ಕರ್ನಾಟಕ

karnataka

ETV Bharat / opinion

ಚೀನಾ ಉತ್ಪನ್ನಗಳನ್ನು ನಿಷೇಧಿಸಿದರೆ ಭಾರತಕ್ಕೆ ಇನ್ನಷ್ಟು ಆಘಾತ: ಚೀನಾ ದಿನಪತ್ರಿಕೆ..!

ಗಡಿಯಲ್ಲಿ ಶಾಂತಿ ಮತ್ತು ಸಹಬಾಳ್ವೆಯಿಂದ ಮಾತ್ರವೇ ಏಷ್ಯಾದ ಎರಡು ಬೃಹತ್ ರಾಷ್ಟ್ರಗಳು ವ್ಯಾಪಾರ ಸಂಬಂಧವನ್ನು ಮತ್ತು ಆರ್ಥಿಕ ಸಂಬಂಧವನ್ನು ವೃದ್ಧಿಸಿಕೊಳ್ಳಬಹುದು. ಇದರಿಂದ ಎರಡೂ ದೇಶದ ಜನರಿಗೆ ಅನುಕೂಲಕರ ಎಂದು ವರದಿಯಲ್ಲಿ ಹೇಳಲಾಗಿದೆ.

ಚೀನಾ ಉತ್ಪನ್ನಗಳ ನಿಷೇಧ
Boycotting Chinese product

By

Published : Jun 22, 2020, 6:56 PM IST

ನವದೆಹಲಿ:ಭಾರತ ಮತ್ತು ಚೀನಾ ಗಡಿಯಲ್ಲಿ 20 ಭಾರತೀಯ ಯೋಧರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಚೀನಾ ವಿರೋಧಿ ಭಾವನೆಗಳು ಭುಗಿಲೆದ್ದಿವೆ. ಈ ಮಧ್ಯೆ, ಚೀನಾದಲ್ಲಿ ಉತ್ಪಾದನೆಯಾದ ಸಾಮಗ್ರಿಗಳು ಇಲ್ಲದಿದ್ದರೆ ಜೀವನ ನಡೆಸುವುದೇ ಕಷ್ಟವಾದೀತು ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್‌ ಹೇಳಿಕೊಂಡಿದೆ.

“ಗಡಿಯಲ್ಲಿ ಶಾಂತಿ ಮತ್ತು ಸಹಬಾಳ್ವೆಯಿಂದ ಮಾತ್ರವೇ ಏಷ್ಯಾದ ಎರಡು ಬೃಹತ್ ರಾಷ್ಟ್ರಗಳು ವ್ಯಾಪಾರ ಸಂಬಂಧವನ್ನು ಮತ್ತು ಆರ್ಥಿಕ ಸಂಬಂಧವನ್ನು ವೃದ್ಧಿಸಿಕೊಳ್ಳಬಹುದು. ಇದರಿಂದ ಎರಡೂ ದೇಶದ ಜನರಿಗೆ ಅನುಕೂಲಕರ” ಎಂದು ವರದಿಯಲ್ಲಿ ಹೇಳಲಾಗಿದೆ. ಚೀನಾ ಸರ್ಕಾರದ ನಿಲುವುಗಳನ್ನೇ ಅಭಿವ್ಯಕ್ತಪಡಿಸುವ ಇಂಗ್ಲಿಷ್ ದಿನಪತ್ರಿಕೆ ಗ್ಲೋಬಲ್ ಟೈಮ್ಸ್‌ ಪ್ರಕಟಿಸಿದ “ಗಡಿಯಲ್ಲಿನ ಸನ್ನಿವೇಶದಿಂದಾಗಿ ಚೀನಾ ಜೊತೆಗೆ ಆರ್ಥಿಕ ಸಂಬಂಧವನ್ನು ಭಾರತ ಕಡಿದುಕೊಳ್ಳಬಾರದು” ಎಂಬ ಶೀರ್ಷಿಕೆ ಇದೆ.

