ನವದೆಹಲಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೋಪಾಲ್ ಭೇಟಿಯ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಕುರಿತು ಸುಳಿವು ನೀಡಿದ ನಂತರ, ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಏಕರೂಪ ನಾಗರಿಕ ಸಂಹಿತೆಯ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಹುಶಃ 2024 ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ನಾಗರಿಕ ಸಂಹಿತೆ ಜಾರಿ ಮಾಡುವ ಉದ್ದೇಶ ಹೊಂದಿದೆ ಎಂಬ ಚರ್ಚೆ ಶುರುವಾಗಿದೆ.
ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗಷ್ಟೇ ಚುನಾವಣೆ ನಡೆದ ಉತ್ತರಾಖಂಡದಲ್ಲಿ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನ ಘೋಷಿಸಿದ್ದಾರೆ. ಸಂಹಿತೆ ಜಾರಿ ಮಾಡಲು ಘೋಷಿಸಿದ ಮೊದಲ ಮುಖ್ಯಮಂತ್ರಿಯಾಗಿ ಧಾಮಿ ಆಗಿದ್ದಾರೆ. ಅಲ್ಲದೇ, ಈ ಉದ್ದೇಶಕ್ಕಾಗಿ ಸಮಿತಿಯನ್ನೂ ರಚನೆ ಮಾಡಲಾಗಿದೆ. ಇದಲ್ಲದೇ, ನೆರೆಯ ರಾಜ್ಯವಾದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಈಟಿವಿ ಭಾರತ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ವಿಷಯದ ಕುರಿತು ಚರ್ಚಿಸಲಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ.
ಸಿವಿಲ್ ಕೋಡ್ ಪರ ಹೆಚ್ಚಿದ ಕೂಗು:ಉತ್ತರ ಪ್ರದೇಶದ ಚುನಾವಣೆಯ ನಂತರ ದೇಶದ ಎಲ್ಲ ರಾಜ್ಯಗಳಲ್ಲಿ ಏಕರೂಪ ಕಾನೂನು ಜಾರಿಯಾಗಬೇಕು ಎಂಬ ಕೂಗು ಜೋರಾಗಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪ್ರಗತಿಪರ ಪಕ್ಷದ ಮುಖ್ಯಸ್ಥ ಶಿವಪಾಲ್ ಯಾದವ್ ಅವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಪರ ಮಾತನಾಡಿದ್ದರು. ಇದಲ್ಲದೇ, ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಕೂಡ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅಗತ್ಯತೆಯ ಬಗ್ಗೆ ಪ್ರಸ್ತಾಪಿಸಿದ್ದರು.
ಮತ್ತೊಂದೆಡೆ, ಗೋವಾ ಮಾತ್ರ 1961 ರಿಂದ ಕಾಮನ್ ಸಿವಿಲ್ ಕೋಡ್ ಜಾರಿಯಲ್ಲಿರುವ ಏಕೈಕ ಬಿಜೆಪಿ ಆಡಳಿತದ ರಾಜ್ಯವಾಗಿದೆ. ಪೋರ್ಚುಗೀಸ್ ಆಳ್ವಿಕೆಯಲ್ಲಿ 1961 ಕ್ಕಿಂತ ಮುಂಚೆಯೇ ಸಿವಿಲ್ ಕೋಡ್ ಅನ್ನು ಜಾರಿಗೆ ತರಲಾಯಿತು. ಕಾಮನ್ ಸಿವಿಲ್ ಕೋಡ್ ಅನುಷ್ಠಾನದ ನಂತರ ಅದು ವಿವಿಧ ಧರ್ಮಾಧಾರಿತ ಸಮುದಾಯಗಳ ಮೇಲೆ ಅನ್ವಯಿಸುತ್ತದೆ. ಮದುವೆಗೆ ಸಂಬಂಧಿಸಿದಂತೆ ಹೊಸ ಕಾನೂನು, ವಿಚ್ಛೇದನ, ಉತ್ತರಾಧಿಕಾರ, ದತ್ತು ಸೇರಿದಂತೆ ವಿವಿಧ ವಿಷಯಗಳ ಮೇಲೆ ಅದು ಕಾರ್ಯನಿರ್ವಹಿಸುತ್ತದೆ.
ಸಂವಿಧಾನದಲ್ಲೂ ಕೋಡ್ ಪ್ರಸ್ತಾಪ:ಭಾರತೀಯ ಸಂವಿಧಾನದ 44 ನೇ ವಿಧಿಯೂ ಏಕರೂಪ ಕಾನೂನಿನ ಬಗ್ಗೆ ಪ್ರಸ್ತಾಪಿಸುತ್ತದೆ. ಈ ಕಾನೂನು ದೇಶದ ಎಲ್ಲ ಧರ್ಮಗಳಿಗೆ ಸೇರಿದ ಜನರಿಗೆ ಅನ್ವಯಿಸಬೇಕು ಎಂದೂ ಹೇಳುತ್ತದೆ. ಇದೀಗ ಬಿಜೆಪಿ ನೇತೃತ್ವದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಂದ ಪ್ರಾರಂಭವಾದ ಸಾಮಾನ್ಯ ನಾಗರಿಕ ಸಂಹಿತೆಯ ಜಾರಿ ಚರ್ಚೆಯು ಕೇವಲ ರಾಜಕೀಯಕ್ಕಾಗಿಯೋ ಅಥವಾ 2024 ರ ಚುನಾವಣೆಯ ಪೂರ್ವಭಾವಿ ಸಿದ್ಧತೆಗೆಗಾಗಿ ಮಾತ್ರ ಮುನ್ನೆಲೆಗೆ ಬಂದಿದೆಯೋ ಎಂಬುದು ದೊಡ್ಡ ಪ್ರಶ್ನೆಯಾಗಿದೆ.