ಪ್ರತಿ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಏಡ್ಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲು, ಅದರ ವಿರುದ್ಧ ಹೋರಾಡಲು ಜನರನ್ನು ಪ್ರೇರೇಪಿಸಲು ಹಾಗೂ ಏಡ್ಸ್ ರೋಗದಿಂದ ಪ್ರಾಣ ಕಳೆದುಕೊಂಡವರನ್ನು ನೆನಪಿಸಿಕೊಳ್ಳುವ ಉದ್ದೇಶ ಹೊಂದಿದೆ. ಈ ರೋಗದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳೋಣ.
ವಿಶ್ವ ಏಡ್ಸ್ ದಿನ- 2021
ಪ್ರತಿವರ್ಷ ಒಂದು ಹೊಸ ಘೋಷವಾಕ್ಯದೊಂದಿಗೆ ಏಡ್ಸ್ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಈ ಬಾರಿ 'ಅಸಮಾನತೆಯನ್ನು ಕೊನೆಗೊಳಿಸಿ, ಏಡ್ಸ್ ಅನ್ನು ಕೊನೆಗೊಳಿಸಿ, ಮಹಾಮಾರಿಯನ್ನು ಕೊನೆಗೊಳಿಸಿ' (End inequalities. End AIDS. End pandemics) ಎಂಬ ಘೋಷವಾಕ್ಯವನ್ನು ಇಟ್ಟುಕೊಳ್ಳಲಾಗಿದೆ.
ಈ ಬಾರಿಯ ವಿಶ್ವ ಏಡ್ಸ್ ದಿನವು ಏಡ್ಸ್ ರೋಗಿಗಳ ಮತ್ತು ಸಾಮಾನ್ಯರ ನಡುವಿನ ಅಸಮಾನತೆಯನ್ನು ವಿಶ್ವದಾದ್ಯಂತ ಕೊನೆಗಾಣಿಸಬೇಕು ಮತ್ತು ಇತರ ರೋಗಗಳನ್ನೂ ಕೊನೆಗಾಣಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡಿದೆ. ಅಸಮಾನತೆಯನ್ನು ಕೊನೆಗಾಣಿಸಲು ದೃಢ ನಿರ್ಧಾರ ಕೈಗೊಳ್ಳದಿದ್ದರೆ, 2030ಕ್ಕೆ ಏಡ್ಸ್ ನಿರ್ಮೂಲನೆ ವಿಚಾರದಲ್ಲಿ ಇಟ್ಟುಕೊಂಡಿರುವ ಗುರಿಗಳನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯೂಹೆಚ್‌ಒ) ಅಂಕಿಅಂಶಗಳ ಪ್ರಕಾರ, 2020ರಲ್ಲಿ ಜಗತ್ತಿನಾದ್ಯಂತ ಹೊಸದಾಗಿ 15 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ವೇಳೆಗೆ ಒಟ್ಟು 3 ಕೋಟಿ 77 ಲಕ್ಷ ಮಂದಿ ಹೆಚ್ಐವಿ ಸೋಂಕಿನಿಂದ ಬಳಲುತ್ತಿದ್ದರು. ಇದರಲ್ಲಿ ಶೇಕಡಾ 73ರಷ್ಟು ಸೋಂಕಿತರು ಏಡ್ಸ್ಗಿರುವ ಆ್ಯಂಟಿ ರೆಟ್ರೋವೈರಲ್ ಚಿಕಿತ್ಸೆಯನ್ನು (ಎಆರ್‌ಟಿ) ಪಡೆದಿದ್ದಾರೆ.
ಏಡ್ಸ್ ಎಂದರೇನು?
ಏಡ್ಸ್ ಎಂಬುದು ಎಚ್ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಎಂಬ ವೈರಸ್ನಿಂದ ಬರುವ ಸೋಂಕಾಗಿದ್ದು, ದೇಹದ ರೋಗ ನಿರೋಧಕ ವ್ಯವಸ್ಥೆ ಮೇಲೆ ದಾಳಿ ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ದೇಹದ ರೋಗ ನಿರೋಧಕ ಶಕ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಬಿಳಿ ರಕ್ತಕಣಗಳಾದ CD4 cell (ಸಿಡಿ4 ಜೀವಕೋಶಗಳು) ಅಥವಾ T-cells (ಟಿ ಜೀವಕೋಶಗಳು) ಮೇಲೆ ದಾಳಿ ಮಾಡಿ, ಸೋಂಕಿತ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತವೆ. ಈ ರೀತಿಯಾಗಿ ಸಿಡಿ4 ಜೀವಕೋಶಗಳು ನಾಶವಾದಂತೆ ಸೋಂಕಿತ ವ್ಯಕ್ತಿ ತುಂಬಾ ದುರ್ಬಲನಾಗುತ್ತಾನೆ. ಇದು ಶೇಕಡಾ 20ರಷ್ಟು ಮಾರಣಾಂತಿಕವಾಗಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.