“ಪ್ರಸ್ತುತ ಗಡಿ ಸನ್ನಿವೇಶ ಇನ್ನಷ್ಟು ತೀವ್ರಗೊಳ್ಳುವುದನ್ನು ತಡೆಯಲು ಮತ್ತು ಉಭಯ ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರುವುದನ್ನು ತಡೆಯಲು ಎರಡೂ ದೇಶಗಳು ತಮ್ಮ ಅಧಿಕಾರವನ್ನು ಬಳಸಿಕೊಳ್ಳಬೇಕು” ಎಂದು ಅದರಲ್ಲಿ ಹೇಳಲಾಗಿದೆ.

ಲಡಾಖ್‌ನ ಗಲ್ವನ್ ಕಣಿವೆಯಲ್ಲಿ ಜೂನ್ 15-16 ರ ರಾತ್ರಿ ಚೀನಾ ಸೇನೆಯ ಜೊತೆಗೆ ನಡೆದ ಕಾದಾಟದಲ್ಲಿ ಒಬ್ಬ ಕರ್ನಲ್ ಸೇರಿದಂತೆ 20 ಭಾರತೀಯ ಯೋಧರು ಹುತಾತ್ಮಕರಾಗಿದ್ದಾರೆ. ಉದ್ವಿಗ್ನ ಪರಿಸ್ಥಿತಿಯನ್ನು ತಹಬಂದಿಗೆ ತರಲು ನವದೆಹಲಿ ಮತ್ತು ಬೀಜಿಂಗ್‌ ರಾಜತಾಂತ್ರಿಕ ಮತ್ತು ಸೇನಾ ಮಟ್ಟದಲ್ಲಿ ಮಾತುಕತೆಗಳನ್ನು ನಡೆಸುತ್ತಿದ್ದರೂ, ಭಾರತದ ಸಾರ್ವಜನಿಕರಲ್ಲಿ ಚೀನಾ ವಿರುದ್ಧ ಸಿಟ್ಟು ಹೆಚ್ಚುತ್ತಿದೆ. ಕೇಂದ್ರ ಸಚಿವರು ಚೀನಾದ ಆಹಾರವನ್ನು ಕೂಡ ನಿಷೇಧಿಸುವಂತೆ ಕರೆ ನೀಡಿದ್ದಾರೆ!

ಚೀನಾದಲ್ಲಿ ತಯಾರಾದ ಟೆಲಿವಿಷನ್ ಸೆಟ್‌ಗಳು ಹಾಗೂ ಇತರ ಸಾಮಗ್ರಿಯನ್ನು ಭಾರತೀಯರು ಒಡೆದುಹಾಕುವ ದೃಶ್ಯಗಳನ್ನು ಹೊಂದಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಭಾರತ-ಚೀನಾದ 3488 ಕಿ.ಮೀ ಉದ್ದದ ಗಡಿಯಲ್ಲಿ 45 ವರ್ಷಗಳ ನಂರ ಇದೇ ಮೊದಲ ಬಾರಿಗೆ ಸಾವು ಸಂಭವಿಸಿದೆ.

ಲಡಾಖ್‌ನಲ್ಲಿ ಸಂಭವಿಸಿದ ಸಂಘರ್ಷವನ್ನು ದುರಾದೃಷ್ಟಕರ ಎಂದು ವ್ಯಾಖ್ಯಾನಿಸಿದ ಗ್ಲೋಬಲ್ ಟೈಮ್ಸ್ ಲೇಖನವು, “ಈ ಸನ್ನಿವೇಶವನ್ನು ಚೀನಾ ಮತ್ತು ಭಾರತದ ರಾಜಕಾರಣಿಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಬಳಸಿಕೊಂಡು ದೇಶಪ್ರೇಮ ಮತ್ತು ಚೀನಾ ವಿರುದ್ಧ ದ್ವೇಷವನ್ನು ಹುಟ್ಟುಹಾಕಬಾರದು. ಭಾರತವು ತನ್ನ ಆರ್ಥಿಕತೆಯ ಪ್ರಗತಿಗೆ ಬೃಹತ್‌ ನೆರೆ ರಾಷ್ಟ್ರವಾದ ಚೀನಾವನ್ನೇ ಅವಲಂಬಿಸಿದೆ” ಎಂದಿದೆ.

