ಬೆಂಗಳೂರು :ಬೊಮ್ಮಾಯಿ ಸರ್ಕಾರ ವರ್ಷದ ಹರ್ಷದಲ್ಲಿದೆ. ತನ್ನ ವರ್ಷದ ಆಡಳಿತದ ಸಾಧನಾ ಸಮಾವೇಶ ಮಾಡಲು ಸಿದ್ಧತೆಯನ್ನು ಸಹ ನಡೆಸುತ್ತಿದೆ. ಆದರೆ ಬೊಮ್ಮಾಯಿ ಸರ್ಕಾರದ ಆಡಳಿತದಲ್ಲಿ ಕೆಲ ವೈಫಲ್ಯಗಳು ಎದ್ದು ಕಾಣುತ್ತವೆ.
ಬೊಮ್ಮಾಯಿ ಸರ್ಕಾರ ಒಂದು ವರ್ಷ ಆಡಳಿತ ಪೂರೈಸಿರುವ ಸಂಭ್ರಮದಲ್ಲೇನೋ ಇದೆ. ಅದಕ್ಕಾಗಿ ದೊಡ್ಡಬಳ್ಳಾಪುರದಲ್ಲಿ ಜುಲೈ 28ರಂದು ಬೃಹತ್ ಸಾಧನಾ ಸಮಾವೇಶವನ್ನು ಹಮ್ಮಿಕೊಂಡಿದೆ. ಸಮಾವೇಶದಲ್ಲಿ ಸಹಜವಾಗಿ ಬೊಮ್ಮಾಯಿ ಸರ್ಕಾರ ತನ್ನ ಸಾಧನೆ, ಜನಪರ ಯೋಜನೆ, ಮಹತ್ವದ ನಿರ್ಣಯಗಳ ಬಗ್ಗೆ ಅಬ್ಬರದ ಪ್ರಚಾರ ನಡೆಸಲಿದೆ. ಬೊಮ್ಮಾಯಿ ಆಡಳಿತದ ಸಾಧನೆಯ ಪ್ರಚಾರದ ಮಧ್ಯೆ ಕೆಲ ವೈಫಲ್ಯಗಳನ್ನು ಅಲ್ಲಗಳೆಯುವಂತಿಲ್ಲ.
ವರ್ಷವಾದರೂ ಆಡಳಿತಕ್ಕೆ ಮುಟ್ಟದ ಚುರುಕು:ಆಡಳಿತಕ್ಕೆ ಚುರುಕು ಮುಟ್ಟಿಸಿ ಜನಪರ ಆಡಳಿತವನ್ನು ಕೊಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಅವರು ಗದ್ದುಗೆ ಏರಿದಾಗಲೇ ಭರವಸೆ ನೀಡಿದ್ದರು. ಆದರೆ ಆಡಳಿತ ನಡೆಸಿ ವರ್ಷ ಆದರೂ ನಿರೀಕ್ಷಿತ ಚುರುಕು ಮುಟ್ಟಿಸಲು ಸಾಧ್ಯವಾಗಿಲ್ಲ. ಕಡತ ವಿಲೇವಾರಿ ವಿಳಂಬವಾಗಿನೇ ಸಾಗುತ್ತಿದೆ. ಸಾವಿರಾರು ಕಡತಗಳು ವಿಲೇವಾರಿಯಾಗದೇ ವಿವಿಧ ಇಲಾಖೆಗಳಲ್ಲೇ ಹಾಗೇ ಬಾಕಿ ಉಳಿದುಕೊಂಡಿವೆ. ಕಡತ ವಿಲೇವಾರಿಯಾಗದೇ ಇರುವ ಬಗ್ಗೆ ಸಾರ್ವಜನಿಕರೂ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸಾರ್ವಜನಿಕರು ಮಾತ್ರವಲ್ಲ, ಬಿಜೆಪಿ ಶಾಸಕರೇ ಬಹಿರಂಗವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯೋಜನೆಗಳ ಅನುಷ್ಠಾನದಲ್ಲೂ ವಿಳಂಬ:ಹಲವು ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗಿ ಜಾರಿಯಾಗದೇ ಇರುವುದು ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲೇ ಬಹಿರಂಗವಾಗಿದೆ. ವಸತಿ ಯೋಜನೆಯಲ್ಲಿನ ಮನೆ ನಿರ್ಮಾಣ, ಮನೆ ಹಂಚಿಕೆಯಲ್ಲಿ ಬೊಮ್ಮಾಯಿ ಸರ್ಕಾರ ಕಳಪೆ ಪ್ರದರ್ಶನ ತೋರಿದೆ. ಪ್ರಮುಖವಾಗಿ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಜಲಜೀವನ್ ಮಿಷನ್, ಗ್ರಾಮೀಣ ಸಡಕ್ ಯೋಜನೆ, ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು ಕಳಪೆ ಪ್ರಗತಿ ಸಾಧಿಸಿದೆ.
