ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್ಎಚ್) ಧ್ರುವ್ ಎಂಕೆ 3 ಎಂಆರ್ ಅನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ವಿನ್ಯಾಸಗೊಳಿಸಿ, ದೇಶೀಯವಾಗಿ ನಿರ್ಮಿಸಿದೆ. ಈ ಕಾರ್ಯವನ್ನು ಭಾರತ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಗೆ ಬೆಂಬಲ ನೀಡಲು ಹೆಚ್ಎಎಲ್ ಕೈಗೆತ್ತಿಕೊಂಡಿತು. ಎಚ್ಎಎಲ್ ಈಗಾಗಲೇ ಯಶಸ್ವಿಯಾಗಿ ಡೆಕ್ ಆಪರೇಷನ್ ಸಾಮರ್ಥ್ಯಗಳು, ಅಂದರೆ ಡೆಕ್ ಮೇಲೆ ಭೂಸ್ಪರ್ಶ ಮಾಡುವುದು, ಬ್ಲೇಡ್ ಗಳನ್ನು ಮಡಿಸುವುದು ಹಾಗೂ ಹೆಲಿಕಾಪ್ಟರ್ ಅನ್ನು ಹ್ಯಾಂಗರ್ಗಳಲ್ಲಿ ಸಂಗ್ರಹಿಸುವುದನ್ನು ಸಾಬೀತುಪಡಿಸಿದೆ.
ಈ ಮೊದಲಿನ ಪರೀಕ್ಷಾ ಪ್ರಯೋಗಗಳು ಎಎಲ್ಎಚ್ ಧ್ರುವ್ ಹೆಲಿಕಾಪ್ಟರ್‌ನ ನೌಕೆಗಳಿಂದ ಕಾರ್ಯಾಚರಿಸುವ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಎಎಲ್ಎಚ್ ಧ್ರುವ್ ಕೈಗೊಂಡ ಪರೀಕ್ಷಾ ಕಾರ್ಯಾಚರಣೆಗಳಲ್ಲಿ ವೀಕ್ಷಣೆ, ಹುಡುಕಾಟ ಮತ್ತು ರಕ್ಷಣೆ, ತೈಲ ಸೋರಿಕೆ ಮಾಲಿನ್ಯ ನಿವಾರಣೆ, ಇತ್ಯಾದಿಗಳು ಸೇರಿವೆ. ಬ್ಲೇಡ್ ಫೋಲ್ಡಿಂಗ್, ಸ್ಟೋವೇಜ್ ಇತ್ಯಾದಿ ಸಾಮರ್ಥ್ಯಗಳನ್ನು ಸಾಬೀತುಪಡಿಸಿರುವ ಧ್ರುವ್ ಈಗ ಕಾರ್ಯಾಚರಣೆಗಿಳಿಯಲು ಸನ್ನದ್ಧವಾಗಿದೆ.
ಇಲೆಕ್ಟ್ರೋ ಆಪ್ಟಿಕಲ್ ಸೆನ್ಸರ್: ಧ್ರುವ್ ಎಂಕೆ 3 ಎಂಆರ್ ಅತ್ಯಾಧುನಿಕ ಸರ್ವಯಲೆನ್ಸ್ ರೇಡಾರ್ ಹೊಂದಿದ್ದು, ಇದು ರಾಷ್ಟ್ರದ ಗಡಿಯನ್ನು ಯಾವುದೇ ತೊಂದರೆ ಬರದಂತೆ ಕಾಯುವ ಕೋಸ್ಟ್ ಗಾರ್ಡ್‌ಗೆ ಬಹುತೇಕ 120 ನಾಟಿಕಲ್ ಮೈಲು ದೂರದಲ್ಲಿರುವ ಅಪಾಯಗಳ ಕುರಿತಾಗಿ ಮಾಹಿತಿ ನೀಡಬಲ್ಲದು. ಅದರೊಡನೆ ಎಎಲ್ಎಚ್ ಧ್ರುವ್‌ನಲ್ಲಿರುವ ಇಲೆಕ್ಟ್ರೋ ಆಪ್ಟಿಕಲ್ ಸೆನ್ಸರ್ ಅತ್ಯಂತ ಸಣ್ಣದಾದ ನೌಕೆಗಳನ್ನೂ 30 ನಾಟಿಕಲ್ ಮೈಲಿಗಿಂತಲೂ ಹೆಚ್ಚು ದೂರದಿಂದ ಗುರುತಿಸಬಲ್ಲದು. ಈ ಎಲ್ಲ ಕಾರಣಗಳಿಂದ ಎಎಲ್ಎಚ್ ಧ್ರುವ್ ಕೋಸ್ಟ್ ಗಾರ್ಡ್ ಸಾಮರ್ಥ್ಯ ಹೆಚ್ಚಿಸಲಿದೆ.