“ಆದರೆ, ಹಲವು ಭಾರತೀಯ ಟಿವಿ ನಿರೂಪಕರು ಮತ್ತು ದಿನಪತ್ರಿಕೆಗಳ ಅಂಕಣಕಾರರು ಗಡಿ ವಿವಾದವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಬಹುತೇಕರು ಚೀನಾಗೆ ಪಾಠ ಕಲಿಸುವಂತೆ ಒತ್ತಡ ಹೇರುತ್ತಿದ್ದಾರೆ” ಎಂದು ಪತ್ರಿಕೆ ವ್ಯಾಖ್ಯಾನಿಸಿದೆ.

“ಭಾರತೀಯ ಜನರು ತಮ್ಮ ದೇಶದ ಪ್ರಚೋದಕರಿಂದ ಮೋಸ ಹೋಗುವುದಿಲ್ಲ ಎಂದು ನಾವು ನಂಬಿದ್ದೇವೆ. ಭಾರತಕ್ಕೆ ಚೀನಾ ಆರ್ಥಿಕವಾಗಿ ಮತ್ತು ಭೌಗೋಳಿಕವಾಗಿ ಅಗತ್ಯವಿದೆ.”

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಒಟ್ಟು ಭಾರತ ಮತ್ತು ಚೀನಾ ವ್ಯಾಪಾರ ಪ್ರಮಾನವು 95.54 ಬಿಲಿಯನ್ ಡಾಲರ್ ಆಗಿದ್ದು, ಭಾರತದ ರಫ್ತು 18.84 ಬಿಲಿಯನ್ ಡಾಲರ್ ಆಗಿದೆ. ಚೀನಾ ಉತ್ಪನ್ನಗಳಿಗೆ ಭಾರತವು ಏಳನೇ ಅತಿದೊಡ್ಡ ರಫ್ತು ದೇಶವಾಗಿದೆ ಮತ್ತು ಚೀನಾಗೆ 27ನೇ ಅತಿದೊಡ್ಡ ರಫ್ತುದಾರನಾಗಿದೆ. 2019 ಜನವರಿಯಿಂದ ಜುಲೈ ಅವಧಿಯಲ್ಲಿ ಭಾರತ-ಚೀನಾ ವ್ಯಾಪಾರವು 53.3 ಬಿಲಿಯನ್ ಡಾಲರ್ ಆಗಿತ್ತು. ಚೀನಾಗೆ ಭಾರತದ ರಫ್ತು 10.38 ಬಿಲಿಯನ್ ಡಾಲರ್ ಆಗಿದೆ. ಇದು ಶೇ. 5.02 ರಷ್ಟು ಇಳಿಕೆ ಕಂಡಿದೆ ಮತ್ತು ಭಾರತದಕ್ಕೆ ಚೀನಾದ ರಫ್ತು 42.92 ಬಿಲಿಯನ್ ಡಾಲರ್ ಆಗಿದೆ. ಶೇ. 2.51 ರಷ್ಟು ಇಳಿಕೆ ಕಂಡಿದೆ. ಭಾರತದ ಪ್ರಮುಖ ರಫ್ತು ಸಾಮಗ್ರಿಯೆಂದರೆ ಹತ್ತಿ, ತಾಮ್ರ ಮತ್ತು ವಜ್ರ/ನೈಸರ್ಗಿಕ ಹರಳುಗಳಾಗಿದ್ದರೆ, ಭಾರತಕ್ಕೆ ಚೀನಾದ ಪ್ರಮುಖ ರಫ್ತು ಎಂದರೆ ಯಂತ್ರಗಳು, ಟೆಲಿಕಾಂ ಮತ್ತು ವಿದ್ಯುತ್ ಸಂಬಂಧಿ ಸಲಕರಣೆಗಳು, ಸಾವಯವ ರಾಸಾಯನಿಕಗಳು ಮತ್ತು ರಸಗೊಬ್ಬರಗಳಾಗಿವೆ.