ಆಮೆಗತಿಯಲ್ಲಿ ಕಡತ ವಿಲೇವಾರಿ:ಪ್ರತಿ ಸಭೆಯಲ್ಲೂ ಸಿಎಂ ತ್ವರಿತ ಕಡತ ವಿಲೇವಾರಿಗೆ ಸೂಚನೆ ಕೊಡುತ್ತಿದ್ದರೂ, ವಾಸ್ತವದಲ್ಲಿ ಕಡತ ವಿಲೇವಾರಿಗೆ ವೇಗ ಮಾತ್ರ ಸಿಗುತ್ತಿಲ್ಲ. ಅಂಕಿ-ಅಂಶದ ಪ್ರಕಾರ ಬೊಮ್ಮಾಯಿ ಅಧಿಕಾರ ಸ್ವೀಕರಿಸಿದಾಗಿನಿಂದ ಸುಮಾರು 15.2 ಲಕ್ಷ ಕಡತಗಳು ಸೃಷ್ಟಿಯಾಗಿವೆ. ಈ ಪೈಕಿ ಕೇವಲ 10% ಕಡತಗಳು ವಿಲೇವಾರಿಯಾಗಿದೆ. ಸುಮಾರು 40% ಕಡತಗಳು ಆರೇಳು ತಿಂಗಳಿಂದ ವಿಲೇವಾರಿಯಾಗದೇ ಹಾಗೇ ಬಾಕಿ ಉಳಿದುಕೊಂಡಿವೆ ಎನ್ನಲಾಗ್ತಿದೆ. ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಪ್ರಾದೇಶಿಕ ಕಚೇರಿಗಳಲ್ಲಿ ಸುಮಾರು 78.2 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕಡತ ವಿಲೇವಾರಿಗೆ ಚುರುಕು ಮುಟ್ಟಿಸುವಲ್ಲಿ ಬೊಮ್ಮಾಯಿ ಸರ್ಕಾರ ವಿಫಲವಾಗಿರುವುದು ಎದ್ದು ಕಾಣುತ್ತದೆ.
ನೆರೆ ಪರಿಹಾರದಲ್ಲೂ ಎಡವಿದ ಸರ್ಕಾರ:ಬೊಮ್ಮಾಯಿ ಅಧಿಕಾರ ಸ್ವೀಕರಿಸಿದ ಬಳಿಕವೂ ರಾಜ್ಯದಲ್ಲಿ ಮಳೆಯ ಅನಾಹುತ ಮುಂದುವರಿದಿದೆ. ಅತಿವೃಷ್ಟಿಗೆ ಸಾವಿರಾರು ಕೋಟಿ ಮೌಲ್ಯದ ಬೆಳೆ, ಮನೆಗಳು ಹಾನಿಯಾಗಿವೆ. ರೈತರ ಬೆಳೆ ಹಾನಿ ಬೃಹತ್ ಪ್ರಮಾಣದಲ್ಲಿ ಸಂಭವಿಸಿದೆ. ಸಾವಿರಾರು ಜನ ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದಾರೆ. ಬೊಮ್ಮಾಯಿ ಸರ್ಕಾರ ದುಪ್ಪಟ್ಟು ಪರಿಹಾರ ಹಣವನ್ನೇನೋ ಘೋಷಿಸಿತು. ಆದರೆ, ಪರಿಹಾರ ವಿತರಣೆ ಮಾತ್ರ ಪರಿಣಾಮಕಾರಿಯಾಗಿ ಸಾಧ್ಯವಾಗಿಲ್ಲ.
2019-20ರಲ್ಲಿ ಪ್ರವಾಹ ಸಂತ್ರಸ್ತರ ಪುನರ್ವಸತಿ ಯೋಜನೆ ಅಡಿ 2,316.93 ಕೋಟಿ ರೂ. ಅನುದಾನ ಅಗತ್ಯವಿತ್ತು. ಆದರೆ ಸರ್ಕಾರದಿಂದ ಈವರೆಗೆ 1,764.97 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸರ್ಕಾರದಿಂದ ಇನ್ನೂ 551.96 ಕೋಟಿ ರೂ ಬಾಕಿ ಇದೆ. ಅದೇ 2020-21ನೇ ಸಾಲಿನಲ್ಲಿ 571.50 ಕೋಟಿ ರೂ. ಅನುದಾನ ಅವಶ್ಯಕತೆ ಇತ್ತು. ಈ ಪೈಕಿ 309.39ಕೋಟಿ ರೂ. ಬಿಡುಗಡೆ ಮಾಡಿದ್ದರೆ, 262.11 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. 2021-22ರಲ್ಲಿ 995.74 ಕೋಟಿ ರೂ. ಅನುದಾನದ ಪ್ರಸ್ತಾವನೆ ಸಲ್ಲಿಸಿದ್ದರೂ ಇದುವರೆಗೂ ನಯಾ ಪೈಸೆಯೂ ಬಿಡುಗಡೆಯಾಗಿಲ್ಲವಂತೆ.