ಭಾರತದ ಅಧ್ಯಕ್ಷತೆಯಲ್ಲಿ 18ನೇ ಜಿ-20 ಶೃಂಗಸಭೆಯು ನವದೆಹಲಿಯಲ್ಲಿ ಸೆಪ್ಟೆಂಬರ್ 10 ರಂದು ಅತ್ಯಂತ ಯಶಸ್ವಿಯಾಗಿ ತೆರೆ ಕಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇಗ್ನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಅಧಿಕಾರದ ದಂಡ ಹಸ್ತಾಂತರಿಸಿದರು. ಬ್ರೆಜಿಲ್ ಮುಂದಿನ ಜಿ20 ಶೃಂಗದ ಅಧ್ಯಕ್ಷತೆ ವಹಿಸಿಕೊಳ್ಳಲಿದೆ. ಜಿ20 ಶೃಂಗಸಭೆ ಹಿನ್ನೆಲೆ ವರ್ಷಪೂರ್ತಿ ನಡೆದ 200 ಕ್ಕೂ ಅಧಿಕ ಸಭೆಗಳಲ್ಲಿ 112 ಕ್ಕೂ ಅಧಿಕ ಘೋಷಣೆಗಳನ್ನು ಹೊರಡಿಸಲಾಗಿದೆ. ಇವೆಲ್ಲವಕ್ಕೂ ವಿಶ್ವ ನಾಯಕರು ಉಘೇ ಎಂದಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ಇಂಡೋನೇಷ್ಯಾದಿಂದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಬಳಿಕ ಇನ್ನಿಲ್ಲದ ರೀತಿಯಲ್ಲಿ ಸಭೆಗಾಗಿ ಶ್ರಮಿಸಲಾಗಿದೆ. ಅದರ ನಡುವೆ ರಷ್ಯಾ - ಉಕ್ರೇನ್ ಘರ್ಷಣೆಯು ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿರುವುದು. ಹೀಗಾಗಿ ಶೃಂಗಸಭೆಯು ಯಾವುದೇ ದೊಡ್ಡ ಮಟ್ಟದ ಘೋಷಣೆಗಳನ್ನು ಇಲ್ಲದೇ ಮುಗಿಯಲಿದೆ ಎಂದು ಹಲವು ಪಂಡಿತರು ಊಹಿಸಿದ್ದರು. ಆದರೆ, ಇದೆಲ್ಲವನ್ನೂ ಮೆಟ್ಟಿನಿಂತು ಶೃಂಗಸಭೆ ಯಶಸ್ವಿಯಾಗಿದೆ.
ವರ್ಷದ ಆರಂಭದಲ್ಲಿ ಶ್ರೀನಗರದಲ್ಲಿ ನಡೆದ ಜಿ-20 ಪ್ರವಾಸೋದ್ಯಮ ಸಭೆಯಲ್ಲಿ ಚೀನಾ, ಸೌದಿ ಅರೇಬಿಯಾ, ಈಜಿಪ್ಟ್ ಮತ್ತು ಯುಎಇ ಗೈರು ಹಾಜರಾಗಿದ್ದವು. ಇದು ಸಭೆಯ ವೈಫಲ್ಯದ ಮುನ್ನುಡಿ ಎಂದೇ ಹೇಳಲಾಗಿತ್ತು. ಇದಾದ ಬಳಿಕ ಮಹಿಳಾ ಸಬಲೀಕರಣ , ಸ್ಟಾರ್ಟ್ ಅಪ್‌ಗಳು, ಭ್ರಷ್ಟಾಚಾರ ವಿರೋಧಿ, ಆಳವಾದ ಪರಸ್ಪರ ಅಪನಂಬಿಕೆ, ಶೀತಲ ಸಮರ, ಆಫ್ರಿಕನ್ ದೇಶಗಳ ನೈಸರ್ಗಿಕ ಸಂಪನ್ಮೂಲಗಳ ವಿವೇಚನಾರಹಿತ ಶೋಷಣೆ ಮತ್ತು ಆರ್ಥಿಕ ಅಸಮಾನತೆ, ದಕ್ಷಿಣ- ಉತ್ತರ ರಾಷ್ಟ್ರಗಳ ನಡುವಿನ ಅಪನಂಬಿಕೆಯನ್ನು ತಗ್ಗಿಸುವುದು ತೀರಾ ಕಷ್ಟಕರವಾದ ಕೆಲಸವಾಗಿತ್ತು.
ಆದರೆ, ಭಾರತ " ದಕ್ಷಿಣದ ಧ್ವನಿ" ಶೀರ್ಷಿಕೆಯಡಿಯಲ್ಲಿ 125 ಅಭಿವೃದ್ಧಿಶೀಲ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ ವರ್ಚುಯಲ್ ಸಭೆಯನ್ನು ಕರೆಯುವ ಮೂಲಕ ಬುದ್ಧಿವಂತಿಕೆಯಿಂದ ತನ್ನ ಅಧ್ಯಕ್ಷೀಯ ಅಧಿಕಾರಾವಧಿಯನ್ನು ಪ್ರಾರಂಭಿಸಿತು. ಈ ದೇಶಗಳ ಕಳವಳಗಳಿಗೆ ವೇದಿಕೆ ಕಂಡುಕೊಳ್ಳುವ ರೀತಿಯ ಮೊದಲ ಸಭೆ ಇದಾಗಿತ್ತು. ಭಾರತವು ಮೂರು ವಿಧಗಳಲ್ಲಿ ಸಭೆಗಳನ್ನು ಆಯೋಜಿಸಿತು. ಶೆರ್ಪಾ, ಫೈನಾನ್ಸ್ ಮತ್ತು ಎನ್‌ಜಿಒಗಳ ಮಾದರಿಯಲ್ಲಿ 230 ಕ್ಕೂ ಹೆಚ್ಚು ಸಭೆಗಳನ್ನು ನಡೆಸಿತು. 60 ಕ್ಕೂ ಹೆಚ್ಚು ನಗರಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳನ್ನು ಈ ಸಭೆಗಳು ಒಳಗೊಂಡಿದ್ದವು. ಇದರಲ್ಲಿ ಭಾರತೀಯರು ಸೇರಿದಂತೆ ಶಿಕ್ಷಣ ತಜ್ಞರು, ತಂತ್ರಜ್ಞರು, ವ್ಯಾಪಾರ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಅರ್ಥಶಾಸ್ತ್ರಜ್ಞರು, ಚಿಂತಕರು ಇದ್ದರು.