“ಭಾರತಕ್ಕೆ ಚೀನಾ ಹಲವು ಅವಕಾಶಗಳನ್ನು ಒದಗಿಸುತ್ತದೆ” ಎಂದು ಉಲ್ಲೇಖಿಸಿರುವ ಗ್ಲೋಬಲ್ ಟೈಮ್ಸ್‌ ಲೇಖನವು “ಭಾರತದಲ್ಲಿ ಸ್ವಘೋಷಿತ 30 ಯೂನಿಕಾರ್ನ್ ಸ್ಟಾರ್ಟಪ್‌ ಉದ್ಯಮಗಳ ಪೈಕಿ 18 ರಲ್ಲಿ ಚೀನಾದ ಹೂಡಿಕೆ ಇದೆ. ಭಾರತೀಯರು ಬಳಸುವ ಬಹುತೇಕ ನಿತ್ಯ ಸಾಮಗ್ರಿಗಳಾದ ಕಲರ್ ಟಿವಿಗಳು, ಮೈಕ್ರೋವೇವ್ ಓವನ್‌ಗಳು ಮತ್ತು ಏರ್‌ ಕಂಡೀಷನ್‌ಗಳಿಂದ ಹಿಡಿದು ಅತ್ಯಂತ ಜನಪ್ರಿಯ ಮೊಬೈಲ್‌ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳವರೆಗೆ ಎಲ್ಲವನ್ನೂ ಚೀನಾದಲ್ಲಿ ಉತ್ಪಾದಿಸಲಾಗುತ್ತಿದೆ. ಕೈಗೆಟಕುವ ದರ ಮತ್ತು ಉತ್ತಮ ಗುಣಮಟ್ಟದಿಂದಾಗಿ ಚೀನಾ ಸಾಮಗ್ರಿಗಳನ್ನು ಬದಲಾವಣೆ ಮಾಡುವುದು ಕಷ್ಟಕರವಾಗಿದೆ.”

ಭಾರತವು “ಏಷ್ಯಾದಲ್ಲಿ ಭೌಗೋಳಿಕ ಉದ್ವಗ್ನತೆಯನ್ನು ಹೆಚ್ಚಿಸಬಾರದು” ಎಂದಿರುವ ಲೇಖನವು “ಚೀನಾ ಜೊತೆಗೆ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳಲು ಭಾರತಕ್ಕೆ 100 ಕಾರಣಗಳಿವೆ. ಯಾಕೆಂದರೆ ಯಾವುದೇ ದೇಶಗಳೂ ತಮ್ಮ ದೇಶವನ್ನು ಭೌಗೋಳಿಕವಾಗಿ ಬೇರೆಡೆ ಕೊಂಡೊಯ್ಯಲು ಸಾಧ್ಯವಿಲ್ಲ.” ಎಂದಿದೆ.

2017 ರಲ್ಲಿ ಭಾರತ-ಭೂತಾನ್-ಚೀನಾ ಅಂತಾರಾಷ್ಟ್ರೀಯ ಗಡಿಯಾದ ಡೋಕ್ಲಾಮ್‌ನಲ್ಲಿ 73 ದಿನಗಳವರೆಗೆ ಸೇನೆಗಳ ಮಧ್ಯೆ ಸಂಘರ್ಷ ನಡೆದ ನಂತರದಲ್ಲಿ ಇತ್ತೀಚೆಗೆ ಭಾರತ-ಚೀನಾ ಗಡಿ ಸಂಘರ್ಷ ಉಂಟಾಗಿದೆ. ಡೋಕ್ಲಾಂ ಸಂಘರ್ಷದ ನಂತರದಲ್ಲಿ ಅದೇ ವರ್ಷ ಕಝಕಿಸ್ತಾನದಲ್ಲಿ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭೇಟಿ ನಡೆಸಿದ್ದರು ಮತ್ತು ಎರಡೂ ದೇಶಗಳ ಮಧ್ಯದ ಭಿನ್ನಾಭಿಪ್ರಾಯಗಳನ್ನು ವಿವಾದಗಳನ್ನಾಗಿಸದಿರಲು ಎರಡೂ ದೇಶಗಳ ಮುಖಂಡರು ಒಪ್ಪಿದ್ದರು. ಇದನ್ನು ಈಗ ಅಸ್ತಾನಾ ಒಪ್ಪಂದ ಎಂದು ಕರೆಯಲಾಗುತ್ತಿದೆ.

