಗೆ ಇರುವ ಅಡೆತಡೆಗಳೇನು..
ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಲು ಇರುವ ಪ್ರಮುಖ ಸವಾಲುಗಳೆಂದರೆ:
- ಚಂದ್ರನ ಮೇಲ್ಮೈಯಿಂದ 100 ಕಿಲೋಮೀಟರ್ ಎತ್ತರದಲ್ಲಿ ಯಾವುದೇ ವಾತಾವರಣ ಇಲ್ಲದಿರುವುದರಿಂದ, ಪ್ಯಾರಾಚೂಟ್ ಮೂಲಕ ನಿಧಾನವಾಗಿ ಲ್ಯಾಂಡರ್ ಇಳಿಸಲು ಸಾಧ್ಯವಿಲ್ಲ.
- ಚಂದ್ರನ ಮೇಲ್ಮೈಯಿಂದ 100 ಕಿಲೋ ಮೀಟರ್ ಹಾಗೂ 100 ಮೀಟರ್ ಎತ್ತರದ ನಡುವೆ ಚಂದ್ರಯಾನ-2 ವೈಫಲ್ಯ ಅನುಭವಿಸಿತು. ಆ ಹಂತದಲ್ಲಿ, ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ 2.1 ಕಿಲೋಮೀಟರ್ ಎತ್ತರದಲ್ಲಿದ್ದ ಸಂದರ್ಭದಲ್ಲಿ, ಒಂದು ಸಾಫ್ಟ್‌ವೇರ್ ವೈಫಲ್ಯ ಅನುಭವಿಸಿ, ಅದರ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದೆ ಪತನಗೊಂಡಿತು.
- ಚಂದ್ರನ ಮೇಲ್ಮೈಯಿಂದ 100 ಮೀಟರ್‌ಗಳ ಎತ್ತರದಲ್ಲಿ, ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಮುಂದೆ ಏನಾದರೂ ಅನಿರೀಕ್ಷಿತ ಸವಾಲು, ಚಂದ್ರನ ಮೇಲ್ಮೈಯಲ್ಲಿ ಬದಲಾವಣೆ ಕಂಡುಬಂದರೆ, ಅದು ಸಾಫ್ಟ್‌ವೇರ್ ಗೊಂದಲ ಅಥವಾ ಆಲ್ಟಿಟ್ಯೂಡ್ ಸೆನ್ಸರ್ ಸಮಸ್ಯೆಗಳಿಗೆ ಹಾದಿ ಮಾಡಿಕೊಡಬಹುದು.
- ಲ್ಯಾಂಡಿಂಗ್ ಸಂದರ್ಭದಲ್ಲಿ, ಚಂದ್ರನ ಮೇಲ್ಮೈ ಕಣಗಳು ಮೇಲಕ್ಕೆ ಚಿಮ್ಮುತ್ತವೆ. ಆಗ ಸೆನ್ಸರ್‌ಗೆ ಸಮಸ್ಯೆಗಳು ಉಂಟಾಗಿ, ಥ್ರಸ್ಟರ್ ಕಾರ್ಯ ಸ್ಥಗಿತಗೊಳಿಸಬಹುದು. ಲ್ಯಾಂಡಿಂಗ್ ಪ್ರಕ್ರಿಯೆಯ ವೇಗ ನಿಧಾನಗೊಳಿಸಿದರೂ, ಚಂದ್ರನ ಮೇಲ್ಮೈ ಕಣಗಳು ಸವಾಲುಗಳನ್ನು ಒಡ್ಡಬಲ್ಲವು. ಈ ಕಣಗಳು ಲ್ಯಾಂಡರ್‌ನ ಕ್ಯಾಮರಾ ಲೆನ್ಸ್‌ಗೆ ಸಮಸ್ಯೆಗಳನ್ನು ಉಂಟುಮಾಡಿ, ಆ ಮೂಲಕ ತಪ್ಪಾದ ಮಾಹಿತಿಗಳನ್ನು ಒದಗಿಸಬಹುದು.
ಲ್ಯಾಂಡರನ್ನು ಓರೆಯಾಗಿಸುವಲ್ಲಿ ಇಸ್ರೋ ಮುಂದಿರುವ ಸವಾಲುಗಳು:
-ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಸುರಕ್ಷಿತ, ಸಾಫ್ಟ್ ಲ್ಯಾಂಡಿಂಗ್‌ಗೆ ಅದು ಚಲಿಸುವ ದಿಕ್ಕೂ ಅತ್ಯಂತ ಮಹತ್ವದ್ದಾಗಿದೆ ಎಂದು ಇಸ್ರೋ ಅಧ್ಯಕ್ಷರು ಹೇಳಿದ್ದಾರೆ. ಇದರ ಚಲನೆಯ ವೇಗ ಚಂದ್ರನ ಮೇಲ್ಮೈಗೆ ಸಮತಲವಾಗಿದ್ದರೂ, ಲ್ಯಾಂಡಿಂಗ್ ಪ್ರಕ್ರಿಯೆಯ ಆರಂಭಿಕ ವೇಗ ಪ್ರತಿ ಸೆಕೆಂಡಿಗೆ 1.68 ಕಿಲೋ ಮೀಟರ್ ಆಗಿರಲಿದೆ ಎಂದು ಅವರು ತಿಳಿಸಿದ್ದಾರೆ.
ಲ್ಯಾಂಡಿಂಗ್ ಪ್ರದೇಶದಲ್ಲಿ ಚಂದ್ರಯಾನ-3 90 ಡಿಗ್ರಿ ಓರೆಯಾಗಿರುವುದರಿಂದ, ಲ್ಯಾಂಡರ್ ನೇರವಾಗಿ ಇಳಿಯಬೇಕು. ಈ ಹಂತದಲ್ಲಿ ನಾವು ನಡೆಸಬೇಕಾದ 'ಟ್ರಿಕ್' ಎಂದರೆ, ಬಾಹ್ಯಾಕಾಶ ನೌಕೆಯನ್ನು ಅದರ ಕಾಲುಗಳು ಚಂದ್ರನ ಮೇಲ್ಮೈಗೆ ಸಮಾನಾಂತರವಾಗಿರುವಂತೆ, ಸಮತಲದಿಂದ ಲಂಬ ದಿಕ್ಕಿನಲ್ಲಿ ಚಲಿಸುವಂತೆ ಮಾಡುವುದು ಎಂದು ಇಸ್ರೋ ಅಧ್ಯಕ್ಷರು ತಿಳಿಸಿದ್ದಾರೆ.
- ಚಂದ್ರನ ಮೇಲೆ ಸುರಕ್ಷಿತ, ಯಶಸ್ವಿ ಲ್ಯಾಂಡಿಂಗ್ ನಡೆಸಲು, ಚಂದ್ರಯಾನ-3ನ್ನು ಹಲವು ಹಂತಗಳಲ್ಲಿ ಲಂಬ ಸ್ಥಾನಕ್ಕೆ ತರಲಾಗುತ್ತದೆ. ಈ ಹಿಂದೆ ಚಂದ್ರಯಾನ-2 ಯೋಜನೆಯಲ್ಲಿ ಲ್ಯಾಂಡಿಂಗ್ ನಡೆಸುವಾಗ ಇಸ್ರೋ ವೈಫಲ್ಯ ಅನುಭವಿಸಿದ ಕಾರಣದಿಂದ, ಈ ಪ್ರಕ್ರಿಯೆ ಅತ್ಯಂತ ಮಹತ್ವ ಪಡೆದಿದೆ.
- ಇಸ್ರೋ ಅಧ್ಯಕ್ಷರ ಪ್ರಕಾರ, ಇಂಧನ ಬಳಕೆಯನ್ನು ಕಡಿಮೆಗೊಳಿಸುವುದು, ನಿಖರ ದೂರದ ಲೆಕ್ಕಾಚಾರ ನಡೆಸುವುದು ಮತ್ತು ಎಲ್ಲ ಆಲ್ಗಾರಿತಂಗಳು ಉದ್ದೇಶಿಸಿದಂತೆ ಕಾರ್ಯಾಚರಿಸುತ್ತಿವೆಯೇ ಎಂದು ಖಾತ್ರಿ ಪಡಿಸುವುದು ಸಹ ಕಷ್ಟಕರ ಕೆಲಸಗಳಾಗಿವೆ.
ಆದರೆ, ಇಸ್ರೋದ ತಜ್ಞರ ತಂಡ ಒಂದು ವೇಳೆ ಲೆಕ್ಕಾಚಾರಗಳು ಕೊಂಚ ಗಲಿಬಿಲಿಯಾದರೂ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ.
"ಚಂದ್ರಯಾನ-3ರ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ, ಪ್ರತಿ ಸೆಕೆಂಡಿಗೆ ಮೂರು ಮೀಟರ್‌ಗಳಷ್ಟು ವೇಗ ಸಾಧಿಸುವುದು ಚಂದ್ರಯಾನ-3ಕ್ಕೆ ಯಾವುದೇ ತೊಂದರೆ ಉಂಟುಮಾಡುವುದಿಲ್ಲ" ಎಂದು ಇಸ್ರೋ ಅಧ್ಯಕ್ಷರಾದ ಸೋಮನಾಥ್ ಖಾತ್ರಿಪಡಿಸಿದ್ದಾರೆ.
- ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