ಕೋವಿಡ್ 19 ಮೊದಲು ಕಾಣಿಸಿಕೊಂಡಿದ್ದ ವುಹಾನ್‌ನಲ್ಲೇ ಉಭಯ ದೇಶಗಳ ಸಂಬಂಧವನ್ನು ವೃದ್ಧಿಸುವುದಕ್ಕಾಗಿ 2018 ರಲ್ಲಿ ಕ್ಸಿ ಅನೌಪಚಾರಿಕ ಶೃಂಗವನ್ನು ಮೋದಿಗಾಗಿ ಆಯೋಜಿಸಿದ್ದರು. ಇದೇ ರೀತಿ ಚೀನಾದ ಅಧ್ಯಕ್ಷರಿಗಾಗಿ ಕಳೆದ ವರ್ಷ ಚೆನ್ನೈನ ಮಹಾಬಲಿಪುರಂನಲ್ಲಿ ಸಮ್ಮೇಳನವನ್ನು ಹಮ್ಮಿಕೊಂಡಿದ್ದರು.

ಲಡಾಖ್‌ನಲ್ಲಿ ಇತ್ತೀಚೆಗೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದಾಗಿ, ಮೋದಿ ಮತ್ತು ಕ್ಸಿ ಮಧ್ಯದ ವೈಯಕ್ತಿಕ ಸಂಬಂಧದ ಬಗ್ಗೆ ಟೀಕಾಕಾರರು ಪ್ರಶ್ನಿಸುತ್ತಿದ್ದಾರೆ. “ವುಹಾನ್ ಸ್ಪಿರಿಟ್‌” ಮತ್ತು “ಚೆನ್ನೈ ಕನೆಕ್ಟ್‌” ಈಗ ಎಲ್ಲಿ ಹೋಯಿತು ಎಂದು ಅವರು ಈಗ ಪ್ರಶ್ನಿಸುತ್ತಿದ್ದಾರೆ.

ಕೊರೊನಾವೈರಸ್ ಹರಡಿದ್ದರ ಬಗ್ಗೆ ಜಾಗತಿಕ ಮಟ್ಟದಲ್ಲಿ ಚೀನಾ ವಿರುದ್ಧ ಟೀಕೆ ವ್ಯಕ್ತವಾಗುತ್ತಿರುವುದರ ಮಧ್ಯೆಯೇ, ಚೀನಾ-ಅಮೆರಿಕ ವ್ಯಾಪಾರ ಯುದ್ಧದ ಲಾಭವನ್ನು ನವದೆಹಲಿ ಪಡೆದುಕೊಂಡು ವಾಷಿಂಗ್ಟನ್‌ಗೆ ಹತ್ತಿರವಾಗುತ್ತಿವ ಬಗ್ಗೆ ಬೀಜಿಂಗ್‌ಗೆ ಸಂಕಟ ಎದುರಾಗಿದೆ.

ಭಾರತ ಮತ್ತು ಅಮೆರಿಕವು ಜಪಾನ್ ಹಾಗೂ ಆಸ್ಟ್ರೇಲಿಯಾ ಜೊತೆ ಸೇರಿ ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಶಪಥ ಮಾಡಿವೆ. ಈ ಒಕ್ಕೂಟವು ಜಪಾನ್‌ನ ಪೂರ್ವ ಕರಾವಳಿಯಿಮದ ಆಫ್ರಿಕಾದ ಪೂರ್ವ ಕರಾವಳಿಯವರೆಗೆ ವ್ಯಾಪಿಸಿದೆ. ಈ ವಲಯದಲ್ಲಿ ಚೀನಾದ ಹೆಜ್ಜೆಗುರುತು ಹೆಚ್ಚುತ್ತೊರುವುದು ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ.

ಅರೂಣಿಮ್‌ ಭುಯಾನ್

ABOUT THE AUTHOR

...view details